ಬೆಂಗಳೂರು, ಸೆ.30: ನವರಾತ್ರಿ ಸಂದರ್ಭದಲ್ಲೇ ಸಪ್ತ ಭ್ರಷ್ಟರನ್ನು ಬೇಟೆಯಾಡಿರುವ ಲೋಕಾಯುಕ್ತ ಪೊಲೀಸರು ಅಪಾರ ಪ್ರಮಾಣದ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ. ಎಆರ್‍ಟಿಓ ಗಂಗಾಧರಯ್ಯ, ಕೆಯುಡಬ್ಲ್ಯೂಎಸ್‍ಎಸ್‍ಬಿ ಮುಖ್ಯ ಅಭಿಯಂತರ ಬಿ.ತಿಮ್ಮೇಗೌಡ, ಟೌನ್‍ಪ್ಲ್ಯಾನಿಂಗ್ ಜಂಟಿ ನಿರ್ದೇಶಕ ಮಲ್ಲಿಕಾಜುನಸ್ವಾಮಿ, ವಸತಿ, ಶಿಕ್ಷಣ ಸಮಿತಿಗಳ ಸಂಘದ ಕಾರ್ಯಕಾರಿ ಅಧಿಕಾರಿ ಶ್ರೀನಿವಾಸ್, ಉಪ ಪರಿಸರ ಅಧಿಕಾರಿ ಡಿ.ಡಿ.ಮಹೇಂದ್ರ, ರೇಷ್ಮೆ ಇಲಾಖೆ ಉಪನಿರ್ದೇಶಕ ಶಾಂತರಾಜು ಹಾಗೂ ಉಡುಪಿ ಡಿವೈಎಸ್‍ಪಿ ಪ್ರಭುದೇವ್ ಬಲೆಗೆ ಬಿದ್ದ ಭ್ರಷ್ಟರು.
ಮಂಡ್ಯ ರೇಷ್ಮೆ ಇಲಾಖೆ ಉಪನಿರ್ದೇಶಕರಾಗಿರುವ ಶಾಂತರಾಜು ಅವರ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಮನೆ ಹಾಗೂ ಮಂಡ್ಯದ ಮರೀಗೌಡ ನಿವಾಸಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಮಂಡ್ಯ ಲೋಕಾಯುಕ್ತ ಎಸ್ಪಿ ನೇತೃತ್ವದ ತಂಡ ದಾಖಲಾತಿಗಳನ್ನು ಪರಿಶೀಲಿಸಿ ಸಂಪಾದನೆಗಿಂತ ಹೆಚ್ಚು ಆಸ್ತಿ ಹೊಂದಿರುವುದನ್ನು ಬಯಲು ಮಾಡಿದೆ.
ಎಸ್ಪಿ ಸದಾನಂದ ನೇತೃತ್ವದ ಲೋಕಾಯುಕ್ತ ಪೊಲೀಸರ ತಂಡ ಉಡುಪಿ ಡಿವೈಎಸ್‍ಪಿ ಪ್ರಭುದೇವ್ ಅವರ ಬ್ರಹ್ಮಗಿರಿ ಅಪಾರ್ಟ್‍ಮೆಂಟ್ ನಿವಾಸ ಹಾಗೂ ಹುಬ್ಬಳ್ಳಿಯ ಅಬಕಾರಿ ಕಾಲೋನಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದೆ. ಇನ್ನು ರಾಜಧಾನಿಯಲ್ಲಿ ಎಸ್ಪಿ ಮಹೇಶ್ ನೇತೃತ್ವದ ತಂಡ ಎಆರ್‍ಟಿಓ ಗಂಗಾಧರಯ್ಯ, ಬಿಬಿಂಎಪಿ ಟೌನ್‍ಪ್ಲ್ಯಾನಿಂಗ್ ವಿಭಾಗದ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಕೆಯುಡಬ್ಲ್ಯೂಎಸ್‍ಎಸ್‍ಬಿ ಚೀಫ್ ಎಂಜಿನಿಯರ್ ತಿಮ್ಮೇಗೌಡ, ವಸತಿ, ಶಿಕ್ಷಣ ಸಮಿತಿಗಳ ಸಂಘದ ಅಧಿಕಾರಿ ಶ್ರೀನಿವಾಸ್ ಹಾಗೂ ಉಪ ಪರಿಸರ ಅಧಿಕಾರಿ ಡಿ.ಡಿ.ಮಹೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆಸಿದೆ.