ಕರ್ನಾಟಕ ಇತಿಹಾಸ ಅಕಾಡೆಮಿಯ 28 ನೆಯ ವಾರ್ಷಿಕ ರಾಷ್ಟ್ರೀಯ ಸಮ್ಮೇಳನದ ಎರಡನೆಯ ದಿನ 27-9-201 4 ರಂದು ಬೆಳ್ಳಾರೆಯ ಸರ್ಕಾರಿ ಪದವಿಪೂರ್ವ ಕಾಲೇಜ್ ನ ಕನ್ನಡ ಉಪನ್ಯಾಸಕಿ ಡಾ.ಲಕ್ಷ್ಮೀ ಜಿ ಪ್ರಸಾದ ಅವರು “ಕಾಸರಗೋಡು ಜಿಲ್ಲೆಯ ಕೋಳ್ಯೂರಿನ ಅಪ್ರಕಟಿತ ಶಾಸನ ಹಾಗೂ ಇತರ ಐತಿಹಾಸಿಕ ವಿಚಾರಗಳು”ಎಂಬ ಸಂಶೋಧನಾ ಪ್ರಬಂಧವನ್ನು ಮಂಡಿಸುತ್ತಾ ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ಶ್ರೀ ಶಂಕರ ನಾರಾಯಣ ದೇವಾಲಯಕ್ಕೆ 600 ವರ್ಷಕ್ಕೂ ಮಿಗಿಲಾದ ಪ್ರಾಚೀನತೆ ಹಾಗೂ ಇತಿಹಾಸ ಪರಂಪರೆ ಇದೆ”ಎಂದು ನುಡಿದರು.
ಶ್ರೀ ಶಂಕರನಾರಾಯಣ ದೇವಾಲಯದ ವೈಶಿಷ್ಟತೆ ಬಗ್ಗೆ ವಿವರಿಸುತ್ತಾ ಗುಡಿಯ ಹೊರಭಾಗದಲ್ಲಿ ಮಂದ್ರಾಯ ದೈವದ ಸಣ್ಣ ಗುಡಿಯಿದೆ. ಈ ದೈವದ ಬಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ .ಬಹುಶ ಈ ಮಂದಿರವನ್ನು ಕಟ್ಟಿದ ರಾಜನೇ ಮಂದಿರಾಯ ಇರಬೇಕು .ದೇವಾಲಯದ ಎದುರು ಭಾಗದಲ್ಲಿನ ಗಣಪತಿ ವಿಗ್ರಹದ ಹಿಂಭಾಗದಲ್ಲಿ ಒಂದು ಅರ್ಧ ಅಡಿ ಎತ್ತರದ ಬಿಲ್ಲು ಬಾಣ ಹಿಡಿದ ಕಂಚಿನ ವಿಗ್ರಹವಿತ್ತು .ದೇವಾಲಯವನ್ನು ಕಟ್ಟಿಸಿದ ಅರಸುವಿನ ವಿಗ್ರಹ ಸ್ಥಾಪನೆ ಹಾಗೂ ದೈವದ ನೆಲೆಯಲ್ಲಿ ಆತನಿಗೆ ಆರಾಧನೆ ಇರುವುದು ತುಳುನಾಡಿನ ದೇವಾಲಯಗಳಲ್ಲಿ ಕೆಲವೆಡೆ ಕಂಡು ಬರುತ್ತದೆ .ಆದ್ದರಿಂದ ಇದು ಮಂದಿರವನ್ನು ಕಟ್ಟಿದ ರಾಜನ ವಿಗ್ರಹವಾಗಿದ್ದಿರಬಹುದು. ಇದು ತೋಳಂಭಟನ ಮೂರ್ತಿ ಎಂಬ ಅಭಿಪ್ರಾಯವೂ ಇದೆ .ತೋಳಂಭಟನ ಕುರಿತಾದ ಒಂದು ಐತಿಹ್ಯ ಪ್ರಚಲಿತವಿದೆ . ತೋಳಂಭಟ ಎನ್ನುವ ಮಂತ್ರವಾದಿ ದೇವರ ಬಲಿ ಹೊರಡದಂತೆ ತಡೆಯುತ್ತಾನೆ .ಆಗ ಅವನನ್ನು ಎಳೆದು ತರುವಂತೆ ದೇವರ ಅಪ್ಪಣೆಯಾಗುತ್ತದೆ .ಅವನು ಬರಲು ಒಪ್ಪುವುದಿಲ್ಲ .ಆಗ ಅವನಿಗೆ ಎರಡೇಟು ಕೊಟ್ಟು ಎಳೆದು ತರುತ್ತಾರೆ .ದಾರಿ ನಡುವೆ ಆತ ಸಾಯುತ್ತಾನೆ .ಮುಂದೆ ಅವನ ಉಪದ್ರ ಕಾಣಿಸಿದ್ದಕ್ಕೆ ಆತನ ವಿಗ್ರಹ ಮಾಡಿ ಆರಾಧಿಸುತ್ತಾರೆ ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಅವರು ತಿಳಿಸಿದರು.
ಸೂರಾಲಿನ ಕ್ರಿ ಶ 1435 ರ ಡಿಸೆಂಬರ್ ನಾಲ್ಕರಂದು ಬರೆಸಲಾದ ದೇವರಾಯನ ಶಾಸನ ದಲ್ಲಿ ಸುಂಕಗಳನ್ನು ವಸೂಲಿ ಮಾಡುವ ಅಧಿಕಾರವನ್ನು ತೊಳಹ ಶಂಕರ ನಾಯಕನಿಗೆ ವಹಿಸಿದ್ದು ತಿಳಿದು ಬರುತ್ತದೆ.ಹೀಗೆ ಸುಂಕ ವಸೂಲಿಗೆ ತೊಳಹ ಶಂಕರ ನಾಯಕ ನಿಯೋಜಿಸಿದ ತೊಳಹರ ಭಟ ಈತ.ಸುಂಕ ನೀಡದೆ ಇದ್ದುದಕ್ಕಾಗಿ ಅಥವಾ ಇನ್ನೇನೋ ಕಾರಣಕ್ಕೆ ಉತ್ಸವ ಆಗದಂತೆ ತಡೆ ಹಿಡಿದುದಕ್ಕೆ ಕೋಪಗೊಂಡ ಊರಜನರಿಂದ ಈತ ದುರಂತವನ್ನಪ್ಪಿರಬೇಕು .ಇಲ್ಲಿಯೇ ಸಮೀಪ ಸುಂಕದ ಕಟ್ಟೆ ಎಂಬ ಪ್ರದೇಶವಿರುವುದು ಇದಕ್ಕೆ ಬಲವನ್ನು ಒದಗಿಸುತ್ತದೆ.ತೋಳಂ ಭಟ ವಾಸಿಸುತ್ತಿದ್ದ ಜಾಗ ಕೋಳ್ಯೂರು ದೇವಾಲಯಕ್ಕೆ ಸಮೀಪದಲ್ಲಿದ್ದು ಆ ಪ್ರದೇಶದಲ್ಲಿ ಈಗ ಒಂದು ಕೆರೆ ಇದೆ .ಇಲ್ಲಿ ಜಪ ಮಾಡುವ ತಟ್ಟೆ ,ಪಾತ್ರೆ ಮೊದಲಾದ ಅವಶೇಷಗಳು ಸಿಕ್ಕಿವೆ ಆದ್ದರಿಂದ ಕೋಳ್ಯೂರಿನ ಶ್ರೀ ಶಂಕರನಾರಾಯಣ ದೇವಾಲಯ 600 ವರ್ಷಗಳ ಹಿಂದೆ (ಕ್ರಿ.ಶ.1435ಕ್ಕಿಂತ ಮೊದಲು ) ಈ ದೇವಾಲಯ ಇತ್ತು ಎಂಬುದನ್ನು ಖಂಡಿತವಾಗಿ ಹೇಳಬಹುದು ಎಂದು ಡಾ.ಲಕ್ಷ್ಮೀ ಜಿ ಪ್ರಸಾದ ಹೇಳಿದರು .
ಅನೇಕ ಸ್ಥಳೀಯ ಪಾಡ್ದನ, ಜನಪದ ಹಾಡುಗಳಲ್ಲಿ ಕೋಳ್ಯೂರು ದೇವರ ಹಾಗೂ ಆಯನದ ಉಲ್ಲೇಖಗಳಿವೆ.
2014 ಸಪ್ಟೆಂಬರ್ 26 ರಿಂದ 28 ರ ವರೆಗೆ ಮೂರುದಿನಗಳ ಕಾಲ ಕರ್ನಾಟಕ ಇತಿಹಾಸ ಅಕಾಡೆಮಿಯ 28 ನೆಯ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಮತ್ತು ವಿಚಾರ ಸಂಕಿರಣವು ಉಡುಪಿ ಜಿಲ್ಲೆಯ ಶಿರ್ವದ “ಮೂಲ್ಕಿ ಸುಂದರ ರಾಮ ಶೆಟ್ಟಿ ಕಾಲೇಜ್”ನಲ್ಲಿ ನಡೆಯಿತು.ವಾರ್ಷಿಕ ಸಮ್ಮೇಳನದ ಉದ್ಘಾಟನೆಯನ್ನು ಖ್ಯಾತ ಇತಿಹಾಸಜ್ಞರಾದ ಡಾ.ಅ .ಸುಂದರ ಅವರು ಮಾಡಿದರು .ಇತಿಹಾಸ ದರ್ಶನ 29 ನೆಯ ಸಂಪುಟ ಹಾಗೂ ಸದಸ್ಯರ ಕೃತಿಗಳನ್ನು ವಿಶ್ರಾಂತ ಕುಲಪತಿಗಳಾದ ಡಾ.ಬಿ ಎ ವಿವೇಕ ರೈಗಳು ಬಿಡುಗಡೆ ಮಾಡಿದರು .