ಮಂಗಳೂರು: ಅದ್ಭುತ ಸ್ಮರಣ ಶಕ್ತಿ ಮತ್ತು ಸತ್ವಯುತವಾದ ಅಧ್ಯಯನವನ್ನು ಮಾಡಿ ಹರಿಕಥೆಯನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸುತ್ತಿದ್ದ ಸಂತ ಭದ್ರಗಿರಿ ಅಚ್ಯುತ ದಾಸರ ಹರಿಕಥೆ ಬದುಕಿನ ವಾಸ್ತವತೆಗೆ ತುಂಬಾ ಹತ್ತಿರವಾಗಿರುತ್ತಿತ್ತು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಶನಿವಾರ ನಡೆದ ಸಂತ ಭದ್ರಗಿರಿ ಅಚ್ಯುತ ದಾಸರ ಸಂಸ್ಮರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯಾರನ್ನೂ ನೋಯಿಸದಂತೆ ಧರ್ಮದ ಸೂಕ್ಷ್ಮತೆಯನ್ನು ಅವರು ವಿನಯದಿಂದ ತಿಳಿಸಿಕೊಡುತ್ತಿದ್ದರು. ಇತ್ತೀಚಿನ ದಶಕಗಳಲ್ಲಿ ಮಾಧ್ಯಮ ಭರಾಟೆ ಹೆಚ್ಚಾಗಿದ್ದರೂ ಹರಿಕಥೆಯ ಅನನ್ಯತೆಯನ್ನು ಉಳಿಸಿಕೊಂಡು ಅಚ್ಯುತ ದಾಸರು ತುಂಬಾ ಪ್ರಸಿದ್ಧಿ ಪಡೆದಿದ್ದರು ಎಂದು ಅವರು ಹೇಳಿದರು.
ಹರಿಕಥೆಯ ಪರಂಪರೆಯನ್ನು ಶ್ರೀಮಂತಗೊಳಿಸಿದ ಸಂತ ಭದ್ರಗಿರಿ ಅಚ್ಯುತದಾಸರು ಅಜಾತಶತ್ರುವಾಗಿದ್ದರು. ಗ್ರಾಮೀಣ ಜನಜೀವನದಲ್ಲಿ ಸಮಯ ಕಳೆಯುವುದಕ್ಕೆ ಹರಿಕಥೆಗಳು ನೆರವಾಗುತ್ತಿದ್ದವು. ಒಳ್ಳೆಯ ವಿಚಾರವನ್ನು ಆಲಿಸುತ್ತಿದ್ದರು. ಹಲವಾರು ವ್ಯಸನಗಳಿಂದ ಕಾಲಹರಣ ಮಾಡುವ ಬದಲಾಗಿ ಹರಿಕಥೆ ಕೇಳುವುದು ಉತ್ತಮ ಎಂದು ಪರಿಗಣಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಮತ್ತು ವಿದ್ವಾಂಸ ಡಾ.ಪ್ರಭಾಕರ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು. ಕೊಂಕಣಿ ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟಲಿನೊ, ವಿಶ್ವಕೊಂಕಣಿ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಬಸ್ತಿ ವಾಮನ ಶೆಣೈ, ಕುಡ್ಪಿಜಗದೀಶ್ ಶೆಣೈ, ಪ್ರದೀಪ್ ಜಿ.ಪೈ, ವೆಂಕಟೇಶ್ ಎನ್.ಬಾಳಿಗಾ, ಜಯರಾಜ್ ಪೈ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭದ್ರಗಿರಿ ಕುಟುಂಬದ ಹಿರಿಯರಾದ ಸಂತ ಭದ್ರಗಿತಿ ಸರ್ವೋತ್ತಮ ದಾಸ್‌ಜಿ ಅವರನ್ನು ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಗಣ್ಯರು ಸನ್ಮಾಣಿಸಿದರು.