ಜಾಗೃತಿ ಅರಿವು ಸಪ್ತಾಹ ಅಂಗವಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಪ್ರಮಾಣವಚನ
ಮಂಗಳೂರು, ಅ.27 ಕರ್ನಾಟಕ ವಾರ್ತೆ: ಸಾರ್ವಜನಿಕ ಕರ್ತವ್ಯ ನಿರ್ವಹಣೆಯಲ್ಲಿ ನಿಧಾನಗತಿ ಅನುಸರಿಸುವುದು ಮತ್ತು ಸೇವೆಯನ್ನು ಒದಗಿಸುವುದರಲ್ಲಿ ವಿಳಂಭವಾಗಿಸುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದ್ದಾರೆ.
ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಭ್ರಾಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅಕ್ಟೋಬರ್ 27ರಿಂದ ನವೆಂಬರ್ 1ರವರೆಗೆ ನಡೆಯಲಿರುವ ಜಾಗೃತಿ ಅರಿವು ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು. ದಕ್ಷ ಆಡಳಿತ ಮತ್ತು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಭ್ರಷ್ಟಾಚಾರವು ದೊಡ್ಡ ಪಿಡುಗಾಗಿದೆ. ಆದರೆ, ಭ್ರಷ್ಟಾಚಾರದೊಂದಿಗೆ ಹೊಂದಾಣಿಕೆಯು ಉತ್ತಮ ಸಮಾಜ ನಿರ್ಮಾಣಕ್ಕೆ ಅಪಾಯಕಾರಿಯಾಗಿದೆ. ಪ್ರತಿಯೊಬ್ಬ ಸಾರ್ವಜನಿಕ ನೌಕರರೂ ತನ್ನ ಹಂತದಲ್ಲೇ ದಕ್ಷ ಆಡಳಿತದ ಬದಲಾವಣೆಗೆ ಪಣತೊಟ್ಟರೆ, ಪ್ರಜಾಪ್ರಭುತ್ವದ ಯಶಸ್ಸಿಗೆ ಕಾರಣವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯು ಉತ್ತಮ ಆಡಳಿತಕ್ಕೆ ಹಿಂದಿನಿಂದಲೂ ಮಾದರಿಯಾಗಿದೆ. ಪ್ರತಿಯೊಬ್ಬ ಜನಸಾಮಾನ್ಯರಿಗೂ ನ್ಯಾಯ ಒದಗಿಸಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ ಜಿಲ್ಲಾಧಿಕಾರಿಗಳು, ತ್ವರಿತಗತಿಯಲ್ಲಿ ಜನರ ಅಹವಾಲುಗಳಿಗೆ ಸ್ಪಂದಿಸುವಂತೆ ಕರೆ ನೀಡಿದರು.
ಅಪರ ಜಿಲ್ಲಾಧಿಕಾರಿ ಸದಾಶಿವಪ್ರಭು ಅವರು ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಸಪ್ತಾಹ ಆಚರಿಸಲು ಕೇಂದ್ರ ವಿಚಕ್ಷಣ ಆಯೋಗವು ಸೂಚಿಸಿದೆ. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ, ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ, ಜಾರಿಗೊಳಿಸಲು ಜಾಗೃತಿ ಮೂಡಿಸುವುದು ಈ ಸಪ್ತಾಹದ ಉದ್ದೇಶವಾಗಿದೆ. ಇದು ಕೇವಲ ಕಾಟಾಚಾರವಾಗಬಾರದು ಎಂದು ಹೇಳಿದ ಅವರು, ಈ ಜಾಗೃತಿಯ ಲಾಭವು ಅಂತಿಮವಾಗಿ ಜನಸಾಮಾನ್ಯರಿಗೆ ದೊರಕಬೇಕು ಎಂದು ಹೇಳಿದರು.
ಮಂಗಳೂರು ಉಪವಿಭಾಗಾಧಿಕಾರಿ ಡಾ.ಅಶೋಕ್ ಅವರು ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ನಮ್ಮ ಅಂತಕರಣದಿಂದಲೇ ಹೋರಾಟ ನಡೆಸಬೇಕು. ಸರಕಾರಿ ನೌಕರರು ಜನರ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿದರೆ, ಪಾರದರ್ಶಕ ಆಡಳಿತಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕ ಶರಣಬಸಪ್ಪ ಮಾತನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಜಾಗೃತಿ ಅರಿವು ಸಪ್ತಾಹ ಅಂಗವಾಗಿ ಪ್ರಮಾಣವಚನವನ್ನು ಬೋಧಿಸಲಾಯಿತು.