ಮೂಲ್ಕಿ / ಬಪ್ಪನಾಡು,ಅ.18: ಚಿಕ್ಕಮಗಳೂರು, ಉಡುಪಿ, ಮಂಗಳೂರು, ಉತ್ತರ ಕನ್ನಡ ಹಾಗೂ ಶಿವಮೊಗ್ಗ ಸೇರಿದಂತೆ ಐದು ಜಿಲ್ಲೆಗಳನ್ನೊಳಗೊಂಡ ಶಿವಮೊಗ್ಗ ಮತ್ತು ಮಂಗಳೂರು ವಿಭಾಗ ಮಟ್ಟದ ಬಿಜೆಪಿ ಪಕ್ಷದ ಪ್ರಮುಖ ಕಾರ್ಯಕರ್ತರ ಸಮಾವೇಶ ಶನಿವಾರ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಜ್ಞಾನ ಮಂದಿರದ ಸಭಾಂಗಣದಲ್ಲಿ ನಡೆಯಿತು.
ಮಾಜಿ ಮುಖ್ಯಮಂತ್ರಿ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ, ಸಂಸದ ಬಿ.ಎಸ್.ಯಡಿಯೂರಪ್ಪ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಜ್ಯದಲ್ಲಿ ಆಡಳಿತ ಹಾಗೂ ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದಿದ್ದು ಆಡಳಿತ ಪಕ್ಷದಲ್ಲಿ ಆಂತರಿಕ ಕಚ್ಚಾಟ ಭುಗಿಲೆದ್ದಿದ್ದು ಯಾವುದೇ ಸಮಯದಲ್ಲಿ ವಿಧಾನ ಸಭಾ ಚುನಾವಣೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ಮತ್ತೋರ್ವ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕೇಂದ್ರದಲ್ಲಿ ಪಕ್ಷದ ಆಡಳಿತವಿದ್ದು ರಾಜ್ಯದಲ್ಲಿ ಪಕ್ಷವನ್ನು ಮರಳಿ ಅದಿಕಾರಕ ತರುವ ನಿಟ್ಟಿನಲ್ಲಿ ರಾಜ್ಯದಲ್ಲಿ ಹತ್ತು ವಿಭಾಗ ಮಟ್ಟದಲ್ಲಿ ಪ್ರತಿ ಎರಡು ವಿಭಾಗಕ್ಕೆ ಒಂದರಂತೆ ವಿಭಾಗ ಮಟ್ಟದ ಸಮಾವೇಶವನ್ನು ನಡೆಸಲು ನಿರ್ಧರಿಸಿದ್ದು ಕೇಂದ್ರ ಸರ್ಕಾರದ ಸ್ವ್ವಚ್ಚತಾ ಅಭಿಯಾನ, ಜನ್ ಧನ್ ಸೇರಿದಂತೆ ಜನಪರ ಯೋಜನೆಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ರಾಜ್ಯ ಸರ್ಕಾರದ ವೈಫಲ್ಯಗನ್ನು ಜನರಿಗೆ ಮನವರಿಕೆ ಮಾಡಿ ಮುಂದೆ ನಡೆಯಲಿರುವ ಗ್ರಾಮ ಪಂಚಾಯತ್ ಸೇರಿದಂತೆ ಚುನಾವಣೆಗಳಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮವೇಶವನ್ನು ಹಮ್ಮಿಕೊಂಡಿರುವುದಾಗಿ ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನೀಲ್ ಕುಮಾರ್, ಬಿ ವೈ ರಾಘವೇಂದ್ರ, ವಿಧಾನ ಪರಿಷತ್ ಸದಸ್ಯರಾದ ಭಾನು ಪ್ರಕಾಶ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದ.ಕ ಜಿಲ್ಲಾ ಆಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಉಡುಪಿ ಜಿಲ್ಲಾದ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಎಂ ಜೆ ನಾಯಕ್, ಶಿವಮೂಗ್ಗ ಜಿಲ್ಲಾ ಪ್ರಭಾರ ಗಿರೀಶ್ ಪಟೇಲ್, ರಾಜ್ಯ ಉಪಾಧ್ಯಕ್ಷರುಗಳಾದ ಸುಲೋಚನಾ ಭಟ್, ಶ್ಯಾಮಲ ಕುಂದರ್, ರೇಖಾ ಹುಲಿಯಪ್ಪ ಗೌಡ, ಮಾಜಿ ಶಾಸಕ, ರೈತ ಮೋರ್ಚಾದ ಅಧ್ಯಕ್ಷ ಅರಗ ಜ್ನಾನೇಂದ್ರ ಮತ್ತಿತರರು ಉಪಸ್ಥಿತರಿದ್ದರು.