ಕರಾವಳಿ

ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮಹಿಳಾ ವಿಶೇಷ ಚಿಕಿತ್ಸಾ ಘಟಕ ಮಾಸಿಕ 1.20 ಲಕ್ಷ ರೂ. ವೆಚ್ಚ : ಜಿಲ್ಲಾಧಿಕಾರಿ

Pinterest LinkedIn Tumblr

Dc_Press_Meet_1

ಮಂಗಳೂರು, ಅ.25: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ಮಹಿಳಾ ವಿಶೇಷ ಚಿಕಿತ್ಸಾ ಘಟಕಕ್ಕೆ ಮಾಸಿಕ 1.20 ಲಕ್ಷ ರೂ. ವೆಚ್ಚ ತಗಲಲಿದೆ ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪ್ತ ಸಮಾಲೋಚಕ ಹುದ್ದೆ ಒಂದಿದ್ದು, ಮಾಸಿಕ 10 ಸಾವಿರ ರೂ. ಗೌರವಧನ ನೀಡಲಾಗುತ್ತದೆ. ಕಾನೂನು ಸೇವಾ ಪ್ರಾಧಿಕಾರದಿಂದ ನಿಯೋಜನಗೊಂಡ ಇಬ್ಬರು ಕಾನೂನು ಸಲಹೆಗಾರರಿಗೆ ತಲಾ 5 ಸಾವಿರ ರೂ.ನಂತೆ 10 ಸಾವಿರ, ಮೂವರು ಸಮಾಜ ಸೇವಾ ಕಾರ್ಯಕರ್ತರಿಗೆ ತಲಾ 6 ಸಾವಿರದಂತೆ (8 ಗಂಟೆಗಳ ಕರ್ತವ್ಯ) 18 ಸಾವಿರ ರೂ., ಇಬ್ಬರು ಪೌರ ಕಾರ್ಮಿಕರಿಗೆ ತಲಾ 4,500 ರೂ.ರಂತೆ 9 ಸಾವಿರ ರೂ. ನಿಗದಿಪಡಿಸಲಾಗಿದೆ.

ಅದಲ್ಲದೆ ವಿದ್ಯುತ್ ನೀರು, ದೂರವಾಣಿ, ತಲಾ ಒಬ್ಬರಿಗೆ 200 ರೂ.ನಂತೆ 6 ಮಂದಿಗೆ ಆಹಾರ ವೆಚ್ಚ, ಔಷಧಿ ವೆಚ್ಚ, ಪ್ರಯಾಣ ವೆಚ್ಚ ಎಂದೆಲ್ಲಾ 73 ಸಾವಿರ ರೂ. ಅಂದಾಜಿಸಲಾಗಿದೆ. ಒಟ್ಟಿನಲ್ಲಿ ಲೇಡಿಗೋಶನ್ ಆಸ್ಪತ್ರೆಯಿಂದ, ಪೊಲೀಸ್ ಇಲಾಖೆಯಿಂದ ನಿಯೋಜನೆಗೊಂಡ 7 ಹುದ್ದೆಗಳಲ್ಲದೆ ಇತರ 8 ಮಂದಿ ಉದ್ಯೋಗಿಗಳು ಹಾಗೂ ಇತರ ವೆಚ್ಚಕ್ಕೆ ಮಾಸಿಕ 1.20 ಲಕ್ಷ ರೂ. ಅಂದಾಜಿಸಲಾಗಿದೆ.

Dc_Press_Meet_2

ಪ್ರಿಂಟರ್, ಇಂಟರ್‌ನೆಟ್, ಯುಪಿಎಸ್ ಸಹಿತ ಕಂಪ್ಯೂಟರ್, ಪೀಠೋಪಕರಣ, ಪೋಸ್ಟರ್, ಹೋರ್ಡಿಂಗ್ಸ್, ಬೋರ್ಡ್ ಮತ್ತು ಪ್ರಚಾರ ಎಂದೆಲ್ಲ 1 ಲಕ್ಷ ರೂ. ಖರ್ಚು (ಒಂದು ಬಾರಿಗೆ) ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದ್ದಾರೆ.

ರಾಜ್ಯದಲ್ಲಿ 35 ಘಟಕ: ಕಳೆದ ಬಜೆಟ್‌ನಲ್ಲಿ ಈ ಘಟಕದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದರು. ಅದರಂತೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ರಾಜ್ಯದ 30 ಜಿಲ್ಲೆಗಳಲ್ಲದೆ ಬೆಂಗಳೂರಿನ ಬೌರಿಂಗ್, ಲೇಡಿ ಕರ್ಜನ್, ಕೆ.ಸಿ.ಜನರಲ್, ನಿಮ್ಹಾನ್ಸ್ ಮತ್ತು ಜಯದೇವ ಹೃದ್ರೋಗ ಆಸ್ಪತ್ರೆ ಹಾಗೂ ಬೆಂಗಳೂರಿನ ವೈದ್ಯಕೀಯ ಮಹಾವಿದ್ಯಾಲಯ ಸಹಿತ 5 ಕಡೆ ಹೀಗೆ ಒಟ್ಟು 35 ಘಟಕಗಳನ್ನು ತೆರೆಯಲು ಈಗಾಗಲೆ ರಾಜ್ಯ ಸರಕಾರ ಆಡಳಿತಾತ್ಮಕ ಒಪ್ಪಿಗೆ ನೀಡಿದೆ.

ಘಟಕದಲ್ಲಿರುವ ಸೌಲಭ್ಯ:

ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ 3 ಅಥವಾ 4 ಕೊಠಡಿಗಳು ಇರುತ್ತದೆ. ದೌರ್ಜನ್ಯಕ್ಕೀಡಾದ ಮಹಿಳೆಯರು ತುರ್ತು ಚಿಕಿತ್ಸೆಗೆ ದಾಖಲಾಗಬಹುದು. ಪ್ರತಿಯೊಂದು ಘಟಕದಲ್ಲಿ ದಿನದ 24 ಗಂಟೆಯೂ ಉಚಿತ ಮಹಿಳಾ ಸಹಾಯವಾಣಿ (1091) ಸೌಲಭ್ಯ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Write A Comment