ಮಂಗಳೂರು: ಬದಲಾಗುತ್ತಿರುವ ಕಾಲ ಘಟ್ಟದಲ್ಲಿ ಆಧುನಿಕತೆಯ ಅಡಂಬರಕ್ಕೆ ಹಲವಾರು ಅಮೂಲ್ಯ ಪ್ರಾಚೀನ ವಸ್ತುಗಳು ಕಣ್ಮರೆಯಾಗುತ್ತಿದೆ. ಹೀಗೆ ನಾಶವಾಗಿ ಕಣ್ಮರೆಯಾಗುತ್ತಿರುವ ಪ್ರಾಚ್ಯ ವಸ್ತುಗಳನ್ನು ಕಾಪಾಡಿಕೊಂಡು ಬರುವ ಕಾರ್ಯವನ್ನು ಕಾರ್ಕಳದ ಶ್ರೀ ದತ್ತ ತುಳು ಜಾನಪದ ಕೇಂದ್ರವು ಮಾಡುತ್ತಿದ್ದು ಪ್ರಾಮುಖ್ಯತೆ ಪಡೆದಿದೆ.
ಕಾರ್ಕಳದ ತಾಲೂಕಿನ ನೆಲ್ಲಿಕಟ್ಟೆ ಗ್ರಾಮದಲ್ಲಿರುವ ಶ್ರೀ ದತ್ತ ತುಳು ಜಾನಪದ ಕೇಂದ್ರದಲ್ಲಿ ನೂರಾರು ವರ್ಷ ಹಳೆಯದಾದ ಸಾಂಪ್ರದಾಯಿಕ ವಸ್ತುಗಳು, ಪುರಾತನ ನಾಣ್ಯಗಳು, ಆಯುಧಗಳು ಇತ್ಯಾದಿ ವಸ್ತುಗಳನ್ನು ಕಾಣಬಹುದಾಗಿದೆ. ಇಂತಹ ಅಮೂಲ್ಯ ಪ್ರಾಚೀನ ವಸ್ತುಗಳ ತಾಣವಾಗಿರುವ ಶ್ರೀ ದತ್ತ ತುಳು ಜಾನಪದ ಕೇಂದ್ರವನ್ನು ಸುಧಾಕರ ಶೆಟ್ಟಿ ಹಾಗೂ ಎಸ್. ಅಶಿತಾ ಶೆಟ್ಟಿ ದಂಪತಿಗಳು ಸ್ಥಾಪನೆ ಮಾಡಿದ್ದು, ಪುರತಾನ ವಸ್ತುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ.
ರಾಜರ ಕಾಲದ ಪ್ರಾಚ್ಯ ನಾಣ್ಯಗಳು:
ಗುಪ್ತ, ಮೌರ್ಯ, ಶಾತವಾಹನ, ಪಾಂಡ್ಯರು, ಕುಶಾನರು, ಚೋಳರು ಇನ್ನಿತರ ಸುಮಾರು 75 ರಾಜರ ಆಳ್ವಿಕೆಯಲ್ಲಿ ಬಳಕೆಯಾಗಿರುವ ನಾಣ್ಯಗಳ ಸಂಗ್ರಹವನ್ನು ಇಲ್ಲಿ ಕಾಣಬಹುದಾಗಿದೆ. ಈ ಪ್ರಾಚ್ಯ ನಾಣ್ಯಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಸಕ್ತಿಯನ್ನು ಮೂಡಿಸುವಂತಿದೆ. ಅಲ್ಲದೇ ಸುಮಾರು 90 ದೇಶ-ವಿದೇಶಗಳ ವಿವಿಧ ಮುಖಬೆಲೆಯ ನೋಟುಗಳನ್ನು ಇಲ್ಲಿ ಕಾಣಬಹುದಾಗಿದೆ. ಈ ಎಲ್ಲಾ ನಾಣ್ಯವನ್ನು ಎಸ್. ಅಶಿತಾ ಶೆಟ್ಟಿ ಅವರು ಸಂಗ್ರಹಿಸಿದ್ದು ಬಹಳಷ್ಟು ಮುತುವರ್ಜಿಯಿಂದ ಕಾಪಾಡಿಕೊಂಡು ಬಂದಿದ್ದಾರೆ.
ಸಾಂಪ್ರದಾಯಿಕ ಪರಿಕರಗಳು:
ಹಿಂದೆ ತುಳುನಾಡಿನ ಮನೆಗಳಲ್ಲಿ ಬಳಸುತ್ತಿದ್ದ ಸಾಂಪ್ರದಾಯಿಕ ಕೃಷಿ ಸಲಕರಣೆಗಳು, ಭೂತಕೋಲ, ಯಕ್ಷಗಾನ, ಕಂಬಳ ಇತ್ಯಾದಿ ಸಾಂಪ್ರದಾಯಿಕ ಪರಿಕರಗಳನ್ನು ಶ್ರೀ ದತ್ತ ತುಳು ಜಾನಪದ ಕೇಂದ್ರದಲ್ಲಿ ಕಾಣಬಹುದಾಗಿದೆ.
ಅಲ್ಲದೇ ಹಳೆಯ ಕಾಲದಲ್ಲಿ ಮನೆಯಲ್ಲಿ ನಿತ್ಯ ಬಳಕೆಗೆ ಉಪಯೋಗಿಸುತ್ತಿದ್ದ ಮರದ ದೀಪಕಂಬ, ವಿವಿಧ ಪ್ರಾಣಿಯಾಕಾರದಲ್ಲಿರುವ ಕತ್ತರಿಗಳು, ಆಯುಧಗಳು, ನಾನಾ ¨ಗೆಯ ಹಿತ್ತಳೆ ಹಾಗೂ ಕಂಚಿನ ಪಾತ್ರೆಗಳು, ತೂಕದ ಕಲ್ಲುಗಳು ಮುಂತಾದ ವಸ್ತುಗಳ ಸಂಗ್ರಹವಿದೆ.
ಬ್ರಿಟಿಪರ ಕಾಲದ ಕಾಫಿ ಫಿಲ್ಟರ್:
ಸುಮಾರು ನೂರು ವರ್ಷಗಳಿಗೂ ಹಳೆಯ ಬ್ರಿಟಿಷರ ಕಾಲದಲ್ಲಿ ಬಳಸುತ್ತಿದ್ದ ಕಾಫಿ ಫಿಲ್ಟರ್ ಸುಂದರವಾಗಿದ್ದು ಅಂದಿನ ಕಾಲದ ತಂತ್ರಜ್ಞಾನಕ್ಕೆ ಮನಸೋಲುವಂತೆ ಮಾಡುತ್ತದೆ. ಅಲ್ಲದೇ ಅಂದು ಬ್ರಿಟಿಷರು ಬಳಸುತ್ತಿದ್ದ ಮದ್ಯದ ಬಾಟಲಿಗಳೂ ಕೂಡ ಇಲ್ಲಿ ಕಾಣಬಹುದಾಗಿದ್ದು ಆಕರ್ಷಕವಾಗಿದೆ. ಇನ್ನುಳಿದಂತೆ ಚೀನಿ ಪ್ರಭಾವದ ಹಪ್ಪಳದ ಬಾನಿಯೊಂದಿದ್ದು ಡ್ರಾಗನ್ ಚಿತ್ರಗಳಿಂದ ಕೂಡಿದೆ.
ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಹಳೆಯ ಪ್ರಾಚ್ಯ ವಸ್ತುಗಳನ್ನು ಕಾಪಾಡಿಕೊಂಡು ಬರುತ್ತಿರುವ ಸುಧಾಕರ ಶೆಟ್ಟಿ ಅವರು ವೃತ್ತಿಯಲ್ಲಿ ಇತಿಹಾಸ ಉಪನ್ಯಾಕರಾಗಿದ್ದು ಪ್ರಸ್ತುತ ಬಜ್ಪೆಯ ಶ್ರೀ ನಿರಂಜನ ಸ್ವಾಮಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಎಸ್. ಆಶಿತಾ ಶೆಟ್ಟಿ ಅವರು ಮಂಗಳೂರಿನ ಇನ್ಪೋಸಿಸ್ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಾಚೀನ ವಸ್ತುಗಳ ಮೇಲಿರುವ ಇವರ ಒಲುವಿಗೆ ಇಂದು ನೂರಾರು ಪುರಾತನ ವಸ್ತುಗಳ ಸಂಗ್ರಹವಿರುವ ಶ್ರೀ ದತ್ತ ತುಳು ಜಾನಪದ ಕೇಂದ್ರವು ಸಾಕ್ಷಿಯಾಗಿದೆ.
ವರದಿ : ರವಿರಾಜ್ ಕಟೀಲು