ಕುಂದಾಪುರ: ಗೋಪಾಡಿ ಗ್ರಾಮದ ಮೆಸ್ಕಾಂ ಕಚೇರಿ ಎದುರು ಭಾನುವಾರ ಮಧ್ಯಾಹ್ನದ ಬಳಿಕ ಮಾಟಮಂತ್ರದ ಹೈಡ್ರಾಮ ನಡೆದಿದ್ದು, ಮಾಟ ಮಾಡಿದ್ದರು ಎನ್ನಲಾದ ನಿಂಬೆಹಣ್ಣನ್ನು ವಿಜ್ಞಾನ ಶಿಕ್ಷಕ ಉದಯ ಗಾಂವ್ಕರ್ ಜ್ಯೂಸ್ ಮಾಡಿ ಕುಡಿದಿದ್ದಾರೆ.
ಭಾನುವಾರ 2.30ರ ಸುಮಾರಿಗೆ ವಾನವೊಂದರಲ್ಲಿ ಬಂದ ವ್ಯಕ್ತಿಯೋರ್ವ ಮೆಸ್ಕಾಂ ಕಚೇರಿಯೆದುರು ಕಾರಿನಿಂದ ಇಳಿದು ಮಣ್ಣು ಸರಿಸಿ ಹೊಂಡದಲ್ಲಿ ವಸ್ತುವೊಂದನ್ನು ಇಡುತ್ತಾನೆ. ಇದನ್ನು ದೂರದಿಂದಲೇ ಸ್ಥಳೀಯ ಲೈನ್‌ಮೆನ್ ಸಿದ್ಧಲಿಂಗಪ್ಪ, ಸಂತೋಷ್, ಶರತ್ ಗಮನಿಸಿರುತ್ತಾರೆ, ಆತ ಅಲ್ಲಿಂದ ತೆರಳಿದ ಬಳಿಕ ಮಣ್ಣನ್ನು ಸರಿಸಿ ನೋಡಿದಾಗ ಕಂಡಿದ್ದು ತಾಮ್ರದ ತಗಡು, ಏನೊ ಒಂದು ರೀತಿಯ ಪುಡಿ ಹಾಗೂ ಲಿಂಬೆಹಣ್ಣು . ಆತ ಮಾಟ ಮಾಡಿದ್ದಾನೆ ಎಂದು ಲೈನ್‌ಮೆನ್‌ಗಳು ತಕ್ಷಣ ಮೆಸ್ಕಾಂ ಶಾಖಾಧಿಕಾರಿ ಬಾಬಣ್ಣ ಪೂಜಾರಿಯವರಿಗೆ ವಿಷಯ ತಿಳಿಸಿದ್ದಾರೆ. ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಸುದ್ದಿ ತಿಳಿದ ಶಿಕ್ಷಕ ಉದಯ ಗಾಂವ್ಕರ್ ಸ್ಥಳಕ್ಕೆ ಭೇಟಿ ನೀಡಿ ಮಂತ್ರಿಸಿದ್ದರೆನ್ನಲಾದ ವಸ್ತುವನ್ನು ವಶಕ್ಕೆ ತೆಗೆದುಕೊಂಡು ಸ್ಥಳದಲ್ಲಿಯೇ ಲಿಂಬೆಹಣ್ಣನ್ನು ಕತ್ತರಿಸಿ ಜ್ಯೂಸ್ ಮಾಡಿ ಕುಡಿದರು. ತಾಮ್ರದ ತಗಡು ಮತ್ತು ಪುಡಿಯನ್ನು ಕಿಸೆಯಲ್ಲಿ ಹಾಕಿಕೊಂಡರು.ಮಾಟ ಮಾಡಿ ಹಾಕಿದ ಲಿಂಬೆಹಣ್ಣು ಜ್ಯೂಸ್ ಮಾಡಿ ಕುಡಿದ ಮೆಲೆಯೂ ಈ ಪ್ರಕರಣದ ಗೊಂದಲವಿದ್ದ ಕಾರಣ ಸಂಜೆ ವೇಳೆ ಸ್ಥಳೀಯ ಅಸೋಡು ನಂದಿಕೇಶ್ವರ ದೇವಸ್ಥಾನದಲ್ಲಿ ದೇವರ ಮುಂದೆ ಮೆಸ್ಕಾಂ ಶಾಖಾಧಿಕಾರಿ ಮತ್ತು ಮಾಟ ಮಾಡಿದ್ದರೆನ್ನಲಾದ ವ್ಯಕ್ತಿ ಪ್ರಮಾಣ ಮಾಡಿದ್ದಾರೆ ಎನ್ನಲಾಗಿದೆ.