ಮಂಗಳೂರು,ಸೆ.29: `ಲವ್‍ಜಿಹಾದ್ ಮತ್ತು ಮತಾಂತರ’ದ ವಿರುದ್ಧ ರಾಷ್ಟ್ರೀಯ ಹಿಂದೂ ಆಂದೋಲನ ಅಶ್ರಯದಲ್ಲಿ ಬೃಹತ್ ಪ್ರತಿಭಟನಾ ಸಭೆ ರವಿವಾರ ನಗರದ ಜಿಲ್ಲಾಧಿಕಾರಿ ಮುಂಭಾಗದಲ್ಲಿ ನಡೆಯಿತು.
ಪ್ರತಿಭಟನಕಾರರನ್ನುದ್ದೇಶಿಸಿ ರಾಷ್ಟ್ರೀಯ ಹಿಂದೂ ಆಂದೋಲನದ ಪ್ರಧಾನ ಕಾರ್ಯದರ್ಶಿ ಉಪೇಂದ್ರ ಆಚಾರ್ಯ ಅವರು ಮಾತನಾಡಿ `ಲವ್ ಜಿಹಾದ್‍ನಿಂದ ಹಲವಾರು ಹಿಂದೂ ಯುವತಿಯರು ನರಳುತ್ತಿದ್ದಾರೆ. ದೇಶದಲ್ಲಿ ಪ್ರತೀ ವರ್ಷಕ್ಕೆ ಒಂದೂವರೆ ಲಕ್ಷದಷ್ಟು ಹಿಂದೂ ಯುವತಿಯರು ಮತಾಂಧರ `ಲವ್‍ಜಿಹಾದ್’ ನಾಟಕಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ ಯುವತಿಯರು ಮತಾಂಧರ ವಂಚನೆಗೆ ಬಲಿಯಾಗಬಾರದು ಎಂದು ಕರೆ ನೀಡಿದರು.
ಇದೇ ರೀತಿ ಲವ್ ಜಿಹಾದ್‌ಗೆ ಸಿಲುಕಿ ಈ ಹಿಂದೆ ಆಶಾ ಎಂಬ ಹೆಸರಿನಲ್ಲಿ ಬದುಕುತ್ತಿದ್ದ ಯುವತಿ ಮುಸ್ಲಿಮರಿಂದ ಮತಾಂತರಗೊಂಡು ಆಯಿಷಾ ಆಗಿ ಬದಲಾಗಿ, ಇದೀಗ ಭಯೋತ್ಪಾದಕಿ ಎಂಬ ಹಣೆ ಪಟ್ಟಿಕಟ್ಟಿಕೊಂಡು ಜೈಲು ಪಾಲಾಗಿದ್ದಾಳೆ. ಪಂಜಿಮೊಗೆರಿನ ಆಯಿಷಾಬಾನು ಪ್ರಕರಣದಲ್ಲಿ ಆಯಿಷಾ ಮೊದಲು ಆಶಾ ಎಂಬ ಹಿಂದೂ ಯುವತಿಯಾಗಿದ್ದಾಕೆ. ಆಕೆಯನ್ನು `ಲವ್‍ಜಿಹಾದ್’ ಹೆಸರಿನಲ್ಲಿ ಮರುಳು ಮಾಡಿ ಮತಾಂತರಿಸಿದ್ದ ನಂತರ ಆಕೆಗೆ ಉಗ್ರವಾದದ ತರಬೇತಿ ನೀಡಿ ಇದೀಗ ಆಯಿಷಾ ಭಯೋತ್ಪಾದಕರ ಜೊತೆಗಿನ ಸಂಬಂಧ ಮತ್ತು ಹವಾಲಾ ಹಗರಣದಿಂದ ಜೈಲು ಪಾಲಾಗುವಂತೆ ಮಾಡಲಾಗಿದೆ ಎಂದರು.
ದೇಶದ ರಾಜಧಾನಿ ದೆಹಲಿಯಲ್ಲೇ ವರ್ಷಂಪ್ರತಿ 15 ಸಾವಿರ ಹಿಂದೂ ಯುವತಿಯರು ಮತಾಂಧರ ದಾಳಕ್ಕೆ ಬಲಿಯಾಗುತ್ತಿದ್ದಾರೆ. ಹಿಂದೂ ಯುವತಿಯರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಯುವತಿಯರಿಗೆ ಕಿವಿಮಾತು ಹೇಳಿದ ಉಪೇಂದ್ರ ಆಚಾರ್ಯ ಅವರು, ಸರ್ಕಾರ ಕೂಡಲೇ ಲವ್ ಜಿಹಾದ್ ತಡೆಯಲು ಕಠಿಣ ಕಾನೂನು ಕ್ರಮ ರೂಪಿಸಬೇಕು ಎಂದು ಆಗ್ರಹಿಸಿದರು.