ಮಂಗಳೂರು, ಅ.27: ಡಿಸೆಂಬರ್‌ನಲ್ಲಿ ನಡೆಯುವ ವಿಶ್ವ ತುಳುವೆರೆ ಪರ್ಬ ಸಮ್ಮೇಳನದಲ್ಲಿ ದಲಿತರಿಗೆ ಅವ ಮಾನವಾಗುವ ರೀತಿಯ ಕಾರ್ಯಕ್ರಮ ಆಯೋಜಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ನಗರ ಕಮಿಷನರ್ ಆರ್.ಹಿತೇಂದ್ರ ಎಚ್ಚರಿಸಿದ್ದಾರೆ.ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ರವಿವಾರ ನಡೆದ ಮಾಸಿಕ ದಲಿತರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ತುಳುವೆರೆ ಪರ್ಬ ಸಮ್ಮೇಳನದಲ್ಲಿ ದಲಿತರ ವೇಷಭೂಷಣ ತೊಟ್ಟು ಕಾರ್ಯಕ್ರಮ ಆಯೋಜಿಸುವ ಸಾಧ್ಯತೆ ಇದೆ. ಕೆಲವು ಕಲಾ ತಂಡಗಳನ್ನು ಸಂಪರ್ಕಿಸಿರುವ ಸಂಘಟಕರು ದಲಿತರ ಕುರಿತ ಕಾರ್ಯಕ್ರಮ, ಭೂತ ವೇಷದ ಅಣಿ ತೊಟ್ಟು ನರ್ತನ ಇತ್ಯಾದಿ ಕಾರ್ಯಕ್ರಮ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯಕ್ರಮಗಳಿಗೆ ಆಸ್ಪದ ನೀಡಬಾರದು ಮತ್ತು ಈ ಬಗ್ಗೆ ಸೂಕ್ತ ಕ್ರಮ ಜರಗಿಸಬೇಕು ಎಂದು ದಲಿತ ಮುಖಂಡ ನಾರಾಯಣ ಪುಂಚಮೆ ಆಗ್ರಹಿಸಿದರು.
6 ತಿಂಗಳ ಹಿಂದೆ ಬರ್ಕೆ ಠಾಣೆಯಲ್ಲಿ ತಾನು ನೀಡಿದ ಜಾತಿ ನಿಂದನೆ ದೂರು ಏನಾಯಿತು? ಎಂದು ವೇದಾವತಿ ಎಂಬವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತ ಆರ್.ಹಿತೇಂದ್ರ ‘ಪ್ರಕರಣದ ವಿಚಾರಣೆ ನಡೆಸಲಾಗಿದೆ. ಮುಂದಿನ 15 ದಿನಗಳೊಳಗೆ ಚಾರ್ಜ್ ಶೀಟ್ ದಾಖಲಿಸಲಾಗುವುದು’ ಎಂದು ತಿಳಿಸಿದರು.
ಡಿಸಿಪಿ ಡಾ.ಕೆ.ವಿ.ಜಗದೀಶ್, ಡಿಸಿಪಿ ವಿಷ್ಣುವರ್ಧನ್ ಉಪಸ್ಥಿತರಿದ್ದರು. ಎಸಿಪಿ ರವಿಕುಮಾರ್ ಸ್ವಾಗತಿಸಿ, ವಂದಿಸಿದರು.
ಕಮಿಷನರೇಟ್ ವ್ಯಾಪ್ತಿಯಲ್ಲಿ ಹುದ್ದೆಗಳು ಇನ್ನೂ ಖಾಲಿ:
ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಕಮಿಷನರ್ ಆರ್. ಹಿತೇಂದ್ರ, ‘1,750 ಹುದ್ದೆಗಳನ್ನು ಮಂಗಳೂರು ಕಮಿಷನರೇಟ್ ವ್ಯಾಪ್ತಿಗೆ ಮಂಜೂರು ಮಾಡಲಾಗಿದ್ದರೂ, ಕಳೆದ ಐದು ವರ್ಷಗಳಿಂದ 750 ಹುದ್ದೆ ಖಾಲಿ ಇದೆ. ಆ ಪೈಕಿ ಕಾನ್‌ಸ್ಟೇಬಲ್ ಹುದ್ದೆ ಅತೀ ಹೆಚ್ಚು ಖಾಲಿಯಿದ್ದು, 200 ಹುದ್ದೆಗಳಿಗೆ ನವೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ’ ಎಂದರು.
ಮುಂದಿನ ವರ್ಷದ ಮಾರ್ಚ್‌ನೊಳಗೆ ಇತರೆ ಹುದ್ದೆಗಳನ್ನು ಭರ್ತಿಗೊಳಿಸುವ ಬಗ್ಗೆ ಸರಕಾರ ಭರವಸೆ ನೀಡಿದೆ. 500 ಹೋಮ್‌ಗಾರ್ಡ್‌ಗಳನ್ನು ಬಳಸುವಂತೆ ಸರಕಾರ ಸೂಚಿಸಿದ್ದರೂ ಕೇವಲ 80 ಮಂದಿ ಮಾತ್ರ ಸೇವೆಗೆ ಲಭಿಸಿದ್ದಾರೆ ಎಂದು ಆರ್.ಹಿತೇಂದ್ರ ತಿಳಿಸಿದರು.