ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ `ನಮ್ಮ ಕುಡ್ಲ’ ತುಳುವಾರ್ತಾವಾಹಿನಿ ವತಿಯಿಂದ ಹಮ್ಮಿಕೊಂಡ ದೀಪಾವಳಿ ಪ್ರಯುಕ್ತದ ಗೂಡುದೀಪದ ಸ್ಪರ್ಧೆ ಮಂಗಳವಾರ ಸಂಜೆ ಆರಂಭಗೊಂಡಿತ್ತು. ಮನಪಾ ಮೇಯರ್ ಮಹಾಬಲ ಮಾರ್ಲ ಅವರು ಗೂಡುದೀಪ ಸ್ಪರ್ಧೆಗೆ ಚಾಲನೆ ನೀಡಿದರು.
ಸಮಾರಂಭದಲ್ಲಿ ಕುದ್ರೋಳಿ ಗೋಕರ್ಣನಾಥ ದೇವಳ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್.ಸಾಯಿರಾಮ, ರಾಘವೇಂದ್ರ ಕೂಳೂರು, ರಮೇಶ್‌ಕುಮಾರ್, ಊರ್ಮಿಳಾ ರಮೇಶ್, ಡಾ.ಬಿ.ಜಿ. ಸುವರ್ಣ, ಬಿ.ಪಿ.ಕರ್ಕೇರ, ಲೀಲಾಕ್ಷ ಕರ್ಕೇರ, ಮೋಹನ್ ಕರ್ಕೆರ, ಆನಂದ ಮಿಜಾರ್, ಭಾಸ್ಕರ ರೈ ಕುಕ್ಕುವಳ್ಳಿ, ದಾಮೋದರ ನಿಸರ್ಗ, ಕದ್ರಿ ನವನೀತ ಶೆಟ್ಟಿ ಮತ್ತಿತರರು ಅತಿಥಿಗಳಾಗಿ ಉಪಸ್ಥಿತರಿದ್ದರು.
ಗೂಡು ದೀಪದ ಮೂಲಕ ಅರಳಿದ ಕಲೆ:
ಕುದ್ರೋಳಿ ಗೋಕರ್ಣನಾಥ ದೇವಸ್ಥಾನ ವಠಾರದಲ್ಲಿ ವಿವಿಧ ರೀತಿಯ ವಿಶಿಷ್ಟವಾದ ವಿನ್ಯಾಸದ ಗೂಡುದೀಪ ಸ್ಪರ್ಧೆ ಪ್ರೇಕ್ಷಕರನ್ನು ಮೋಡಿಗೊಳಿಸಿತು. ಸ್ಥಳೀಯ ಪರಿಸರದ ಬತ್ತದ ತೆನೆಗಳಿಂದ, ಗಾಜಿನ ಬಳೆಯಿಂದ, ಧವಸ ಧಾನ್ಯಗಳಿಂದ, ತರಕಾರಿಗಳಿಂದ ಹಾಗೂ ಸ್ಥಳೀಯವಾಗಿ ದೊರಕುವ ವಸ್ತುಗಳಿಂದ ನಿರ್ಮಿಸಲಾದ ಗೂಡುದೀಪ ಜನಮನವನ್ನು ರಂಜಿಸಿತು.
ತೆಂಗಿನ ಗರಿಯನ್ನು ಹೆಣೆದು ಮಾಡಿದ ಗೂಡುದೀಪ, ಬಸಳೆ ಸೊಪ್ಪು, ಕೊತ್ತಂಬರಿ ಬೀಜ ಮತ್ತು , ಹಸಿಮೆಣಸಿನಕಾಯಿ, ಬತ್ತ ಹೆಣೆದು ಕಟ್ಟಿದ ಆಕಾಶಬುಟ್ಟಿ, ಬಟ್ಟೆಯ ಗುಂಡಿಗಳನ್ನು ಅಂಟಿಸಿದ ಬಟನ್ ಗೂಡುದೀಪ….!
ತ್ರಿವರ್ಣ ಧ್ವಜದ ಗೂಡುದೀಪ, ಕೇರಳ ಉಡುಪು ಶೈಲಿಯ ಗೂಡುದೀಪ, ಕೌಶಿಕ್ ಯುದ್ಧ ಹೆಲಿಕಾಫ್ಟರ್, ಹೊಸ ದಿಲ್ಲಿಯ ಅಕ್ಷರಧಾಮ ದೇಗುಲ, ಕನಕಪುರದ ಇಸ್ಕಾನ್ ದೇವಸ್ಥಾನದ ಪ್ರತಿಕೃತಿ…
ಹೀಗೆ ಗೂಡುದೀಪ ತಯಾರಕರ ಸೃಜನಶೀಲತೆ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದು ನಮ್ಮ ಕುಡ್ಲ ಚಾನೆಲ್ ಮಂಗಳವಾರ ಏರ್ಪಡಿಸಿದ್ದ ಗೂಡುದೀಪ ಪಂಥದಲ್ಲಿ. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮೂರು ಸಭಾಂಗಣಗಳ ತುಂಬ ಬಣ್ಣ , ಬಣ್ಣದ ಬೆಳಕಿನ ಚಿತ್ತಾರಗಳನ್ನು ಮೇಳೈಸಿದ ಗೂಡುದೀಪಗಳ ಸಾಲು. ಸಾಂಪ್ರದಾಯಿಕ, ಆಧುನಿಕ ಮತ್ತು ಪ್ರತಿಕೃತಿ ಎಂಬ ಮೂರು ವಿಭಾಗಳಲ್ಲಿ ನಡೆದ ಸ್ಪರ್ಧೆಯಲ್ಲಿ 750ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಕೋಡಿಕಲ್‌ನ ಸುರೆಂದ್ರ ಮತ್ತು ಸ್ನೇಹಿತರು 4,000 ಬಟ್ಟೆಯ ಗುಬ್ಬಿಗಳನ್ನು ಬಳಸಿ ಸಿದ್ಧಪಡಿಸಿದ ಗೂಡುದೀಪ ಎಲ್ಲರ ಗಮನ ಸೆಳೆಯುತ್ತಿತ್ತು. ಕಟೀಲು ಶ್ರೀದೇವಿಯ ಪ್ರಭಾವಳಿಯ ಪ್ರತಿಕೃತಿ, ಕೆನರಾ ಹೈಸ್ಕೂಲ್‌ನ ರಾಕೇಶ್ ಮತ್ತು ಡ್ಯಾನಿಷ್ ಅವರ ತುಳಸಿಕಟ್ಟೆ, ಯೆಯ್ಯಾಡಿಯ ಕೌಶಿಕ್ ಮತ್ತು ಮನೆಯವರ ಹೆಲಿಕಾಪ್ಟರ್, ತೊಕ್ಕೊಟ್ಟು ನಿತ್ಯಾನಂದ ಯುವಕ ಮಂಡಲದ ಸದಸ್ಯರು 1,54,813 ಗುಂಡು ಸೂಜಿ ಬಳಸಿ ಸಿದ್ಧಪಡಿಸಿದ ಗೂಡುದೀಪ, ಕಿಶೋರ್ ತೊಕ್ಕೊಟ್ಟು ಅವರ ಐಫೆಲ್ ಟವರ್ ವಿಶೇಷವಾಗಿ ಗಮನಸೆಳೆದವು. ಮಾಸ್ಟರ್ ಗೈಸ್ 1000 ಮೀಟರ್ ಫ್ಲೆಕ್ಸಿಬಲ್ ಪೈಪ್ ಬಳಸಿ ಸಿದ್ಧಪಡಿಸಿದ ಗಣಪತಿ ಪ್ರತಿಕೃತಿ ದೇವಸ್ಥಾನದ ಹೊರ ಆವರಣದಲ್ಲಿ ಗಮನಸೆಳೆಯುತ್ತಿತ್ತು.
3 ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ :
ಸಾಂಪ್ರದಾಯಿಕ, ಆಧುನಿಕ ಮತ್ತು ವಿಶೇಷ ಮಾದರಿ (ಪ್ರತಿಕೃತಿ-ಮೋಡೆಲ್)ಹೀಗೆ 3 ವಿಭಾಗಗಳಲ್ಲಿ ಗೂಡುದೀಪ ಸ್ಪರ್ಧೆ ನಡೆಯಿತು. ಪ್ರತಿಯೊಂದು ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸುವ ಗೂಡುದೀಪಗಳಿಗೆ ಚಿನ್ನದ ಪದಕದ ಬಹುಮಾನ ನೀಡಲಾಯಿತು. ತೀರ್ಪುಗಾರರ ಮೆಚ್ಚುಗೆ ಪಡೆದ ಆಯ್ದ ಗೂಡು ದೀಪಗಳಿಗೆ ಪ್ರೋತ್ಸಾಹ ಬಹುಮಾನಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ವಿತರಿಸಲಾಯಿತು. ಅತೀ ಹೆಚ್ಚು ಗೂಡುದೀಪಗಳನ್ನು ತಂದ ಸಂಸ್ಥೆಗಳಿಗೆ ವಿಶೇಷ ಬಹುಮಾನ ನೀಡಲಾಯಿತು.
ನಮ್ಮ ಕುಡ್ಲ ಗೂಡುದೀಪ ಪಂಥ – ಸಾಧಕರಿಗೆ ಸನ್ಮಾನ
ತುಳುನಾಡಿನಲ್ಲಿ ಜನಿಸಿ, ತುಳು ಮಣ್ಣಿನ ಮಹತ್ವವನ್ನು ದೇಶವಿದೇಶಗಳಲ್ಲಿ ಹರಡಿ ಖ್ಯಾತಿವೆತ್ತು, ಶಿಕ್ಷಣ – ಸಂಸ್ಕೃತಿ- ಸಮಾಜಸೇವೆ-ಉದ್ಯಮ ರಂಗ ಇತ್ಯಾದಿ ಕ್ಷೇತ್ರಗಳಲ್ಲಿ ಶ್ರೇಷ್ಠಮಟ್ಟದ ಸಾಧನೆ ಮಾಡಿ ನಾಡಿಗೆ ಗೌರವ ತಂದು ಕೊಟ್ಟ ವ್ಯಕ್ತಿಗಳಿಗೆ ಕೊಡಮಾಡುವ ನಮ್ಮ ತುಳುವೆ ವಿಶೇಷ ಪ್ರಶಸ್ತಿಯನ್ನು ಈ ಬಾರಿ ಕರ್ಣಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಶ್ರೀ ಪಿ. ಜಯರಾಂ ಭಟ್‌ರವರಿಗೆ ನೀಡಿ ಗೌರವಿಸಲಾಯಿತು.
ಗೂಡುದೀಪ ಪಂಥ ಸಂದರ್ಭದಲ್ಲಿ ತುಳುನಾಡಿನ ವ್ಯಾಪ್ತಿಯೊಳಗೆ ಸಾಹಿತ್ಯ-ಕಲೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ವಿಶೇಷ ಸೇವೆ ಸಲ್ಲಿಸಿದವರಿಗೆ ಪ್ರತಿವರ್ಷ ನೀಡುವ ನಮ್ಮ ಕುಡ್ಲ ಪ್ರಶಸ್ತಿಯನ್ನು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಇವರಿಗೆ ನೀಡಿ ಗೌರವಿಸಲಾಯಿತು.
ಇದೇ ಮೊದಲ ಬಾರಿಗೆ ನಮ್ಮ ಕುಡ್ಲ – ಬಿರ್‍ಸೆ ಪ್ರಶಸ್ತಿಯನ್ನು ಆಕಸ್ಮಿಕವಾಗಿ ನಡೆದ ಘಟನೆಯಿಂದ ತನ್ನ ಎರಡೂ ಕೈಗಳನ್ನು ಕಳೆದುಕೊಂಡರೂ ಸ್ವಾವಲಂಬಿಯಾಗಿ ಕೆಲಸ ಮಾಡಿ ಹತ್ತಾರು ಮಂದಿಗೆ ಉದ್ಯೋಗ ನೀಡಿ ನೂರಾರು ಕೈಗಳಿಗೆ ತುತ್ತು ನೀಡುವ ಯಶಸ್ವಿ ಉದ್ದಿಮೆದಾರ ಜಿ.ಕೆ. ಡೆಕೊರೇಟರ್‍ಸ್ ಮಾಲಕ ಶ್ರೀಗಣೇಶ್ ಕಾಮತ್ ಮೂಡಬಿದಿರೆ ಇವರಿಗೆ ನೀಡಿ ಗೌರವಿಸಲಾಯಿತು.
ನಮ್ಮ ಕುಡ್ಲ ಮಾನದಿಗೆದ ಸಮ್ಮನ ಪ್ರಶಸ್ತಿಯನ್ನು ಬಹುಮುಖ ಪ್ರತಿಭೆ ಮಾ.ರಾಹುಲ್ ತುಷಾರ್ ಕುಂದರ್(ಎಮ್.ಬಿ.ಎ) ಇವರಿಗೆ ನೀಡಿ ಗೌರವಿಸಲಾಯಿತು.