ಮಂಗಳೂರು,ಸೆಪ್ಟಂಬರ್.ನ.1: ಮಂಗಳೂರಿನ ಹೊರವಲಯದ ಪಿಲಿಕುಳದಲ್ಲಿ ಸುಮಾರು 11 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿರುವ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆಯ ರಾಜ್ಯ ಸಚಿವ ಶ್ರೀಪಾದ ನಾಯಕ್ ಅವರು ಲೋಕಾರ್ಪಣೆಗೈದರು.
ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು, ಮೌಢ್ಯತೆ, ಕಂದಾಚಾರಗಳಿಂದ ಸಮಾಜ, ದೇಶದ ಉದ್ಧಾರ ಸಾಧ್ಯವಿಲ್ಲ. ಬದಲಾಗಿ ವಿಜ್ಞಾನ ಮನೆ ಮನೆಗೆ ತಲುಪಿದಾಗ ಮಾತ್ರ ರಾಷ್ಟ್ರದ ಸಮಗ್ರ ಪ್ರಗತಿ ಸಾಧ್ಯ ಎಂದು ಹೇಳಿದರು.
ಇಂದಿನ ಸಮಾಜದ ಬೆಳವಣಿಗೆಗೆ ವಿಜ್ಞಾನ, ತಂತ್ರಜ್ಞಾನ ಅತ್ಯಗತ್ಯ. ಈ 21 ನೇ ಶತಮಾನ ವಿಜ್ಞಾನದ ಯುಗ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಾಗ, ಪ್ರತಿಯೊಬ್ಬರಲ್ಲಿ ವಿಜ್ಞಾನದ ಬಗ್ಗೆ ಜಾಗೃತಿ ಮೂಡಿದಾಗ ದೇಶ ಪ್ರಗತಿಯ ಪಥದಲ್ಲಿ ಸಾಗಲು ಸಾಧ್ಯ. ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ಸಮಾಜ ಕೂಡಾ ಸಾಗಬೇಕು. ಅಭಿವೃದ್ಧಿಯ ದೃಷ್ಟಿಯಿಂದ ಇದು ಅನಿವಾರ್ಯ ಕೂಡಾ ಎಂದು ಅವರು ತಿಳಿಸಿದರು.
ಬಸವಾದಿ ಶರಣರು ಅನೇಕ ವರ್ಷಗಳ ಹಿಂದೆಯೇ ಇಂತಹ ಒಂದು ತತ್ವವನ್ನು ಪ್ರತಿಪಾದಿಸಿದ್ದರು. ಇಂದು ವಿಜ್ಞಾನ ಬೆಳೆಯುತ್ತಿದ್ದರೂ ಅದರ ಜತೆಗೆ ಮೂಢನಂಬಿಕೆಯೂ ಸಾಗುತ್ತಿದೆ. ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮೂಢನಂಬಿಕೆಗಳಿಗೆ ನೀರೆರೆದು ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಜನರಲ್ಲಿ ಮೂಢನಂಬಿಕೆಗಳನನ್ನು ಕಿತ್ತು ಹಾಕಲು ಸಂವಿಧಾನದಲ್ಲೇ ತಿದ್ದುಪಡಿಯನ್ನು ಮಾಡಲಾಗಿತ್ತು. ಆದರೂ ಮೌಢ್ಯ, ಕಂದಾಚಾರದಲ್ಲೇ ಸಮಾಜ ಮುಂದುವರಿಯುತ್ತಿದೆ. ಇದು ಬದಲಾಗಬೇಕಿದೆ ಎಂದ ಅವರು, ಪ್ರತತಿಯೊಂದು ಆಚಾ ವಿಚಾರಗಳನ್ನು ಪ್ರಶ್ನಿಸುವ ಮನೋಭಾವವನ್ನು ಬೆಳೆಸಿಕೊಂಡಾಗ ಮೂಢನಂಬಿಕೆಯಿಂದ ಹೊರ ಬರಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಭಾರತೀಯ ವಿಜ್ಞಾನಿಗಳ ಅಪೂರ್ವ ಸಾಧನೆ :
ಅತೀ ಕಡಿಮೆ ವೆಚ್ಚದಲ್ಲಿ ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾಗಿ ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ ಭಾರತೀಯ ವಿಜ್ಞಾನಿಗಳ ಸಾಧನೆ ನಿಜಕ್ಕೂ ಶ್ಲಾಘನೀಯ. ದೇಶದಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳಿದ್ದರೂ ವಿಜ್ಞಾನಿಗಳು ಮಾಡಿರುವ ಸಾಧನೆ ಬಹಳಷ್ಟು ಅಪೂರ್ವ ಎಂದು ಸಿದ್ಧರಾಮಯ್ಯ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಶೇ.100 ರಷ್ಟು ಅಕ್ಷರಸ್ಥ ಜಿಲ್ಲೆಯಾಗಿದ್ದರೂ ಅಲ್ಲಲ್ಲಿ ಕಂದಾಚಾರಗಳು ನಡೆಯುತ್ತಿದೆ. ಆದುದರಿಂದ ಈ ಜಿಲ್ಲೆ ವಿಜ್ಞಾನದಲ್ಲೂ ಶೇ.100 ರಷ್ಟು ಸಾಕ್ಷರತಾ ಜಿಲ್ಲೆಯಾಗಬೇಕು ಎಂದು ಅವರು ತಿಳಿಸಿದರು. ಕೇವಲ ವೈದ್ಯರು, ಇಂಜಿನೀಯರ್‍ಗಳಿಂದ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ. ಇದಕ್ಕೆ ವಿಜ್ಞಾನಿಗಳ ಕೊಡುಗೆಯೂ ಬೇಕು. ಆದುದರಿಂದ ಮೂಲ ವಿಜ್ಞಾನವನ್ನು ಮಕ್ಕಳಿಗೆ ಕಲಿಸಲು ಹೆತ್ತವರು ಉತ್ಸುಕರಾಗಬೇಕು ಎಂದರು.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರ
ದೇಶದ 48 ಕಡೆಗಳಲ್ಲಿ ಪ್ರಾದೇಶಿಕ ವಿಜ್ಞಾನ ಕೇಂದ್ರಗಳನ್ನು ತೆರೆಯಲು ಕೇಂದ್ರ ಸರಕಾರ ಯೋಜಿಸಿದ್ದು, ಪಿಲಿಕುಳದ ವಿಜ್ಞಾನ ಕೇಂದ್ರ ದೇಶದ 4 ನೇ ಮತ್ತು ಮೈಸೂರಿನ ಕೇಂದ್ರ 5ನೇಯದ್ದಾಗಿರುತ್ತದೆ. ಈ ನಿಟ್ಟಿನಲ್ಲಿ ಸರಕಾರ ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಬಗ್ಗೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಲ್ಲಿ ಕೇಂದ್ರದ ಅನುಮತಿ ನೀಡಲಾಗುವುದು ಎಂದು ಕೇಂದ್ರ ಸಂಸ್ಕೃತಿ ಮತ್ತು ವಿಜ್ಞಾನ ಸಚಿವ ಶ್ರೀಪಾದ ನಾಯ್ಕ್ ತಿಳಿಸಿದರು.
ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ (ಎನ್‌ಸಿಎಸ್‌ಎಂ) ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಈ ಪ್ರಾದೇಶಿಕ ವಿಜ್ಞಾನ ಕೇಂದ್ರವನ್ನು ಅಭಿವೃದ್ಧಿ ಪಡಿಸಿದ್ದು, 8.50 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಮಾನ ಪಾಲುದಾರಿಕೆ ಇದೆ. ಅಲ್ಲದೆ ರಾಜ್ಯ ಸರಕಾರ 2 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಒದಗಿಸಿದೆ.
ಇದು ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯಗಳ ಪರಿಷತ್ತಿನ ಪರಿಕಲ್ಪನೆ ಮತ್ತು ವಿನ್ಯಾಸಗಳಿಂದ ಅಭಿವೃದ್ಧಿ ಪಡಿಸಲಾಗಿರುವ ದೇಶದ 45ನೇ ಪ್ರಾದೇಶಿಕ ವಿಜ್ಞಾನ ಕೇಂದ್ರವಾಗಿರುತ್ತದೆ. ಪ್ರದರ್ಶಿಕೆಗಳು ಮತ್ತು ಚಟುವಟಿಕೆಗಳು ಎಂಬ ಎರಡು ರೀತಿಯ ಕಾರ್ಯತಂತ್ರಗಳಿಂದ ವಿಜ್ಞಾನವನ್ನು ಪ್ರಸಾರ ಮಾಡಲಿದೆ. 4,000 ಚ.ಮೀ. ಜಾಗದಲ್ಲಿ ಜೀವ ವೈವಿಧ್ಯ, ಮುಂಚೂಣಿ ತಂತ್ರಜ್ಞಾನ ಮತ್ತು ಮೋಜಿನ ವಿಜ್ಞಾನ ಎಂಬ ಮೂರು ಶಾಶ್ವತ ಪ್ರದರ್ಶನಾಲಯಗಳಿರುತ್ತವೆ. ‘ಪ್ಲಾನೆಟ್ ಅಂಡರ್ ಪ್ರಶರ್’ ಎಂಬ ತಾತ್ಕಾಲಿಕ ಪ್ರದರ್ಶನಾಲಯವೂ ಇರುತ್ತದೆ. 3ಡಿ ಪ್ರದರ್ಶನಾಲಯ, ತಾರಾ ಮಂಡಲ, ದೃಶ್ಯ- ಶ್ರವಣ ಸಾಧನಗಳ ಸೌಲಭ್ಯವಿರುವ ಹವಾ ನಿಯಂತ್ರಿತ ಸಭಾಂಗಣ, ವಿಜ್ಞಾನ ಪ್ರಾತ್ಯಕ್ಷಿಕೆಗಳ ವಿಭಾಗ, ಸೃಜನಾತ್ಮಕ ಕಲಿಕಾ ಕೇಂದ್ರ ಗ್ರಂಥಾಲಯ, ಆಕಾಶ ವೀಕ್ಷಣೆಗೆ ದೂರದರ್ಶಕ ಮತ್ತು ವಿಜ್ಞಾನ ಉದ್ಯಾನವನ ಇತ್ಯಾದಿಗಳಿರುತ್ತವೆ.
ಇಲ್ಲಿನ ಉದ್ಯಾನವನವು 4 ಎಕರೆ ಜಾಗದಲ್ಲಿ ಹರಡಿದೆ. ಜೀವ ವೈವಿಧ್ಯ ಪ್ರದರ್ಶನಾಲಯವು ದೇಶದ ಏಕೈಕ ಪ್ರದರ್ಶನಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ತಾರಾಲಯವು ಒಂದು ವರ್ಷದೊಳಗೆ ವೀಕ್ಷಣೆಗೆ ಸಿದ್ಧವಾಗಲಿದೆ.
ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಎಸ್.ಆರ್.ಪಾಟೀಲ್, ಬಿ.ರಮಾನಾಥ ರೈ, ಯು.ಟಿ.ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಶಕುಂತಳಾ ಶೆಟ್ಟಿ, ಮೊಯಿದ್ದೀನ್ ಬಾವಾ, ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಐವನ್ ಡಿ’ಸೋಜಾ, ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ಸದಸ್ಯೆ ಯಶವಂತಿ ಆಳ್ವಾ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಮಂಗಳೂರು ಮಹಾನಗರಪಾಲಿಕೆ ಮೇಯರ್ ಮಹಾಬಲ ಮಾರ್ಲ, ಉಪಮೇಯರ್ ಶ್ರೀಮತಿ ಕವಿತಾ, ತಾಲೂಕು ಪಂಚಾಯತ್ ಸದಸ್ಯ ಹರೀಶ್ ಕುಮಾರ್, ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಂಭವಿ, ವಿಜ್ಞಾನ ವಸ್ತುಸಂಗ್ರಹಾಲಯದ ರಾಷ್ಟ್ರೀಯ ಮಂಡಳಿಯ ಅಧ್ಯಕ್ಷ ಆರ್.ಸಿ.ಸೋಪ್ತಿ, ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಪ್ರಭಾಕರ ಶರ್ಮ, ನಿರ್ದೇಶಕ ಡಾ| ಕೆ.ವಿ. ರಾವ್, ಹೆಚ್.ಜೆ.ಭಂಡಾರಿ, ಕೆ.ಜೆ.ಕುಮಾರ್, ಹೊನ್ನೇ ಗೌಡ ಮೊದಲಾದವರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಸ್ವಾಗತಿಸಿದರು. ಶಾಸಕ ಜೆ.ಆರ್.ಲೋಬೋ ಪ್ರಸ್ತಾವನೆಗೈದರು. ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.