ಮಂಗಳೂರು,ಸೆ.29: ನಗರದ ಸ್ಟೇಟ್‍ಬ್ಯಾಂಕ್ ಬಳಿ ರಿಕ್ಷಾ ಚಾಲಕರೊಬ್ಬರು ಕ್ಷುಲ್ಲಕ ಹಣದ ವಿಚಾರಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಿನ್ನೆ ಜಿಲ್ಲಾಧಿಕಾರಿ ಕಚೇರಿ ಆವರಣದ ಕಟ್ಟಡದೊಳಗೆ ಸಂಭವಿಸಿದೆ.ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ರಿಕ್ಷಾ ಚಾಲಕರನ್ನು ಕಂದುಕ ನಿವಾಸಿ ಸುಧಾಕರ ಶೆಟ್ಟಿ(49) ಎಂದು ಗುರುತಿಸಲಾಗಿದೆ.
ಸುಧಾಕರ್ ತಾನಿದ್ದ ರಿಕ್ಷಾ ನಿಲ್ದಾಣಗಳಲ್ಲಿ ಕಳೆದ ಕೆಲ ವರ್ಷಗಳಿಂದ ಸ್ಕೀಂ ನಡೆಸುತ್ತಿದ್ದರು. ಅದಕ್ಕೆ ಇತರ ಚಾಲಕರು ದಿನಕ್ಕೆ 20ರೂಪಾಯಿಯಂತೆ ಕಟ್ಟುತ್ತಿದ್ದರು. ರಿಕ್ಷಾ ಚಾಲಕರ ಮನೆ ಮಂದಿ ನಡೆಸುವ ಕಷ್ಟದ ಜೀವನದ ಅರಿವಿದ್ದ ಸುಧಾಕರ್ ಪ್ರತೀ ದಸರಾದ ಸಂದರ್ಭದಲ್ಲಿ ಅವರು ಕಟ್ಟಿರುವ ಹಣವನ್ನು ಹಿಂತಿರುಗಿಸುತ್ತಿದ್ದರು ಎನ್ನಲಾಗಿದೆ. ಅದರಂತೆ ಈ ಬಾರಿಯ ದಸರಾಗೆ ಹಿಂತಿರುಗಿಸಬೇಕಾದ ಹಣವನ್ನು ಯಾರೋ ಕಳ್ಳರು ದೋಚಿದ್ದರು ಎಂದು ಹೇಳಲಾಗುತ್ತಿದೆ.
ತನ್ನ ಸ್ಕೀಂಗೆ ಕಟ್ಟಿದ್ದವರ 2.78ಲಕ್ಷ ಹಣವನ್ನು ಮೂರು ತಿಂಗಳಿಂದ ತನ್ನ ಕೈಯಲ್ಲೇ ಇಟ್ಟುಕೊಂಡಿದ್ದ ಸುಧಾಕರ್ ಅವರನ್ನು ಮೂವರು ಅಪರಿಚಿತರು ಬಾಡಿಗೆ ನೆಪ ಹೇಳಿ ಯೆಯ್ಯಾಡಿ ಬಳಿ ಕರೆದುಕೊಂಡು ಹೋಗಿ ಹಣವನ್ನು ದೋಚಿದ್ದರು ಎಂದು ಶನಿವಾರ ರಾತ್ರಿ ಸುಧಾಕರ್, ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಫ್.ಐ.ಆರ್ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸುವಷ್ಟರಲ್ಲೇ ತಾನು ಕೊಡಬೇಕಾದ ಹಣ ಹಿಂತಿರುಗಿಸದಿದ್ದಲ್ಲಿ ಜನ ಏನಂದುಕೊಂಡಾರೋ ಎಂಬ ಅನು`ಮಾನ’ಕ್ಕೆ ಅಂಜಿದ ರಿಕ್ಷಾ ಚಾಲಕ ಸುಧಾಕರ್ ನಿನ್ನೆ ಪೂರ್ವಾಹ್ನ 10ರ ಸುಮಾರಿಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲ್ಲಿ ತೆರೆದಿದ್ದ ಕೊಠಡಿಯೊಂದಕ್ಕೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪರರ ಕಷ್ಟಕ್ಕೆ ಸ್ಪಂದಿಸಿ, ಇತರರಿಗೆ ಬುದ್ದಿಮಾತು ಹೇಳುತ್ತಿದ್ದ ಸುಧಾಕರ ಶೆಟ್ಟಿಯ ಆತ್ಮಹತ್ಯೆ ರಿಕ್ಷಾ ಚಾಲಕರನ್ನು ದಂಗು ಬಡಿಸಿದೆ. ಛೆ, ಕೋಟಿ ಕೋಟಿ ಲೂಟಿದವರು ಆರಾಮವಾಗಿದ್ದಾರೆ, ಕ್ಷುಲ್ಲಕ ಹಣದ ವಿಚಾರಕ್ಕೆ ಸುಧಾಕರ ಆತ್ಮಹತ್ಯೆ ಮಾಡಿಕೊಳ್ಳಬಾರದಿತ್ತು ಎಂಬ ಅನುಕಂಪದ ಮಾತುಗಳು ರಿಕ್ಷಾ ಚಾಲಕರ ಬಳಗದಿಂದ ಕೇಳಿ ಬಂದಿದೆ. ಪ್ರಕರಣ ಪಾಂಡೇಶ್ವರ ಠಾಣೆಯಲ್ಲಿ ದಾಖಲಾಗಿದೆ.