ಮಂಗಳೂರು, ಅ.25: ನಗರದ ಉರ್ವ ಮಾರಿಗುಡಿ ಸಮೀಪದ ಮನಪಾ ರಂಗ ಮಂಟಪದ ಎದುರಿನ ಜಗುಲಿಯಲ್ಲಿ ಚೂರಿಯಿಂದ ಇರಿದು ಹಾಗೂ ಕಲ್ಲು ಎತ್ತಿ ಹಾಕಿ ನಂದಕುಮಾರ್ ಎಂಬಾತ ನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಉರ್ವಾ ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪಚ್ಚನಾಡಿಯ ದೇವಿನಗರ ಆಶ್ರಯ ಕಾಲನಿಯ ನಿವಾಸಿ ನಿತಿನ್‌ರಾಜ್ ಶೆಟ್ಟಿ (21), ಮುಕ್ಕ ಮಲ್ಲಮಾರ್ ಹೌಸ್‌ನ ವಿಶಾಲ್ ಕುಮಾರ್ (22), ಕೋಡಿಕಲ್ ಗೋಕುಲ್ ಡೈರಿಯ ಬಳಿಯ ನಿವಾಸಿ ಪ್ರಜ್ವಲ್ (19) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಉಳ್ಳಾಲದ ಪ್ಯಾರಿಸ್ ಹೊಟೇಲ್ ಬಳಿಯಿಂದ ಮಂಗಳೂರು ಪೊಲೀಸರು ಬಂಧಿಸಿದ್ದು, ಉರ್ವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.
ಅಜ್ಜನ ಕೊಲೆಗೆ ಪ್ರತಿಕಾರ..!
3 ವರ್ಷದ ಹಿಂದೆ ಆರೋಪಿಗಳ ಪೈಕಿ ನಿತಿನ್‌ರಾಜ್ ಶೆಟ್ಟಿ ಎಂಬಾತನ ಅಜ್ಜ ವೆಂಕಟೇಶ್ ಎಂಬವರನ್ನು ಪಿಕ್‌ಪಾಕೆಟ್ ಮಾಡಿ ಬಳಿಕ ಅವರ ಕೊಲೆ ಮಾಡಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ನಂದಕುಮಾರ್ ಆರೋಪಿಯಾಗಿದ್ದ. ತನ್ನ ಅಜ್ಜನ ಸಾವಿಗೆ ಪ್ರತಿಕಾರವಾಗಿ ನಿತಿನ್‌ರಾಜ್ ಶೆಟ್ಟಿಯು ತನ್ನ ಜೊತೆ ಪೈಂಟಿಂಗ್ ಕೆಲಸ ಮಾಡುವ ಇತರೊಂದಿಗೆ ಸೇರಿ ಕೊಲೆ ನಡೆಸಿರುವುದಾಗಿ ತಿಳಿದು ಬಂದಿದೆ.
ಕಳೆದ ಎರಡು ವರ್ಷಗಳಿಂದ ಮನೆಯಿಂದ ಪರಿತ್ಯಕ್ತನಾಗಿದ್ದ ನಂದಕುಮಾರ್ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ, ಅತಿಯಾದ ಮದ್ಯ ವ್ಯಸನಿಯಾಗಿದ್ದರಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ರಿಕ್ಷಾವನ್ನು ಮಾರಾಟ ಮಾಡಿ ಎಲೆಕ್ಟ್ರೀಶಿಯನ್ ಕೆಲಸ ಮಾಡಿಕೊಂಡಿದ್ದು, ದಿನಾ ರಾತ್ರಿ ಉರ್ವಾ ಮಾರಿಗುಡಿ ಎದುರಿನ ಮನಪಾ ಬಯಲು ರಂಗಮಂದಿರದಲ್ಲಿ ಮಲಗುತ್ತಿದ್ದ ಎಂದು ಹೇಳಲಾಗಿದೆ.
ಸಿಸಿಬಿ ಇನ್‌ಸ್ಪೆಕ್ಟರ್ ವೆಲೆಂಟೈನ್ ಡಿ’ಸೋಜ, ಎಸ್‌ಐ ಶ್ಯಾಮಸುಂದರ್ ಹಾಗೂ ಸಿಬ್ಬಂದಿ, ಉರ್ವ ಇನ್‌ಸ್ಪೆಕ್ಟರ್ ರಾಮಚಂದ್ರ ಮಾಳೆದೇವರ್, ಎಸ್ಸೈ ಪೂವಪ್ಪ ಎಚ್.ಎಂ. ಮತ್ತು ವಿಶಾಲಾಕ್ಷಿ, ಎಎಸ್ಸೈ ಕರುಣಾಕರ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.