ಕುಂದಾಪುರ: ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ಮತ್ತು ಪಿ.ಯು. ಕಾಲೇಜಿನ ಕ್ರೀಡಾಕೂಟ-2014 ಕಾರ್ಯಕ್ರಮ ಬುಧವಾರ ಬೆಳಿಗ್ಗೆ ಶಿರೂರು ಗ್ರೀನ್ ವ್ಯಾಲಿ ಸ್ಕೂಲ್ ಆವರಣದಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಅವರು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟಗಳ ಮೂಲಕ ಮಾನಸಿಕ ನೆಮ್ಮದಿ ಜೊತೆಗೆ ದೈಹಿಕ ಸದೃಡತೆ ಹೊಂದಲು ಸಾಧ್ಯ. ಯಾವುದೇ ಯೋಚನೆಯಿಲ್ಲದ ಮನುಷ್ಯನು ಕಪ್ಪುಕೋಣೆಯಲ್ಲಿ ಕಪ್ಪು ಬೆಕ್ಕನ್ನು ಹುಡುಕುವ ಕುರುಡನ ಹಾಗೆ. ಇಂದಿನ ಮಕ್ಕಳು ಸೂಕ್ಷ್ಮ ಸಂವೇದಿಗಳಾಗಿದ್ದು ಮಕ್ಕಳಿಗೆ ಪೋಷಕರು ಒತ್ತಡವನ್ನು ಹಾಕಬಾರದು, ಯಾವ ವಯಸ್ಸಿನಲ್ಲಿ ಮಕ್ಕಳು ಏನು ಮಾಡಬೇಕು ಅದನ್ನು ಮಾಡಿದರೇ ಮಾತ್ರ ಅವರು ಕೈತಪುವುದಿಲ್ಲ. ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹಿಸುವ ಮೂಲಕ ಅವರನ್ನು ಬೆಳೆಸಬೇಕು. ಗುರಿ ಹಾಗೂ ದೂರದೃಷ್ಟಿ ಇಲ್ಲದೇ ಯಾವ ಕೆಲಸವನ್ನು ಮಾಡಬಾರದು ಎಂದರು.
ಪೊಲೀಸ್ ಇಲಾಖೆಯಲ್ಲಿ ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು ಇಲಾಖೆಯಲ್ಲಿಯೂ ಕೂಡ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ ಎಂದ ಅವರು ತಾನೂ ಕೂಡ ಟೆನ್ನಿಸ್ ಕ್ರೀಡಾಪಟುವಾಗಿದ್ದು, ಈ ಹಿಂದೆ ಟೆನ್ನಿಸ್ ಕ್ರೀಡೆಯಲ್ಲಿ ಕರ್ನಾಟಕ ಪೊಲೀಸ್ ತಂಡವನ್ನು ಪ್ರತಿನಿಧಿಸಿ ಆಡಿರುವುದಾಗಿಯೂ ಹೇಳಿದರು.
ಕನ್ನಡ ಸಂಘ ದುಬೈ ಇದರ ಮಾಜಿ ಅಧ್ಯಕ್ಷ ಹಾಗೂ ಬೈಂದೂರು ಡಾ.ಕಾಂ ಇದರ ಗೌರವ ಸಲಹೆಗಾರ ಬಿ.ಜಿ. ಮೋಹನ್ ದಾಸ್, ಗ್ರೀನ್ ವ್ಯಾಲಿ ಸ್ಕೂಲ್ ಮತ್ತು ಪಿಯು ಕಾಲೇಜಿನ ಅಧ್ಯಕ್ಷ & ಆಡಳಿತ ನಿರ್ದೇಶಕ ಸಯ್ಯದ್ ಅಬ್ದುಲ್ ಖಾದರ್ ಬಾಷು, ಪ್ರಾಂಶುಪಾಲ ಜಾನ್ ಮಾಥ್ಯೂ, ಸಯ್ಯದ್ ಜಾಫರ್ ಮೊದಲಾದವ್ರು ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಕ್ರೀಡಾಕೂಟ ಜರುಗಿತು. ವಿದ್ಯಾರ್ಥಿಗಳಿಂದ ವಿವಿಧ ಶೈಲಿಯ ನೃತ್ಯಗಳು ನಡೆದವು. ಕಾರ್ಯಕ್ರಮವನ್ನು ಜಾಸ್ಮಿನ್ ನಿರೂಪಿಸಿ-ಸ್ವಾಗತಿಸಿ, ಮಹಮ್ಮದ್ ಸುಹೆಲ್ ವಂದಿಸಿದರು.