ಮಂಗಳೂರು, ಅ.03: ರಾಜ್ಯದ ಎಲ್ಲಾ ನಗರಗಳಲ್ಲೂ ಸರಕಾರಿ ಬಸ್‌ಗಳು ಸಂಚಾರ ಮಾಡುತ್ತಿದ್ದರೂ ಮಂಗಳೂರಿನಲ್ಲೇಕೆ ನರ್ಮ್ ಯೋಜನೆಯಡಿ ಸರಕಾರಿ ಬಸ್‌ಗಳನ್ನು ಓಡಿಸಲಾಗುತ್ತಿಲ್ಲ್ಲ? ಖಾಸಗಿ ಬಸ್‌ಗಳಲ್ಲಿ ನಿರ್ವಾಹಕರ ಕಿರಿಕಿರಿಯನ್ನು ಸಹಿಸಲಾಗುವುದಿಲ್ಲ? ಇದಕ್ಕೇನಾದರೂ ಕ್ರಮ ಕೈಗೊಳ್ಳಲಾಗದೇ?
ಇದು ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ದ ಅಧ್ಯಕ್ಷ ಹಾಗೂ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಅವರಿಗೆ 8ನೆ ತರಗತಿಯ ವಿದ್ಯಾರ್ಥಿನಿಯ ಪ್ರಶ್ನೆ. ಗಾಂಧಿ ಜಯಂತಿ ಪ್ರಯುಕ್ತ ಜಿಲ್ಲಾಧಿ ಕಾರಿ ನಿವಾಸದಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಹಮ್ಮಿಕೊಳ್ಳಲಾದ ವಿಶೇಷ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಜೊತೆಗಿನ ಸಂವಾದ ಸಂದರ್ಭ ಶರಣ್ಯ ಎಂಬ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಯಿದು. ಮುಂದಿನ ಶೈಕ್ಷಣಿಕ ವರ್ಷಕ್ಕೆ ಮೊದಲು ಸರಕಾರಿ ಬಸ್‌ಗಳು ಸರಕಾರಿ ಬಸ್‌ಗಳನ್ನೇ ಓಡಿಸಬೇಕೆಂಬ ನಿಯಮಿತ ಕಾನೂನು ಇಲ್ಲದ ಕಾರಣ ನಗರದಲ್ಲಿ ಅನುಕೂಲತೆಗೆ ತಕ್ಕಂತೆ ಖಾಸಗಿ ಬಸ್‌ಗಳನ್ನು ಓಡಿಸಲಾಗುತ್ತಿದೆ.
ಖಾಸಗಿಯವರೂ ಉತ್ತಮ ಸೇವೆ ನೀಡುತ್ತಾ ಬಂದಿದ್ದಾರೆ. ಆದರೆ, ಬಸ್‌ಗಳಲ್ಲಿ ನಿರ್ವಾಹಕರ ವರ್ತನೆ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು, ಈ ಬಗ್ಗೆ ಬಸ್ ಮಾಲಕರ ಗಮನಕ್ಕೆ ತಂದಾಗ, ಚಾಲಕರು ಹಾಗೂ ನಿರ್ವಾಹಕರ ಕೊರತೆಯಿಂದ ಖಾಸಗಿ ಬಸ್ ವ್ಯವಸ್ಥೆಯಲ್ಲಿ ಹೆಚ್ಚಿನ ಶಿಸ್ತು ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂಬ ಅಸಹಾಯ ಕತೆಯ ಮಾತುಗಳು ಬರುತ್ತಿವೆ. ಈ ನಡುವೆಯೇ ನರ್ಮ್ ಯೋಜನೆಯಡಿ ಅತೀ ಶೀಘ್ರವಾಗಿಯೇ 30 ಸರಕಾರಿ ಬಸ್‌ಗಳನ್ನು ಓಡಿಸುವ ಪ್ರಕ್ರಿಯೆಗಳು ನಡೆಯುತ್ತಿವೆ.
ನೀನು ಮುಂದಿನ ವರ್ಷ 9ನೆ ತರಗತಿಗೆ ಹೋಗಲು ಆರಂಭಿಸುವ ಮೊದಲು (ಮುಂದಿನ ಶೈಕ್ಷಣಿಕ ವರ್ಷ) ಬಸ್‌ಗಳು ಸಂಚರಿಸಲಿವೆ ಎಂದು ಬಾಲಕಿಯನ್ನುದ್ದೇಶಿಸಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಿಳಿಸಿದರು.
ಗಾಂಧೀಜಿಯ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಸರ್ವಧರ್ಮ ಪ್ರಾರ್ಥನೆಯ ಬಳಿಕ ಸಂವಾದ ಕಾಯಕ್ರಮದಲ್ಲಿ ವಿದ್ಯಾರ್ಥಿಗಳು ನಾನಾ ಪ್ರಶ್ನೆಗಳ ಮೂಲಕ ಜಿಲ್ಲಾಧಿಕಾರಿಯನ್ನು ಬೆರಗು ಗೊಳಿಸಿದರು. ನಮ್ಮ ನಗರವನ್ನು ಸ್ವಚ್ಛವಾಗಿಡುವುದು ಹೇಗೆ? ಕೋಪವನ್ನು ನಿಯಂತ್ರಿಸುವುದು ಹೇಗೆ? ಹಗಲು ಹೊತ್ತಿನಲ್ಲೂ ಹೆಣ್ಣು ಮಕ್ಕಳಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ, ಹೀಗಿರುವಾಗ ಗಾಂಧೀಜಿಯ ಕನಸು ನನಸಾಗುವುದು ಹೇಗೆ? ಪ್ಲಾಸ್ಟಿಕ್ ತಡೆ ಸಾಧ್ಯವಿಲ್ಲವೇ? ನಮ್ಮ ರಾಜ್ಯದಲ್ಲಿ ಸಿಗರೇಟ್, ಮದ್ಯಪಾನ ನಿಷೇಧ ಯಾಕಿಲ್ಲ? ಹೀಗೆ ಗಂಭೀರವಾದ ಮಕ್ಕಳ ಪ್ರಶ್ನೆಗಳಿಗೆ ವಿಸ್ತೃತ ರೀತಿಯ ವಿವರಣೆಯೊಂದಿಗೆ ಉತ್ತರಿಸಿದ ಜಿಲ್ಲಾಧಿಕಾರಿ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಮಕ್ಕಳ ಜತೆ ಮುಕ್ತವಾಗಿ ಸಂವಾದಿಸಿದರು.
ಐಎಎಸ್‌ನಂತಹ ಉನ್ನತ ಹುದ್ದೆ ಗಳಿಗೆ ನಮ್ಮ ಜಿಲ್ಲೆಯಿಂದ ಆಯ್ಕೆಯಾಗುವವರ ಸಂಖ್ಯೆ ಕಡಿಮೆ ಯಾಕೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಜಿಲ್ಲೆಯಿಂದ ಬಳಷ್ಟು ಮಂದಿ ಐಎಎಸ್ ಉತ್ತೀರ್ಣ
ರಾಗಿ , ದೇಶ ವಿದೇಶಗಳಲ್ಲಿ ವಿವಿಧ ಕಡೆಗಳಲ್ಲಿ ವಿವಿಧ ರೀತಿಯ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದ ಜಿಲ್ಲಾಧಿಕಾರಿ ಐಎಎಸ್ ಪರೀಕ್ಷೆ ಬರೆಯುವುದರಿಂದ 30 ಸರಕಾರಿ ಸೇವೆಗಳ ಅವಕಾಶ ಸಿಗುತ್ತದೆ ಎಂಬ ವಿವರವನ್ನು ನೀಡಿದರು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಪ್ಪಿತಸ್ಥರಿಗೆ ಸೂಕ್ತವಾಗಿ ಶಿಕ್ಷೆ ಸಿಗುವುದಿಲ್ಲ? ನಿಷೇಧದ ನಿಯಂತ್ರಣಕ್ಕೆ ಅವಕಾಶವಿಲ್ಲದಿರುವಾಗ ಸರ್ವಾಧಿಕಾರದ ಆಡಳಿತವೇ ಒಳಿತವಲ್ಲವೇ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ, ಪ್ರಜಾಪ್ರಭುತ್ವವು ವ್ಯಕ್ತಿ ಮತ್ತು ವಾಕ್ ಸ್ವಾತಂತ್ರ ಸೇರಿದಂತೆ ಹಲವಾರು ರೀತಿಯ ಹಕ್ಕುಗಳನ್ನು ನೀಡುತ್ತದೆ. ಆದರೆ ಸರ್ವಾಧಿಕಾರದ ಆಡಳಿತದಲ್ಲಿ ಹಕ್ಕುಗಳನ್ನು ದಮನಿಸಲಾಗುತ್ತದೆ ಎಂದು ಮಕ್ಕಳಿಗೆ ಮನದಟ್ಟು ಮಾಡಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ದ.ಕ. ಜಿಲ್ಲಾ ಮುಖ್ಯ ಆಯುಕ್ತ ಎನ್.ಜಿ. ಮೋಹನ್ ಸ್ವಾಗತಿಸಿದರು. ವೇದಿಕೆಯಲ್ಲಿ ಜಿಲ್ಲಾ ಗೈಡ್ಸ್ ಆಯುಕ್ತರಾದ ಐರಿನ್ ಡಿಕುನ್ನಾ, ಜಿಲ್ಲಾ ಉಪಾಧ್ಯಕ್ಷ ವಸಂತ, ಕೋಶಾ ಧಿಕಾರಿ ವಾಸುದೇವ ಬೋಳೂರು ಉಪಸ್ಥಿತರಿದ್ದರು. ತರಬೇತುದಾರ ಎಂ.ಜಿ. ಕಜೆ ಕಾರ್ಯಕ್ರಮ ನಿರೂಪಿಸಿದರು.
ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ರೋವರ್ಸ್ ಮತ್ತು ರೇಂಜರ್ಸ್‌ನ 120 ವಿದ್ಯಾರ್ಥಿಗಳು ಹಾಗೂ ತರಬೇತುದಾರ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.