ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಈ ಬಾರಿಯ ದೀಪಾವಳಿ ಲಕ್ಷ್ಮೀ ಪೂಜೆಯ ಸಂದರ್ಭದಲ್ಲಿ ಸಾವಿರಾರು ವಿಧವೆಯರಿಗೆ ಪೂಜೆಯಲ್ಲಿ ಪಾಲ್ಗೊಳಲು ಅವಕಾಶ ನೀಡಲಾಯಿತು. ಇಂದು ಬೆಳಗ್ಗೆ 10 ಗಂಟೆಗೆ ಬೆಳ್ಳಿ ರಥದಲ್ಲಿ ಲಕ್ಷ್ಮೀ ಮತ್ತು ವಿಷ್ಣು ದೇವರ ಮೂರ್ತಿಗಳನ್ನಿರಿಸಿ ಅದರಲ್ಲಿ ಪತಿ ಕಳಕೊಂಡ ಮಹಿಳಾ ಅರ್ಚಕಿಯರು ಪೂಜೆಮಾಡಿದರು ಅ ಬಳಿಕ ಅ ರಥವನ್ನು ವಿಧವೆಯರು ಎಳೆದು ಪೂಜೆಯಲ್ಲಿ ಪಾಲ್ಗೊಂಡರು. ಜೊತೆಗೆ ಇತರ ಮಹಿಳೆಯರೂ ಇಂದಿನ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವಿವಿದೆಡೆಗಳಿಂದ ಆಗಮಿಸಿದ ಪತಿ ಕಳೆದುಕೊಂಡ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು . ಕಾರ್ಯಕ್ರಮದಲ್ಲಿ ಭಾಗವಹಿಸಿದ ಪತಿ ಕಳಕೊಂಡ ಮಹಿಳೆರಿಗೆ ಸೀರೆ, ರವಿಕೆ ಕಣ, ಕುಂಕುಮದ ಕರಡಿಗೆ ಮತ್ತು ಒಂದು ರೂ. ನಾಣ್ಯವನ್ನು ಕ್ಷೇತ್ರದ ವತಿಯಿಂದ ನೀಡಲಾಯಿತು. ಮಾತ್ರವಲ್ಲದೇ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಬೆಳಗ್ಗಿನ ಉಪಹಾರ ಹಾಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ವಿಧವೆಯರಿಗೂ ಸಮಾಜದಲ್ಲಿ ಸಮಾನಾದ ಸ್ಥಾನಮಾನ ನಮ್ಮ ಉದ್ದೇಶ : ಪೂಜಾರಿ
ಈ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಅಯೋಜಿಸಿ ನೇತ್ರತ್ವ ವಹಿಸಿದ್ದ, ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರು ಮಾತನಾಡಿ, ಇತ್ತೀಚೆಗಷ್ಟೇ ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ದಲಿತ ಸಮುದಾಯದ ಇಬ್ಬರು ವಿಧವೆಯರನ್ನು ಅರ್ಚಕಿಯರಾಗಿ ಮಾಡುವ ಮೂಲಕ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದೇವೆ. ಇದೀಗ ಸಾವಿರಾರು ವಿಧವೆಯರಿಗೆ ಪೂಜೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದೇವೆ. ಈ ಮೂಲಕ ವಿಧವೆಯರ ಮೇಲಿರುವ ಪೂರ್ವಾಗ್ರಹ ಪೀಡಿತ ಧೋರಣೆ ಬಿಟ್ಟು ಬಿಡುವಂತೆ ಮಾಡುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ಜೆ.ಆರ್.ಲೋಬೋ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಕಾರ್ಪೊರೇಟರ್ ನವೀನ್ ಡಿ’ಸೋಜ, ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತಾ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ನವೀಕರಣ ಸಮಿತಿಯ ಸದಸ್ಯರಾದ ಡಾ.ಬಿ.ಜಿ.ಸುವರ್ಣ, ಮಹೇಶ್ಚಂದ್ರ, ರವಿಶಂಕರ್ ಮಿಜಾರ್, ಹರಿಕೃಷ್ಣ ಬಂಟ್ವಾಳ, ಶೇಖರ ಪೂಜಾರಿ, ಲೀಲಾಕ್ಷ ಕರ್ಕೇರಾ ಮುಂತಾದವರು ಉಪಸ್ಥಿತರಿದ್ದರು.