ಕರಾವಳಿ

ಸಿಪಿಎಂ ನೇತೃತ್ವದಲ್ಲಿ ನಿವೇಶನರಹಿತರ ಬೃಹತ್ ಪ್ರತಿಭಟನೆ : ಮನೆ ನಿವೇಶನ ನೀಡಲು ಒತ್ತಾಯ

Pinterest LinkedIn Tumblr

Cpim_Protest_Pics

ಮಂಗಳೂರು, ಅ.14: ನಿವೇಶನರಹಿತ ಅರ್ಜಿದಾರರ ಪಟ್ಟಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ನಿವೇಶನರಹಿತರಿಗೆ ತಕ್ಷಣ ಮನೆ ನಿವೇಶನ ನೀಡಬೇಕು ಎಂದು ಆಗ್ರಹಿಸಿ ಸಿಪಿಎಂ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೋಮವಾರ ಮಂಗಳೂರು ಮಹಾನಗರ ಪಾಲಿಕೆ ಮುಂಭಾಗ ನಿವೇಶನರಹಿತರ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಎಂನ ನಾಯಕ ವಸಂತ ಆಚಾರಿ, ಸಂವಿಧಾನ ಪ್ರಕಾರ ಬಡವರಿಗೆ ಭೂಮಿ ನೀಡಿ ಬದುಕುವ ವ್ಯವಸ್ಥೆ ಕಲ್ಪಿಸುವುದು ಸರಕಾರದ ಹಕ್ಕಾಗಿದ್ದರೂ, ರೆಸಾರ್ಟ್ ಗಾಗಿ, ಮೋಜಿಗಾಗಿ ನೀಡಲು ಮಂಗಳೂರಿನಲ್ಲೇ ಸರಕಾರದ ಬಳಿ ಭೂಮಿ ಇದ್ದರೂ ನಿವೇಶನ ರಹಿತರಿಗೆ ಭೂಮಿ ನೀಡಲು ಸರಕಾರದ ಬಳಿ ಭೂಮಿ ಇಲ್ಲ ಎಂದು ಸರಕಾರವನ್ನು ತರಾಟೆಗೈದಿದ್ದಾರೆ.

ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಕೈಗಾರಿಕೆಗಳಿಗೆ ನೀಡಬಾರದೆಂಬ ನಿಯಮವಿದ್ದರೂ ಕಾಯ್ದೆಯನ್ನು ತಿದ್ದುಪಡಿ ಮಾಡಿ ಉದ್ಯಮಿಗಳಿಗೆ, ಭೂಮಾಲಕರಿಗೆ ಬೇಕಾ ಬಿಟ್ಟಿಯಾಗಿ ನೀಡುವ ಸರಕಾರ ನಿವೇಶನರಹಿತ ಬಡ ಕೂಲಿ ಕಾರ್ಮಿಕರಿಗೆ ಭೂಮಿ ನೀಡದೆ ಸತಾಯಿಸುತ್ತಿದೆ. ನಗರದಲ್ಲಿ ಭೂಮಿಯ ದರ ಕೋಟಿಗಟ್ಟಲೆ ರೂ.ಗಳಾಗಿದ್ದು, ಬಡ ಕಾರ್ಮಿಕರು ಖಾಸಗಿ ಭೂಮಿ ಖರೀದಿಸಿ ಮನೆ ಕಟ್ಟಿ ಜೀವಿಸುವುದು ಕನಸಿನ ಮಾತು. ಬಡವರಿಗೆ ಬದುಕುವ ಹಕ್ಕನ್ನು ಕಲ್ಪಿಸಬೇಕಾದ ಸರಕಾರ ಶ್ರೀಮಂತರ ಬಗ್ಗೆ ಮಾತ್ರ ಕಾಳಜಿ ವಹಿಸುತ್ತಿದೆ ಎಂದು ದೂರಿದರು.

ಕಳೆದ 20 ವರ್ಷಗಳಿಂದ ಮನಪಾ ವ್ಯಾಪ್ತಿಯಲ್ಲಿ ಒಂದಿಚೂ ಭೂಮಿಯನ್ನು ಬಡವರಿಗಾಗಿ ನೀಡಲಾಗಿಲ್ಲ. ಸಿಪಿಎಂ ನೇತೃತ್ವದಲ್ಲಿ 5000ಕ್ಕೂ ಅಧಿಕ ನಿವೇಶನ ರಹಿತರು ಅರ್ಜಿ ಸಲ್ಲಿಸಿದ್ದಾರೆ. ಆ ಪಟ್ಟಿಯನ್ನು ಮನಪಾ ನೀಡಬೇಕು. ನಿವೇಶನರಹಿತರಿಗಾಗಿ ಎಲ್ಲಿ ಭೂಮಿಯನ್ನು ಕಾಯ್ದಿರಿ ಸಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ವಸಂತ ಆಚಾರಿ ಆಗ್ರಹಿಸಿದರು. ಸಿಪಿಎಂ ನಗರ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕೃಷ್ಣ ಪಾಲೆಮಾರ್ ಉಸ್ತುವಾರಿ ಸಚಿವರಾಗಿದ್ದ ಸಂದರ್ಭ ನಿವೇಶನರಹಿತರು ಮನಪಾದಲ್ಲಿದ್ದ ಅವರ ಕಚೇರಿಗೆ ಸಾವಿರಾರು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿಗಳು ಕೊಂಚಾಡಿಯ ಅವರ ಬಹುಮಹಡಿ ಕಟ್ಟಡಗಳ ಬಳಿಯ ಕಸದ ಬುಟ್ಟಿಯಲ್ಲಿ ಪತ್ತೆ ಯಾಗಿದ್ದವು. ಅದು ಸುದ್ದಿಯಾಗಿ ಪಾಲೆಮಾರ್ ತಮ್ಮ ಅಧಿಕಾರವನ್ನೇ ಕಳೆದುಕೊಳ್ಳಬೇಕಾಯಿತು. ಇದೀಗ ಶಾಸಕ ಜೆ.ಆರ್.ಲೋಬೊ ಕೂಡಾ ನಿವೇಶನರಹಿತರ ಅರ್ಜಿ ಬರೆಯಿಸುವ ನಾಟಕ ಮಾಡುತ್ತಿದ್ದಾರೆ. ಆದರೆ ನಿವೇಶನ ಒದಗಿಸುವ ಕಾರ್ಯ ನಡೆಸುತ್ತಿಲ್ಲ ಎಂದು ಆರೋಪಿಸಿದರು.

ಈಗಾಗಲೇ ನೀಡಲಾಗಿರುವ ಸಾವಿರಾರು ಜನರ ಅರ್ಜಿಗಳಲ್ಲಿ ಕೆಲವರಿಗೆ ಅರ್ಜಿ ಸಮರ್ಪಕವಾಗಿಲ್ಲ, ವಾಜಪೇಯಿ ನಗರ ನಿವೇಶನ ಯೋಜನೆಯಡಿ ಪ್ರತ್ಯೇಕ ಅರ್ಜಿ ನೀಡಬೇಕೆಂದು ಹಿಂಬರಹ ಕಳುಹಿಸಲಾಗಿದೆ. ಈ ಮೂಲಕ ನಿವೇಶನರಹಿತರ ಹೋರಾಟದ ಹಾದಿ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ಅವರು ದೂರಿದರು. ಸರಕಾರದ ಬಳಿ ಭೂಮಿ ಇಲ್ಲದಿದ್ದರೆ ಖಾಸಗಿ ಭೂಮಿ ಖರೀದಿಸಿ ಬಡವರಿಗೆ ನೀಡಬೇಕೆಂಬ ನಿಯಮವನ್ನು 44 ವರ್ಷಗಳ ಹಿಂದೆಯೇ ಬಜೆಟ್ ಭಾಷಣದಲ್ಲಿ ಸರಕಾರ ಮಾಡಿದೆ. ಆದರೆ ಅದರ ಕಡತ ಎಲ್ಲಿ ಹೋಗಿದೆ ಎಂದೇ ತಿಳಿಯುತ್ತಿಲ್ಲ ಎಂದು ಹೇಳುತ್ತಿರುವುದು ನಿಜಕ್ಕೂ ವಿಪರ್ಯಾಸ. ವಿವಿಧ ಹೆಸರುಗಳಲ್ಲಿ ಯೋಜನೆ ಗಳು ಅನುಷ್ಠಾನಗೊಳ್ಳುತ್ತಿದೆಯಾದರೂ ಅದರ ಪ್ರಯೋಜನ ಮಾತ್ರ ಅರ್ಹರಿಗೆ ಸಿಗುತ್ತಿಲ್ಲ. ಹಾಗಾಗಿ ಸರಕಾರ ಮಂಗಳೂರು ನಗರದಲ್ಲಿ ಈಗಾಗಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿರುವವರಿಗೆ ಯಾವಾಗ ಜಮೀನು ಒದಗಿಸುತ್ತಾರೆಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಸುನಿಲ್‌ಕುಮಾರ್ ಒತ್ತಾಯಿಸಿದರು. ಪ್ರತಿಭಟನೆಯ ನೇತೃತ್ವವನ್ನು ನಿವೇಶನರಹಿತರ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಶಕ್ತಿನಗರ, ಪ್ರೇಮನಾಥ ಜಲ್ಲಿಗುಡ್ಡೆ, ಬಾಲಕೃಷ್ಣ ಶೆಟ್ಟಿ, ಯಾದವ ಶೆಟ್ಟಿ, ವಾಸುದೇವ ಉಚ್ಚಿಲ್, ದಯಾನಂದ ಶೆಟ್ಟಿ, ಜಯಂತಿ ಬಿ. ಶೆಟ್ಟಿ, ಪುರುಷೋತ್ತಮ ಸಾಲ್ಯಾನ್ ಮೊದಲಾದವರು ವಹಿಸಿದ್ದರು. ಪ್ರತಿಭಟನಾ ಸಭೆಗೂ ಮುನ್ನ ಜ್ಯೋತಿ ವೃತ್ತದಿಂದ ಮನಪಾ ಕಚೇರಿವರೆಗೆ ನಿವೇಶನರಹಿತರು ಮೆರವಣಿಗೆ ನಡೆಸಿದರು.

ಮೇಯರ್‌ರಿಂದ ಮನವಿ ಸ್ವೀಕಾರ- ಭರವಸೆ

ಪ್ರತಿಭಟನಾನಿರತರು ಮೇಯರ್ ಹಾಗೂ ಸಂಬಂಧಪಟ್ಟವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸುವವರೆಗೆ ಕದಲುವುದಿಲ್ಲ ಎಂದು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಮೇಯರ್ ಮಹಾಬಲ ಮಾರ್ಲ, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಡಿ.ಕೆ. ಹಾಗೂ ಶಾಸಕ ಜೆ.ಆರ್.ಲೋಬೊ ನಿವೇಶನರಹಿತರಿಗೆ ನಿವೇಶನ ಒದಗಿಸಲು ಸರಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಭರವಸೆ ನೀಡಿದರು.

Write A Comment