ಮಂಗಳೂರು, ಅ.21: ರಾಜ್ಯದ ಸರಕಾರಿ ಆರೋಗ್ಯ ಇಲಾಖೆ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 4,500 ವೈದ್ಯಾಧಿ ಕಾರಿಗಳು ಅ.27ರಂದು ಸಾಮೂಹಿಕ ರಾಜೀನಾಮೆಗೆ ನಿರ್ಧರಿ ಸಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ವೈದ್ಯಾಧಿ ಕಾರಿಗಳ ಸಂಘದ ಅಧ್ಯಕ್ಷ ಡಾ.ಟಿ.ಎ.ವೀರಭದ್ರಯ್ಯ ತಿಳಿಸಿದ್ದಾರೆ.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ತಮ್ಮ ಪ್ರಮುಖ ಬೇಡಿಕೆಗಳಿಗಾಗಿ ಸರಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಮುಂದಾಗಿರುವುದಾಗಿ ಅವರು ಹೇಳಿದರು.
ಸುಮಾರು ಎರಡು ವರ್ಷಗಳ ಹಿಂದೆ ಸರಕಾರಿ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದ್ದರು. ಆ ವೇಳೆ ಮಾಧ್ಯಮಗಳು ವೈದ್ಯರ ಮನವೊಲಿಸಿ ಸರಕಾರದ ಮೂಲಕ ಬೇಡಿಕೆಗಳನ್ನು ಪ್ರಮುಖ ಭರವಸೆ ನೀಡಿದ್ದವು. ಆ ಬಳಿಕ ಕಳೆದ ಫೆಬ್ರವರಿಯಿಂದಲೇ ಮತ್ತೆ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಲಾಗಿತ್ತು.
ರಾಜ್ಯ ಆರೋಗ್ಯ ಸಚಿವರ ಜತೆ ಎರಡು ಸಭೆಗಳು ನಡೆದು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದರೂ ಕ್ರಮ ಆಗಿಲ್ಲ. ಹಾಗಾಗಿ ಅಕ್ಟೋಬರ್ 1ರಂದು ಸಾಮೂಹಿಕ ರಾಜೀನಾಮೆ ನೀಡುವುದಾಗಿ ನೋಟಿಸ್ ನೀಡಿ ಅ.27ರವರೆಗೆ ಮುಂದೂಡಿದ್ದರೂ ಸರಕಾರ ಮಾತುಕತೆಗೆ ಮುಂದಾಗಿಲ್ಲ. ಸಂಘದ ಸದಸ್ಯರೆಲ್ಲರೂ ಸೇರಿ ಒಮ್ಮತದಿಂದ ಈ ನಿರ್ಣಯಕ್ಕೆ ಬಂದಿದ್ದೇವೆ. ಅ.27ರಂದು ಬೆಂಗಳೂರಿನ ಆನಂದ ರಾವ್ ಸರ್ಕಲ್‌ನಲ್ಲಿ ಆಯುಕ್ತರಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿ ಒಂದು ತಿಂಗಳ ಕಾಲಾವಕಾಶವನ್ನು ನೀಡುತ್ತಿದ್ದೇವೆ. ಆ ಸಂದರ್ಭ ಸರಕಾರ ನಮ್ಮ ರಾಜೀನಾಮೆ ಸ್ವೀಕರಿಸಬೇಕು ಇಲ್ಲವೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಡಾ.ವೀರಭದ್ರಯ್ಯ ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನುರಿತ ವೈದ್ಯರಿಗೆ ನೀಡುವ ವೇತನದಲ್ಲಿ ಸಾಕಷ್ಟು ತಾರತಮ್ಯವಿದೆ. ಸಾಕಷ್ಟು ಒತ್ತಡದ ಕೆಲಸ ಹಾಗೂ ಪದೇ ಪದೇ ವರ್ಗಾ ವಣೆಯ ಭೀತಿಯಿಂದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸೇರ್ಪಡೆಗೊಳ್ಳಲು ವೈದ್ಯರು ಹಿಂಜರಿಯುತ್ತಿದ್ದಾರೆ ಎಂದು ವೀರಭದ್ರಯ್ಯ ಹೇಳಿದರು.
ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಆರು ವರ್ಷಗಳೊಳಗೆ ಅನುಭವ ಹೊಂದಿದ ವೈದ್ಯರಿಗೆ 76 ಸಾವಿರ ರೂ. ವೇತನ ದೊರೆತರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ 47 ಸಾವಿರ ರೂ. ವೇತನ.ಆರರಿಂದ 13 ವರ್ಷಗಳ ಸೇವಾನುಭವ ಹೊಂದಿದವರಿಗೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 1,29,000 ರೂ. ವೇತನ ದೊರೆತರೆ, ನಮ್ಮ ಇಲಾಖೆಯಲ್ಲಿ ದೊರೆಯುವುದು 62 ಸಾವಿರ ರೂ.ಗಳು. 13 ವರ್ಷ ಮೇಲ್ಪಟ್ಟು ಅನುಭವ ಹೊಂದಿರುವ ವೈದ್ಯರಿಗೆ ನಮ್ಮ ಇಲಾಖೆಯಲ್ಲಿ 71,000 ರೂ. ವೇತನ ದೊರೆತರೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 1,38,000 ರೂ. ವೇತನ ದೊರೆಯುತ್ತದೆ.
ಇಷ್ಟೊಂದು ವೇತನ ತಾರತಮ್ಯದ ಜತೆಗೆ ದಿನದ 24 ಗಂಟೆಯೂ ಕೆಲಸದ ಒತ್ತಡ ನಮ್ಮ ವೈದ್ಯರಿಗಿರುತ್ತದೆ. ಆದರೆ ಶಿಕ್ಷಣ ಇಲಾಖೆಯಲ್ಲಿ ಆರು ಗಂಟೆಗಳ ಅವಧಿಯ ಕೆಲಸ. ಮಾತ್ರವಲ್ಲದೆ ವರ್ಗಾವಣೆಯ ಭೀತಿಯೂ ಇಲ್ಲ. ಸರಕಾರದ ಆರೋಗ್ಯ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಯೋಜನೆಗಳ ಅನುಷ್ಠಾನದ ಒತ್ತಡವೂ ಇಲ್ಲ. ಹಾಗಾಗಿ ವೈದ್ಯರು ಸ್ವಾಭಾವಿಕವಾಗಿಯೇ ವೈದ್ಯಕೀಯ ಶಿಕ್ಷಣ ಇಲಾಖೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ಡಾ.ವೀರಭದ್ರಯ್ಯ ವಿವರಿಸಿದರು.
ಇತ್ತೀಚೆಗೆ ರಾಜ್ಯದಲ್ಲಿ 600 ನುರಿತ ವೈದ್ಯರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. 300 ಮಂದಿ ಅರ್ಜಿ ಸಲ್ಲಿ ಸಿದ್ದು, ಅದರಲ್ಲಿ ಸಂದರ್ಶನಕ್ಕೆ ಹಾಜರಾದವರು 150 ಮಂದಿ. ಅವರೆಲ್ಲರೂ ಆಯ್ಕೆಯಾಗಿದ್ದರೂ ಕರ್ತವ್ಯಕ್ಕೆ ಸೇರಿಕೊಂಡಿರುವುದು 65 ಮಂದಿ ಮಾತ್ರ. ಇದು ಇಲಾ ಖೆಯ ದುರ್ಗತಿ. ಪ್ರ್ರತಿ ವರ್ಷ 4000ಕ್ಕೂ ಮಿಕ್ಕಿ ವೈದ್ಯ ಶಿಕ್ಷಣ ಪಡೆದು ಹೊರಬರುತ್ತಿದ್ದರೂ ಇಲಾ ಖೆಯಲ್ಲಿ ಶೇ.60ರಷ್ಟು ಕೊರತೆಯಿರುವ ನುರಿತ ವೈದ್ಯ ಹುದ್ದೆಗಳನ್ನು ತುಂಬಲಾಗುತ್ತಿಲ್ಲ. ವೈದ್ಯರನ್ನು ಇಲಾಖೆಯತ್ತ ಆಕರ್ಷಿಸುವ ಕಾರ್ಯವನ್ನು ಮಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಡಾ. ವೀರಭದ್ರಯ್ಯ ಆರೋಪಿಸಿದರು.
ಈ ಬಗ್ಗೆ ಸಮಗ್ರವಾಗಿ ಸಮಾಲೋಚನೆ ಮಾಡುವಂತೆ ಸರಕಾರವನ್ನು ಕೋರಲಾಗಿದ್ದರೂ ಸರಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ವಿವಿಧ ಯೋಜನೆಗಳ ಅನುಷ್ಠಾನಕ್ಕೂ ಇಲಾಖೆಯಲ್ಲಿ ವೈದ್ಯರ ಕೊರತೆ ಕಾಡುತ್ತಿದೆ. ಪ್ರತಿ ತಾಲೂಕು ಕೇಂದ್ರಗಳಲ್ಲಿ ವಾರದಲ್ಲಿ ಎರಡು ದಿನ ಮಾನಸಿಕ ರೋಗಗಳ ತಪಾಸಣೆ ಮಾಡಲು ಸೂಚಿಸಲಾಗಿದೆ. ಮಾನಸಿಕ ತಜ್ಞರ ಕೊರತೆ ಸಾಕಷ್ಟು ಸಂಖ್ಯೆಯಲ್ಲಿರುವಾಗ ಈ ಯೋಜನೆ ಸಮರ್ಪಕವಾಗಿ ಮಾಡುವುದಾದರೂ ಹೇಗೆ? ಔಷಧಿಗಳ ಸರಬರಾಜು ಸಮರ್ಪಕವಾಗಿಲ್ಲ. ಗುಣಮಟ್ಟದ ಔಷಧಿಗಳನ್ನು ಪೂರೈಸ ಲಾಗುತ್ತಿಲ್ಲ ಎಂದು ಅವರು ದೂರಿದರು.
2 ತಿಂಗಳ ಹಿಂದೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಸಭೆ ನಡೆಸಿ ಹಲವಾರು ನಿರ್ಣಯಗಳನ್ನು ಕೈಗೊಂಡಿದ್ದರೂ ಅದನ್ನು ಅನು ಷ್ಠಾನಕ್ಕೆ ತರಲಾಗಿಲ್ಲ. ನುರಿತ ವೈದ್ಯರಿಗೆ 1.25 ಲಕ್ಷ ರೂ. ವೇತನ ನೀಡುವ ಕುರಿತು ಹಣಕಾಸು ವಿಭಾಗಕ್ಕೆ ಅಂಗೀಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಆ ಕಡತವಿನ್ನೂ ನಮ್ಮ ಕಚೇರಿಯಿಂದಲೇ ಸಿದ್ಧವಾಗಿಲ್ಲ. ಇಲಾಖೆಯ ಕಾರ್ಯದರ್ಶಿ ನಿರ್ಲಕ್ಷ ವಹಿಸುತ್ತಿದ್ದಾರೆ. ಸಚಿವರನ್ನೇ ಇಲಾಖೆಯ ಕಾರ್ಯದರ್ಶಿ ನಿಯಂತ್ರಿಸುವಂತಹ ಪರಿಸ್ಥಿತಿ ಇದೆಯೆಂಬ ಅನು ಮಾನ ಕಾಡುತ್ತಿದೆ. ಅಂತಹ ಕಾರ್ಯದರ್ಶಿಯನ್ನು ಬದಲಾಯಿಸುವ ಅಧಿಕಾರ ಸಚಿವರಿಗಿದ್ದರೂ ಅವರು ಆ ಕಾರ್ಯಕ್ಕೆ ಮುಂದಾಗುತ್ತಿಲ್ಲ ಎಂದು ಡಾ.ವೀರಭದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಡಾ.ಚಂದ್ರಮೋಹನ್, ಡಾ.ನಿಕಿನ್ ಶೆಟ್ಟಿ, ಡಾ.ಶಶಿಧರ್, ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಡಾ.ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.