ಬಂಟ್ವಾಳ, ಅ.27: ಕೆಎಸ್ಸಾರ್ಟಿಸಿ ಬಸ್ಸೊಂದು ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟು ಐದು ಮಂದಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಮೃತರನ್ನು ಮಂಗಳೂರು ಪಡೀಲು ನಿವಾಸಿ ಯೂಸುಫ್ ನೌಫಲ್ (27) ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಅಶ್ಫಕ್ (29), ನೌಸೀನಾ (25), ನಫೀಸಾ, ನವೀದ್ ಹಾಗೂ ಝುಬೈದಾ ಯಾಕೂಬ್ ಹಾಗೂ ಬಸ್ ಪ್ರಯಾಣಿಕೆ ತೇಜಸ್ವಿ ಎಂಬವರಿಗೆ ಗಾಯಗಳಾಗಿದೆ.
ಯೂಸುಫ್ ನೌಫಲ್ ಎಂಬವರು ಚಲಾಯಿಸುತ್ತಿದ್ದ ಚವರ್‌ಲೆಟ್ ಕಾರು ಮಡಿಕೇರಿ ಕಡೆಗೆ ತೆರಳುತ್ತಿದ್ದ ವೇಳೆ ರಾಜ್ಯಹೆದ್ದಾರಿಯ ಮಿತ್ತೂರು ಎಂಬಲ್ಲಿ ಅವಘಡಕ್ಕೆ ತುತ್ತಾಗಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ ಮಿತ್ತೂರು ಎಂಬಲ್ಲಿ ಖಾಸಗಿ ಬಸ್ ಅನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗದಲ್ಲಿ ಚಲಿಸಿ ಕಾರಿಗೆ ಢಿಕ್ಕಿ ಹೊಡೆದಿದೆ. ಘಟನೆಯ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಗಂಭೀರ ಗಾಯಗೊಂಡಿದ್ದ ಯೂಸುಫ್ ನೌಫಲ್‌ರನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಸ್‌ನಲ್ಲಿದ್ದ ಪ್ರಯಾಣಿಕೆ ತೇಜಸ್ವಿ ಎಂಬವರ ದವಡೆಗೆ ಗಾಯವಾಗಿದ್ದು, ಎರಡು ಹಲ್ಲು ಕಿತ್ತು ಹೋಗಿದೆ ಎಂದು ತಿಳಿದುಬಂದಿದೆ. ಅವಘಡಕ್ಕೆ ಬಸ್ ಚಾಲಕ ಪುಷ್ಪರಾಜ ಶೆಟ್ಟಿಯ ಅಜಾಗರೂಕತೆಯ ಚಾಲನೆಯೇ ಕಾರಣವೆನ್ನಲಾಗಿದ್ದು, ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಣಿ-ಮೈಸೂರು ಹೆದ್ದಾರಿಯಲ್ಲಿ ಸರಣಿ ಅಪಘಾತ: 6ನೆ ಬಲಿ
ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಾಣಿ -ಸಂಪ್ಯ ಮಾರ್ಗದಲ್ಲಿ ಕಳೆದ ಒಂದು ತಿಂಗಳ ಅಂತರದಲ್ಲಿ ನಡೆದ ಬಸ್ ಢಿಕ್ಕಿ ಹೊಡೆದ 5 ಅಪಘಾತಗಳಲ್ಲಿ 6 ಮಂದಿ ಸಾವನ್ನಪ್ಪಿದ್ದು, ಈ ಪೈಕಿ ಮೂರು ಬಸ್ ಕೆಎಸ್ಸಾರ್ಟಿಸಿ ಸಂಸ್ಥೆಗೆ ಸೇರಿದ್ದು. ಮಾಣಿ ಜಂಕ್ಷನ್‌ನಲ್ಲಿ ನಡೆದ ಅಪಘಾತದಲ್ಲಿ ಖಾಸಗಿ ಬಸ್ ಢಿಕ್ಕಿಯಾಗಿ ದಂಪತಿ ಸಾವನ್ನಪ್ಪಿದ್ದರು. ಇದರ ಬೆನ್ನಲ್ಲೇ ಮಾಣಿ ಸಮೀಪ ನಡೆದ ಅಪಘಾತದಲ್ಲಿ ಅವಿವಾಹಿತ ಯುವಕನೋರ್ವ ಸರಕಾರಿ ಬಸ್ ಢಿಕ್ಕಿ ಹೊಡೆದು ಮೃತಪಟ್ಟಿದ್ದರೆ, ಕೆಲ ದಿನಗಳ ಹಿಂದೆ ಪುತ್ತೂರು ತಾಲೂಕಿನ ಸಂಪ್ಯದಲ್ಲಿ ಸರಕಾರಿ ಬಸ್ಸೊಂದು ಕೈನೆಟಿಕ್ ಸವಾರನನ್ನು ಬಲಿ ತೆಗೆದುಕೊಂಡಿತ್ತು, ಶುಕ್ರವಾರವಷ್ಟೇ ಪುತ್ತೂರು ತಾಲೂಕಿನ ಮುಕ್ರಂಪಾಡಿಯಲ್ಲಿ ಸರಕಾರಿ ಬಸ್‌ನ ಢಿಕ್ಕಿಯ ತೀವ್ರತೆಗೆ ಯುವಕನೋರ್ವ ಸಾವಿಗೀಡಾಗಿದ್ದ, ಇದರ ಬೆನ್ನಲ್ಲೇ ರವಿವಾರ ಮಿತ್ತೂರಿನಲ್ಲಿ ಸರಕಾರಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟಿದ್ದು ಈ ರಸ್ತೆಯಲ್ಲಿ ಪ್ರಯಾಣ ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಮೂಡಿಸಿದೆ.