ಕಾಸರಗೋಡು, ಅ.21: ನರ್ಸ್ ಒಬ್ಬರನ್ನು ಕೊಲೆಗೈದು ಹೂತು ಹಾಕಿದ ಪಾಶವೀ ಘಟನೆಯೊಂದು ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯ ಪಾಲುದಾರ ನೀಲೇಶ್ವರ ಕನಿಚ್ಚರದ ಸತೀಶ್ (40) ಎಂಬಾತನನ್ನು ನೀಲೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೊಲೆಗೀಡಾದವರನ್ನು ಚೆರ್ವತ್ತೂರಿನ ಖಾಸಗಿ ಹೋಂ ನರ್ಸ್ ಸಂಸ್ಥೆಯ ನೌಕರೆ ತೃಕ್ಕರಿಪುರ ಒಳವರದ ರಜನಿ (32) ಎಂದು ಗುರುತಿಸಲಾಗಿದೆ.
ಆರೋಪಿ ಸತೀಶನ ಮನೆಯ ಸಮೀಪದ ವ್ಯಕ್ತಿಯೋರ್ವರ ಕ್ವಾರ್ಟಸ್‌ನ ಹಿಂಬದಿಯ ತೆಂಗಿನ ತೋಟದಲ್ಲಿನ ಹೊಂಡದಲ್ಲಿ ಮೃತದೇಹ ಪತ್ತೆಯಾಗಿದೆ. ಸೆ.5ರಂದು ರಜನಿ ನಾಪತ್ತೆಯಾಗಿದ್ದರು. ಸತೀಶ್ ಮತ್ತು ರಜನಿಯ ನಡುವೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ. ರಜನಿ ವಿವಾಹವಾಗುವಂತೆ ಸತೀಶ್‌ನ ಮೇಲೆ ಒತ್ತಡ ಹೇರುತ್ತಿದ್ದರು. ಸತೀಶ್ ಈ ಹಿಂದೆ ಬೇರೊಂದು ವಿವಾಹವಾಗಿದ್ದು, ಮಕ್ಕಳನ್ನು ಹೊಂದಿದ್ದಾನೆ. ಆದರೂ ರಜನಿ ತನ್ನನ್ನು ವಿವಾಹವಾಗುವಂತೆ ಒತ್ತಡ ಹೇರುತ್ತಿದ್ದರು ಎನ್ನಲಾಗಿದೆ.
ಈ ಬಗ್ಗೆ ಇಬ್ಬರ ನಡುವೆ ಸಂಸ್ಥೆಯಲ್ಲಿ ಮಾತಿನ ಚಕಮಕಿ ನಡೆದಿದ್ದು, ರಜನಿಯ ಕತ್ತು ಹಿಸುಕಿ ಕೊಲೆಗೈದ ಸತೀಶ್ ಆಕೆ ಮೃತಪಟ್ಟಿರುವುದಾಗಿ ಖಚಿತ ಪಡಿಸಿದ ಬಳಿಕ ತನ್ನದೇ ಓಮ್ನಿ ಕಾರಿನಲ್ಲಿ ಕೊಂಡೊಯ್ದು ಕನಿಚರದಲ್ಲಿ ಹೊಂಡ ಅಗೆದು ಹೂತು ಹಾಕಿದ್ದನು ಎನ್ನಲಾಗಿದೆ. ರಜನಿಯ ಮನೆಯವರಿಗೆ ಸತೀಶ್‌ನ ಮೇಲೆ ಆರಂಭದಲ್ಲೇ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಸತೀಶ್‌ನನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದ್ದರು. ಆದರೆ ಯಾವುದೇ ವಿಷಯವನ್ನು ಈತ ಬಾಯ್ಬಿಟ್ಟಿರಲಿಲ್ಲ. ಈ ನಡುವೆ ಸತೀಶ್ ತಲೆಮರೆಸಿ ಕೊಂಡಿದ್ದನು. ಇದು ಪೊಲೀಸರಿಗೆ ಸಂಶಯ ಬರಲು ಕಾರಣವಾಗಿತ್ತು. ಈ ನಡುವೆ ತೆಂಗಿನತೋಟದಲ್ಲಿ ಹೊಂಡ ಅಗೆದು ಮೃತದೇಹ ದಫನ ಮಾಡಿರುವ ಬಗ್ಗೆ ಲಭಿಸಿದ ಕುರುಹಿನಂತೆ ಮತ್ತೆ ಸತೀಶ್‌ನನ್ನು ವಶಕ್ಕೆ ಪಡೆದು ವಿಚಾರ ನಡೆಸಿದಾಗ ಈತ ತಪ್ಪೊಪ್ಪಿಕೊಂಡ ನೆನ್ನಲಾಗಿದೆ.
ಬಳಿಕ ಸೋಮವಾರ ಬೆಳಗ್ಗೆ ಹೊಂಡವನ್ನು ಅಗೆದು ಮೃತದೇಹವನ್ನು ಹೊರತೆಗೆಯಲಾಯಿತು. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ರಜನಿ ನಾಪತ್ತೆಯಾಗಿರುವ ಕುರಿತು ಸೆ. 18ರಂದು ಈಕೆಯ ತಂದೆ ಕಣ್ಣನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.
ರವಿವಾರ ತೆಂಗಿನತೋಟದ ಪೊದೆ ಹಾಗೂ ಹುಲ್ಲು ತೆಗೆಯುತ್ತಿದ್ದ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿದ್ದು, ಹಾಗೂ ಸಮೀಪದಲ್ಲಿ ಹೊಂಡ ಅಗೆದ ಸ್ಥಿತಿಯಲ್ಲಿತ್ತು. ಇದರಿಂದ ಸಂಶಯಗೊಂಡು ಬಳಿಕ ಇಲ್ಲಿನ ಠಾಣಾ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದರು. ಈ ನಡುವೆ ಸತೀಶ್‌ನನ್ನು ಮತ್ತೆ ವಿಚಾರಣೆಗೊಳಪಡಿಸಿದಾಗ ಸತ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.