ಮಂಗಳೂರು: ಮತ ಹಾಕುವುದು ಪ್ರತಿಯೊಬ್ಬರ ಕರ್ತವ್ಯ. ಈ ಕರ್ತವ್ಯ ನಿಭಾಯಿಸದವರು ಸರಕಾರದ ಯಾವುದೇ ಸೌಲಭ್ಯ, ಕ್ಷೇಮಾಭಿವೃದ್ಧಿ ಯೋಜನೆಗಳ ಪ್ರಯೋಜನ ಪಡೆಯಲು ಅರ್ಹರಲ್ಲ ಎಂಬಂತಾದರೆ ಪ್ರತಿಯೊಬ್ಬರು ಮತ ಚಲಾಯಿಸಲು ಮುಂದೆ ಬರಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅಭಿಪ್ರಾಯಪಟ್ಟರು. ಎಸ್ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕಾಲೇಜಿನ ‘ಬೆಳ್ಳಿ ಹಬ್ಬ ದತ್ತಿ ಉಪನ್ಯಾಸ’ ನೀಡಿದರು.
ಕಾನೂನು ಬದ್ಧ ಹಕ್ಕುಗಳಂತೆ ನಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ಪ್ರತಿಯೊಬ್ಬ ನಾಗರಿಕನೂ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬಲಿಷ್ಠ ದೇಶ ಕಟ್ಟುವ ಕಾಯಕಕ್ಕೆ ಪಣತೊಡಬೇಕು. ಮತದಾನದ ಬಳಿಕ ಪ್ರಚಾರಕ್ಕೆ ರಸ್ತೆ ಬದಿಯಲ್ಲಿ ಬಳಸಿದ ಸಾಮಗ್ರಿಗಳನ್ನು ಸ್ವಚ್ಛಗೊಳಿಸುವುದನ್ನು ಚುನಾವಣಾ ಆಯೋಗ ಅಭ್ಯರ್ಥಿಗಳಿಂದ ಪ್ರಮಾಣ ಪತ್ರವನ್ನು ಪಡೆಯುವ ವ್ಯವಸ್ಥೆ ಮಾಡಬೇಕು ಎಂದರು.
ಮೂಲಭೂತ ಕರ್ತವ್ಯದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖಿಸಿದರೆ ಸಾಲದು, ನಿತ್ಯ ಜೀವನದಲ್ಲಿ ನಾಗರಿಕರು ಇದನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಈ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ. ಎಲ್ಲಾ ಕಾನೂನಿಗಿಂತ ಮಿಕ್ಕಿದ್ದು ನಮ್ಮ ಆತ್ಮಸಾಕ್ಷಿ. ನಮ್ಮ ಕರ್ತವ್ಯಗಳನ್ನು ನಾವೆಷ್ಟು ನಿರ್ವಹಿಸುತ್ತಿದ್ದೇವೆ ಎಂಬವುದನ್ನು ಅಂತಪ್ರಜ್ಞೆಯಿಂದ ಪ್ರಶ್ನಿಸಬೇಕು ಎಂದರು.
ನಾಗರಿಕ ಕರ್ತವ್ಯ ಹಾಗೂ ಸಮುದಾಯ ಅಭಿವೃದ್ದಿಯ ಕುರಿತು ಯುವ ಜನತೆಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರ ಆದ್ಯತೆ ನೀಡಬೇಕು. ಈ ಮೂಲಕ ದೇಶ ಕಟ್ಟುವುದಕ್ಕಾಗಿ ಯುವ ಜನತೆ ತಮ್ಮ ಕರ್ತವ್ಯ ನಿರ್ವಹಿಸಬೇಕು. ಪರಿಸರ ಕಾಳಜಿ, ಸ್ವಚ್ಛತೆ, ಪ್ರಾಮಾಣಿಕತೆ ಮತ್ತು ಸಮಗ್ರತೆಗೆ ಒತ್ತು ನೀಡುವಂತೆ ಮಾಡಬೇಕು. ದೇಶ ಕಟ್ಟುವ ಕಾಯಕಕ್ಕೆ ಖಾಸಗಿ ಉದ್ಯಮಗಳು ಪ್ರೇರಣೆ ನೀಡಬೇಕು. ಮಾಧ್ಯಮಗಳು ಈ ಉದ್ದೇಶಕ್ಕೆ ಸಾಥ್ ನೀಡಬೇಕು ಎಂದರು.
ದೇಶದ ಹಿತದ ದೃಷ್ಟಿಯಿಂದ ಪ್ರತಿಯೊಬ್ಬ ಅರ್ಹ ತೆರಿಗೆ ಪಾವತಿದಾರರು ತೆರಿಗೆಯನ್ನು ಪಾವತಿಸಬೇಕು. ನಾಗರಿಕರು ಕಟ್ಟಿದ ತೆರಿಗೆಯಿಂದ ನಾನಾ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತದೆ. ವರ್ಷದಲ್ಲಿ ಒಂದು ದಿನವನ್ನು ಮೂಲಭೂತ ಕರ್ತವ್ಯದ ದಿನವನ್ನಾಗಿ ಆಚರಿಸಬೇಕು ಎಂದರು.
ಎಸ್ಡಿಎಂ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ, ಆರೋಗ್ಯಯುತ, ಹೊಣೆಗಾರಿಕೆಯ ನಾಗರಿಕರನ್ನು ಸೃಷ್ಟಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ನಮ್ಮ ಹಕ್ಕುಗಳ ಜತೆಗೆ ನಮ್ಮ ಕರ್ತವ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದರು.
ಧರ್ಮಸ್ಥಳದಲ್ಲಿ ನ್ಯಾಯದಾನ ಹಿಂದಿನಿಂದಲೂ ಬಂದ ಸಂಪ್ರದಾಯವಾಗಿದೆ. ಇಲ್ಲಿ ಕಾನೂನಿ ಗಿಂತ ದೇವರ ಮೇಲಿನ ನಂಬಿಕೆಯ ಮೇಲೆ ನ್ಯಾಯ ತೀರ್ಮಾನವಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಈಗಾಗಲೇ ಹಮ್ಮಿಕೊಂಡಿರುವ ಮತ್ತು ಪ್ರಧಾನಿ ಕರೆ ನೀಡಿರುವ ಸ್ವಚ್ಚತಾ ಆಂದೋಲನಕ್ಕೆ ನಾವೆಲ್ಲರೂ ಪಣ ತೋಡೋಣ ಎಂದರು.
ಇದೇ ಸಂದರ್ಭ ಜಸ್ಟಿಸ್ ಕುರಿಯನ್ ಜೋಸೆಫ್ ಅವರನ್ನು ಕಾಲೇಜಿನ ವತಿಯಿಂದ ಡಾ. ಡಿ. ವೀರೇಂದ್ರ ಹೆಗ್ಗಡೆ ಸನ್ಮಾನಿಸಿದರು. ಕಾಲೇಜಿನ ಉಪಪ್ರಿನ್ಸಿಪಾಲ್ ಉದಯ ಕುಮಾರ್ ಎಂ ಸನ್ಮಾನ ಪತ್ರ ಓದಿದರು.
ಎಸ್ಡಿಎಂ ಕಾನೂನು ಕಾಲೇಜಿನ ಪ್ರಿನ್ಸಿಪಾಲ್ ಡಾ. ಪಿ. ಡಿ. ಸೆಬಾಸ್ಟಿಯನ್ ಸ್ವಾಗತಿಸಿದರು. ಮಹೇಶ್ಚಂದ್ರ ನಾಯಕ್ ವಂದಿಸಿದರು. ಕಾಲೇಜಿನ ಉಪನ್ಯಾಸಕ ಡಾ. ತಾರಾನಾಥ ಕಾರ್ಯಕ್ರಮ ನಿರೂಪಿಸಿದರು.