ಕುಂದಾಪುರ: 10 ದಿನಗಳಿಂದ ಕುಂಭಾಶಿಯ ಅಂಬೇಡ್ಕರ್ ಭವನದಲ್ಲಿ ನಡೆಯುತ್ತಿದ್ದ ಕೊರಹ ಮಕ್ಕಳ ವಿಶೇಷ ತರಬೇತಿ ಮತ್ತು ವಿಕಸನ ಶಿಬಿರ ‘ಜೆರೆನೊ ಕೊಟ್ಟ-೨೦೧೪’ ಕಾರ್ಯಕ್ರಮವು ಮಂಗಳವಾರ ಸಮಾಪನಗೊಂಡಿತು.
ಉಡುಪಿ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣ ಶೆಟ್ಟಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹಿಂದುಳಿದ ಕೊರಗ ಸಮಾಜದವರು ಮುಖ್ಯಮಾಹಿನಿಗೆ ಬರಬೇಕು, ಸಾಮಜದ ಎಲ್ಲಾ ರಂಗದಲ್ಲಿ ಮುಂದೆ ಬರುವ ಮೂಲಕ ಸ್ವಾವಲಂಬಿಗಳಾಗಬೇಕು. ಕೊರಗ ಮಕ್ಕಳಲ್ಲಿ ವಿಶೇಷವಾದ ಪ್ರತಿಭೆಯಿದ್ದು ಅದನ್ನು ಆಸಕ್ತಿಯಿಂದ ಸದುಪಯೋಗಪಡಿಸಿಕೊಂಡು ಸಾಮಜದಲ್ಲಿ ಉತ್ತಮ ಸ್ಥಾನಕ್ಕೆ ಬರಬೇಕು. ಯಾರೂ ಕೂಡ ಶಾಲೆಗೆ ಹೋಗುವುದನ್ನು ತಪ್ಪಿಸಬಾರದು, ಶಿಕ್ಷಣದಿಂದ ನಾವು ಮೇಲ್ಸ್ತರಕ್ಕೆ ಏರಲು ಸಾಧ್ಯವಿದೆ. ಇಲಾಖೆಗೆ ನಿಮಗೆ ಬೇಕಾದ ಅಗತ್ಯತೆಗಳನ್ನು ಗಮನಕ್ಕೆ ತಂದು ಸಂಪೂರ್ಣವಾಗಿ ಅದನ್ನು ಪಡೆಯಬೇಕು ಎಂದರು.
ಕುಂದಾಪುರ ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘ (ರಿ.) ಕುಂದಾಪುರ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಉಡುಪಿ, ಅಕ್ಷರ ಕೊರಗ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಕುಂದಾಪುರ ಇವರ ಸಹಯೋಗದಲ್ಲಿ 10 ದಿನಗಳ ಕಾಲ ಈ ಶಿಬಿರ ನಡೆದಿತ್ತು. ಶಿಬಿರದಲ್ಲಿ ದಿನಕ್ಕೊಂದು ವಿಚಾರದಲ್ಲಿ ಸುಮಾರು ೪೦ಕ್ಕೂ ಅಧಿಕ ಮಕ್ಕಳಿಗೆ ತರಬೇತಿ ನೀಡಲಾಗಿತ್ತು.
ಸಭಾ ಕಾರ್ಯಕ್ರಮಕ್ಕೂ ಮೊದಲು ನಡೆದ ಕೊರಗ ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳನ್ನು ನೋಡಿ ಖುದ್ದು ಜಿಲ್ಲಾಧಿಕಾರಿಗಳು ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮದಿಂದ ನಿರ್ಗಮಿಸುವ ವೇಳೆಯೂ ಮಕ್ಕಳೊಂದಿಗೆ ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡಿದ ಅವರು ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿಯೂ ತಿಳಿಸಿದರು.
ಕಾರ್ಯಕರಮದಲ್ಲಿ ಉಡುಪಿ ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕನಗವಲ್ಲಿ, ಕುಂದಾಪುರ ತಹಶಿಲ್ದಾರ್ ಗಾಯತ್ರಿ ನಾಯಕ್, ಐಟಿಡಿಪಿ ಅಧಿಕಾರಿ ಎಚ್.ಎಸ್. ಪ್ರೇಮನಾಥ್, ಜಿಲ್ಲಾ ವಾರ್ತಾಧಿಕಾರಿ ರೋಹಿಣಿ, ಕುಂಭಾಸಿ ಗ್ರಾ.ಪಂ. ಅಧ್ಯಕ್ಷ ಗೋವಿಂದ ಪುತ್ರನ್, ಕ್ಷೇತ್ರ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಶಿಕ್ಷಕಿ ಭಾರತಿ ಮೊದಲಾದವರಿದ್ದರು.
ಕಾರ್ಯಕ್ರಮದ ಕೊನೆಯಲ್ಲಿ ನೆನಪಿನ ಕಾಣಿಕೆಯಾಗಿ ಇಲ್ಲಿನ ಕೊರಗ ಮಹಿಳೆಯರು ಹೆಣೆದ ಬುಟ್ಟಿಯನ್ನು ನೀಡಲಾಗಿತ್ತು.