ಕೊಕ್ಕಡ: ಬೆಳ್ತಂಗಡಿ ತಾಲೂಕಿನ ನಿಡ್ಲೆ ಕಾಮತ್ ರೆಸಾರ್ಟನಲ್ಲಿ ಜುಗಾರಿ ಆಡುತ್ತಿದ್ದ ವೇಳೆ ಬಂಟ್ವಾಳ ಎ.ಎಸ್.ಪಿ. ರಾಹುಲ್ ಕುಮಾರ್ ಶಹಪೂರ್‌ವಾಡ್ ನೇತತ್ವದಲ್ಲಿ ಶನಿವಾರ ರಾತ್ರಿ 1 ಗಂಟೆ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ 24 ಜನರನ್ನು ಬಂಧಿಸಿ ಹಲವಾರು ಕಾರು, ವಾಹನ ಮತ್ತು 12 ಲಕ್ಷ ರೂ. ನಗದು ವಶಪಡಿಸಿಕೊಳ್ಲಲಾಗಿದೆ.
24 ಜನರು, 10 ಕ್ಕಿಂತಲೂ ಹೆಚ್ಚು ಕಾರು ಬೈಕುಗಳು, 12 ಮೊಬೈಲ್ ಹಾಗೂ 11.29 ಲಕ್ಷ ಹಣ ವಶಪಡಿಸಿಕೊಂಡ ಪ್ರಕರಣ ಕುರಿತಂತೆ ಉಪ್ಪಿನಂಗಡಿ ಠಾಣೆಯಲ್ಲಿ ದಾಖಲಾಗಿದೆ. ದಾಳಿಯ ವೇಳೆ 60 ರಷ್ಟು ಇದ್ದ ಜನರಲ್ಲಿ ಅರ್ಧದಷ್ಟು ಮಂದಿ ಹೆಂಚು ತೆಗೆದು ಓಡಿ ತಪ್ಪಿಸಿಕೊಂಡಿದ್ದಾರೆ.
ರೆಸಾರ್ಟ್‌ನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಯ ಬಗ್ಗೆ ಮಾಹಿತಿ ಪಡೆದ ಎ.ಎಸ್.ಪಿ. ತಂಡ ದಾಳಿ ನಡೆಸಿ 25 ಮಂದಿಯನ್ನು ಬಂಧಿಸಿ, ಅವರು ಜೂಜಾಟಕ್ಕೆ ಬಳಸಿದ 11 ಲಕ್ಷದ 29 ಸಾವಿರದ 860 ರೂಪಾಯಿ ನಗದು, ಆರೋಪಿಗಳಿಗೆ ಸೇರಿದ 1 ಬೈಕ್, 1 ಆಟೋ ರಿಕ್ಷಾ, 7 ಕಾರು, 13 ಮೊಬೈಲ್, ಜೂಜುಕೋರರಿಗಾಗಿ ಅಕ್ರಮವಾಗಿ ತಂದಿರಿಸಿಕೊಂಡಿದ್ದ 16 ಬಾಟಲಿ ವಿಸ್ಕಿ, 22 ಬಾಟಲಿ ಬಿಯರ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳು ಬೆಳ್ತಂಗಡಿ ಜೈನಪೇಟೆಯ ಮಹೇಶ್, ಬೆಳ್ತಂಗಡಿ ಚಾರ್ಮಾಡಿ ಗ್ರಾಮ ಪಂಚಾಯಿತಿ ಸದಸ್ಯ ದೇಜಪ್ಪ, ಪಡಂಗಡಿಯ ಮಹಮ್ಮದ್, ಅಬ್ದುಲ್ ರಜಾಕ್, ಮಾಲಾಡಿಯ ಸುರೇಶ್ ಪೂಜಾರಿ, ಮಿತ್ತಬಾಗಿಲು ವಸಂತ, ಕೂವೆಟ್ಟು ನಿವಾಸಿಗಳಾದ ಇಬ್ರಾಹಿಂ, ಉಮ್ಮರ್‌ಕುಂಞ್, ಕನ್ಯಾಡಿಯ ಸುರೇಶ್, ತೋಟತ್ತಡಿ ಸುನಿಲ್ ಕುಮಾರ್, ನೆರಿಯದ ಜಾನ್ ತೋಮಸ್, ನಡ ನಿವಾಸಿ ದಯಾನಂದ, ಮಂಗಳೂರು ವಳಚ್ಚಿಲ್ ನಿವಾಸಿ ಇಸ್ಮಾಯಿಲ್, ಬಂಟ್ವಾಳ ಪಾಂಡವರಕಲ್ಲು ನಿವಾಸಿ ಲೋಕನಾಥ, ಕಜೆಕ್ಕಾರು ನಿವಾಸಿ ಗೋಪಾಲ ಪೂಜಾರಿ, ಪುಡಾ ನಿವಾಸಿ ಶಬ್ಬೀರ್, ಬಿಳಿಯೂರು ಅಬೂಬಕ್ಕರ್, ನೆಲ್ಯಾಡಿಯ ಶಿಬು ವರ್ಗೀಸ್, ಕೌಕ್ರಾಡಿಯ ಆದಂ, ಚಿತ್ರದುರ್ಗ ಜಿಲ್ಲೆಯ ಹೂವಿನಾಡು ನಿವಾಸಿ ಕುಬೇರಪ್ಪ, ಹತ್ತಿನಗದ್ದೆ ನಿವಾಸಿ ಮಂಜುನಾಥ, ಮಂಗಳಾಪುರದ ಬಿ. ಮಂಜುನಾಥ, ತುಮಕೂರು ಜಿಲ್ಲೆಯ ಮೂಡಿಗಿರಿ ನಿವಾಸಿ ಮಂಜುನಾಥ, ಸಿರಾ ನಿವಾಸಿ ಎಸ್. ಮಂಜುನಾಥ, ನಾಗರಾಜ್ ಎಂಬವರಾಗಿರುತ್ತಾರೆ.
ಪೊಲೀಸ್ ಸಹಿತ ಹಲವರು ಪರಾರಿ?: ದಾಳಿ ವೇಳೆ ಜುಗಾರಿ ಆಟದಲ್ಲಿ ನಿರತರಾಗಿದ್ದ ನೆಲ್ಯಾಡಿ ನಿವಾಸಿಯಾಗಿರುವ ಬೆಳ್ತಂಗಡಿ ಹೊರ ಠಾಣೆಯ ಪೊಲೀಸ್ ಓರ್ವ ಸೇರಿದಂತೆ 25ಕ್ಕೂ ಅಧಿಕ ಮಂದಿ ಪರಾರಿ ಆಗಿದ್ದಾರೆ ಜೊತೆಗೆ ಸ್ಥಳದಲ್ಲಿದ್ದ ಈ ದಂಧೆಯ ರೂವಾರಿ ಕೋಲ್ಪೆ ಮತ್ತು ಬೆಳ್ತಂಗಡಿಯ ಈರ್ವರು ಪರಾರಿ ಆಗಿದ್ದಾರೆ ಎಂದು ಹೇಳಲಾಗಿದೆ. ಸ್ಥಳೀಯ ಉಪ್ಪಿನಂಗಡಿ ಠಾಣೆಯ ಕೆಲ ಪೋಲೀಸರಿಗೆ ತಿಳಿದೇ ಈ ವ್ಯವಸ್ಥಿತ ದಂಧೆ ನಡೆಯುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಶನಿವಾರದಂದು ಬಂಟ್ವಾಳದ ಎಎಸ್ ಪಿ ಯವರು ಹಠಾತ್ ದಾಳಿ ನಡೆಸಿರುವುದಾಗಿದೆ.