ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ದಲಿತ ಮಹಿಳೆಯರಿಬ್ಬರನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ಮಹಿಳೆಯರಿಬ್ಬರ ಪಾದಪೂಜೆ ಮಾಡಿ ನಂತರ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಯ ತತ್ವದ ಪ್ರಕಾರ ದೇವಸ್ಥಾನದಲ್ಲಿ ದೇವರ ಪೂಜೆ ಮಾಡಲು ಅವಕಾಶ ಕಲ್ಪಿಸಲಾಯಿತು.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು, ನಾರಾಯಣ ಗುರುಸ್ವಾಮಿಗಳ ಆದೇಶದಂತೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿಯ ದಲಿತ ಮಹಿಳೆಯರಿಬ್ಬರನ್ನು ಅರ್ಚಕರನ್ನಾಗಿ ನೇಮಿಸಲಾಗಿದೆ. ಉರ್ವಾ ಚಿಲಿಂಬಿಯ ನಿವಾಸಿ ಲಕ್ಷ್ಮೀ (65) ಮತ್ತು ಕುತ್ತಾರ್ ನಿವಾಸಿ ಚಂದ್ರಾವತಿ (46) ಎಂಬವರನ್ನು ದೇವಸ್ಥಾನದಲ್ಲಿ ಅರ್ಚಕರನ್ನಾಗಿ ನಿಯೋಜಿಸಲಾಗಿದೆ ಎಂದರು.
ನಾವೆಲ್ಲ ದೇವರ ಮಕ್ಕಳು. ಜಾತಿ ಮತವನ್ನು ನೋಡದೆ ಪರಮಾತ್ಮನ ಪೂಜೆ ಮಾಡಲು ಅರ್ಹರು. ಹೀಗಾಗಿ ದೇವರ ಸೇವೆ ಮಾಡಲು ಮುಂದೆ ಬಂದ ಗಂಡನನ್ನು ಕಳೆದುಕೊಂಡ ವಿಧವೆಯರಿಬ್ಬರನ್ನು ಗುರುಸ್ವಾಮಿಯ ತತ್ವದ ಪ್ರಕಾರ ನಾವಿಲ್ಲ್ಲಿ ಸ್ವಚ್ಛ ನೆಲದಲ್ಲಿ ನಿರ್ಮಲತೆಯನ್ನು ಕಾಪಾಡಿಕೊಂಡು ಭಕ್ತಿಯಿಂದ ದೇವಸ್ಥಾನದಲ್ಲಿ ಪೂಜೆಗೈಯಲು ಅವಕಾಶ ಒದಗಿಸಿದ್ದೇವೆ ಎಂದರು.
ಇದಕ್ಕೆ ಸಮುದಾಯದಿಂದ ವಿರೋಧ ಇಲ್ಲವೇ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವಿರೋಧ ವ್ಯಕ್ತಪಡಿಸುವವರಿಗೆ ಗುರುಗಳನ್ನು ಆರಾಧಿಸುವ ಅಥವಾ ಕೈ ಮುಗಿಯುವ ಅರ್ಹತೆಯೂ ಇಲ್ಲ ಎಂದರು. ಈ ಹಿಂದೆ ಬಿಲ್ಲವರಿಗೆ ದೇವಸ್ಥಾನಗಳಿಗೆ ಪ್ರವೇಶ ಇರಲಿಲ್ಲ. ಬಾವಿಯಿಂದ ನೀರು ಸೇದುವಂತಿರಲಿಲ್ಲ. ಅಸ್ವ್ರಸ್ಯರಂತೆ ಕಾಣುತ್ತಿದ್ದರು ಎಂದು ಪೂಜಾರಿ ನೆನಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿ ಕಮಿಟಿ ಅಧ್ಯಕ್ಷರಾದ ಜಯ ಸಿ.ಸುವರ್ಣ, ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕೋಶಾಧಿಕಾರಿ ಪದ್ಮರಾಜ್.ಆರ್, ಸಮಿತ್ತಿ ಸದಸ್ಯ ಹರಿಕೃಷ್ಣ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು.