ಕರಾವಳಿ

ಅತ್ತೆ ಮನೆಗೆ ತೆರಳಿದ ಗೃಹಿಣಿ ನಾಪತ್ತೆ : ಅಪಹರಣ ಶಂಕೆ..!

Pinterest LinkedIn Tumblr

Rafina_napathe_case

ಮಂಗಳೂರು: ಬಿಜೈ ಕಾಪಿಕಾಡಿನ ತನ್ನ ತಾಯಿ ಮನೆಯಿಂದ ತನ್ನ ಅತ್ತೆ ಮನೆಗೆ ತೆರಳಿದ ಗೃಹಿಣಿಯೊಬ್ಬಳು ಮನೆಗೆ ಹಿಂತಿರುಗದೆ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿದೆ. ರಫೀನಾ(23) ಎಂಬಾಕೆಯೇ ಕಾಣೆಯಾಗಿರುವ ಮಹಿಳೆ.

ತನ್ನ ಅತ್ತೆಗೆ ಹುಷಾರಿಲ್ಲ ಎಂದು ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಔಷಧಿಗೆಂದು ಕರೆದುಕೊಂಡು ಹೋದ ರಫೀನಾ ಮನೆಗೆ ಹಿಂತಿರುಗದೆ ಕಾಣೆಯಾಗಿದ್ದಾಳೆ. ಇದೀಗ ಗೃಹಿಣಿಯ ನಾಪತ್ತೆ ಪ್ರಕರಣ ಹಲವು ಅನುಮಾನಕ್ಕೆ ಕಾರಣವಾಗಿದೆ.

ಮೂರು ವರ್ಷದ ಹಿಂದೆ ರಫೀನಾಗೆ ಕಾಟಿಪಳ್ಳದ ರಫೀಕ್ ಎಂಬಾತನೊಂದಿಗೆ ವಿವಾಹವಾಗಿತ್ತು. ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದ ಗಂಡಹೆಂಡಿರ ನಡುವೆ ಯಾವ ಭಿನ್ನಾಭಿಪ್ರಾ ಯಗಳೂ ಇರಲಿಲ್ಲ. ಅಲ್ಲದೆ ತನ್ನ ಗಂಡನ ಮನೆಯಲ್ಲೂ ರಫೀಕ್‍ನ ಪೋಷಕರ ವಿಶ್ವಾಸಗಳಿಸಿದ್ದಳು.

ಮದುವೆಯ ನಂತರ ರಫೀಕ್ ಕೆಲಸಕ್ಕೆಂದು ಸೌದಿಗೆ ತೆರಳಿದ್ದು, ಇದೀಗ ವಿದೇಶದಲ್ಲೇ ಕೆಲಸ ಮಾಡಿಕೊಂಡಿದ್ದಾನೆ. ಇತ್ತ ರಫೀನಾ ಕೆಲದಿನಗಳ ಹಿಂದೆ, ತನ್ನ ತವರು ಮನೆಯಾದ ಕಾಪಿಕಾಡಿಗೆ ಬಂದಿದ್ದಳು. ಕೆಲವು ದಿನ ಇಲ್ಲೇ ಕಾಲ ಕಳೆದ ರಫೀನಾ, ಅ. 20ರಂದು ತನ್ನ ಅತ್ತೆಗೆ ಮೈ ಹುಷಾರಿಲ್ಲದಿರುವುದರಿಂದ ಎಜೆ ಆಸ್ಪತ್ರೆಗೆ ತೋರಿಸಿ ಬರುವುದಾಗಿ ಹೇಳಿ ಹೋದವಳು ನಾಪತ್ತೆಯಾಗಿದ್ದಾಳೆ. ಅಲ್ಲದೆ ರಫೀನಾ ಕಾಣೆಯಾದ ದಿನ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಮನೆಮಂದಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಮನೆಮಂದಿ ಮತ್ತೆ ಮತ್ತೆ ಆಕೆಯ ಮೊಬೈಲ್‍ಗೆ ಕರೆಮಾಡಿದ್ದು, ನಂತರದಲ್ಲೊಮ್ಮೆ ಮೊಬೈಲ್ ಕರೆ ಸ್ವೀಕರಿಸಿದಾಕೆ ಮಾತನಾಡದೆ, ಸುಮ್ಮನಿದ್ದದ್ದು ಅನುಮಾನಕ್ಕೆ ಕಾರಣವಾಗಿದೆ. ರಫೀನಾಳ ಗಂಡನ ಮನೆಯವರಿಗೂ ಆಕೆಯ ಮೇಲೆ ಸಂಪೂರ್ಣ ಭರವಸೆ ಇದ್ದು ಯಾವುದೇ ರೀತಿಯಲ್ಲೂ ಆಕೆ ತಪ್ಪು ಮಾಡಿರಲು ಸಾಧ್ಯವೇ ಇಲ್ಲ ಎನ್ನಲಾಗುತ್ತಿದೆ. ಅಲ್ಲದೆ ಆಕೆಗೆ ಬೇರೆ ಪ್ರೀತಿ, ಪ್ರೇಮಗಳೇನೂ ಇರಲಿಲ್ಲ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಆದರೆ ಇದೀಗ ರಫೀನಾ ಎಲ್ಲಿ ಹೋದಳು? ಆಕೆಯನ್ನೇನಾದರೂ ಅಪಹರಣ ಮಾಡಲಾಗಿದೆಯೇ? ಎಂಬ ಅನುಮಾನದ ಜೊತೆ ಪ್ರೀತಿ ಪ್ರೇಮವೂ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಕದ್ರಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ರಫೀನಾಳನ್ನು ಹುಡುಕುವ ಪ್ರಯತ್ನದಲ್ಲಿದ್ದಾರೆ.

ಇವರು ಪತ್ತೆಯಾದಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿಯವರು ಪ್ರಕಟನೆಯಲ್ಲಿ ಕೋರಿದ್ದಾರೆ.

Write A Comment