ಬೆಳ್ತಂಗಡಿ, ಅ.30: ಜಿಲ್ಲೆಯಲ್ಲಿ ಪಡಿತರ ಚೀಟಿಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಲೇವಾರಿಯನ್ನು ನ.10ರೊಳಗೆ ಮಾಡಲಾಗುವುದು. ನಿಧಾನಗತಿಯಲ್ಲಿರುವ ರಾಜೀವಗಾಂಧಿ ವಿದ್ಯುದ್ಧೀಕರಣ ಯೋಜನೆಗೆ ಮತ್ತೆ ವೇಗ ನೀಡಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.ಅವರು ಬುಧವಾರ ಬೆಳ್ತಂಗಡಿಯಲ್ಲಿ ಶ್ರೀಮಂಜುನಾಥೇಶ್ವರ ಕಲಾಭವನದಲ್ಲಿ ನಡೆದ ಪ್ರಥಮ ಜನತಾದರ್ಶನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಸವಲತ್ತುಗಳನ್ನು ವಿತರಿಸಿ ಮತ್ತು ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದರು.
ಸರಕಾರಿ ಕಾರ್ಯಕ್ರಮಗಳು ಜನರಿಗೆ ನೇರವಾಗಿ ತಲುಪಬೇಕು ಎಂಬ ಉದ್ದೇಶದಿಂದ ಜನತಾದರ್ಶನವನ್ನು ಹಮ್ಮಿಕೊಳ್ಳಲಾಗಿದೆ. 3 ತಿಂಗಳ ಬಳಿಕ ಮತ್ತೆ ಇದೇ ರೀತಿಯ ಕಾರ್ಯಕ್ರಮ ಮಾಡಲಾಗುವುದು. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಸರಕಾರಿ ಜಮೀನನ್ನು ನಿವೇಶನಕ್ಕಾಗಿ ಕಾದಿರಿಸುವ ಸೂಚನೆ ನೀಡಲಾಗಿದೆ.
ಸರಕಾರಿ ಜಾಗದಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ 94ಸಿ ನಿಯಮದ ಅಡಿಯಲ್ಲಿ ಹಕ್ಕುಪತ್ರಕ್ಕಾಗಿ ಅರ್ಜಿಸಲ್ಲಿಸಿದವರಿಗೆ ಶೀಘ್ರದಲ್ಲಿ ಹಕ್ಕು ಪತ್ರ ನೀಡಲಾಗುವುದು. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ನಿವಾಸಿಗಳ ಪುನರ್ವಸತಿಗೆ ವಿಶೇಷ ಯೋಜನೆ ರೂಪಿಸಲಾಗಿದೆ. ಅದೇ ರೀತಿ ಅಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದಕ್ಕೂ ಆದ್ಯತೆ ನೀಡಿದ್ದೇವೆ. ರಾಜ್ಯದಲ್ಲಿ ಡೀಮ್ಡ್ ಅರಣ್ಯ ಮತ್ತು ಕಂದಾಯ ಇಲಾಖೆಯ ಜಮೀನಿನ ಸಮಸ್ಯೆಯನ್ನು ಪರಿಹರಿಸಲು ಸಮಿತಿ ರಚಿಸಲಾಗಿದೆ. ಜಂಟಿ ಸರ್ವೇ ನಡೆಸಿ ಅರಣ್ಯವಾಗಿಯೇ ಉಳಿದಿರುವ ಡೀವ್ಡ್ ಫಾರೆಸ್ಟ್‌ನ್ನು ಅರಣ್ಯ ಇಲಾಖೆಯಲ್ಲಿ ಉಳಿಸಿಕೊಂಡು ಕೃಷಿ ಭೂಮಿಯಾಗಿರುವ ಜಮೀನನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಲಾಗುವುದು.
ಈ ಪ್ರಕ್ರಿಯೆ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು. ಶಾಸಕ ವಸಂತ ಬಂಗೇರ ಮಾತನಾಡಿ, ರಾಷ್ಟ್ರೀಯ ಉದ್ಯಾನ ವನದಲ್ಲಿರುವವರು ಹೊರಗೆ ಬರಬೇಕಾದರೆ 25ರಿಂದ 50 ಲಕ್ಷ ರೂ.ಗಳಷ್ಟು ಪ್ಯಾಕೇಜ್ ನೀಡಬೇಕು. ಕೇವಲ ಹತ್ತು ಲಕ್ಷ ರೂ. ಕೊಟ್ಟು ಅವರನ್ನು ಹೊರತಳ್ಳುವುದು ಸರಿಯಲ್ಲ. ಹೊರಗೆ ಬಂದವರಿಗೆ ಉತ್ತಮ ಜೀವನ ನಡೆಸುವ ಅವಕಾಶ ಕಲ್ಪಿಸಿ. ಎಲ್ಲಾ ಕಡತಗಳು ಅಕ್ರಮ ಸಕ್ರಮದ ಸಮಿತಿ ಮುಂದೆ ಬರಬೇಕು. ಅಧಿಕಾರಿಗಳೇ ಅದನ್ನು ತಿರಸ್ಕರಿಸುವುದು ಸರಿಯಲ್ಲ. ಅಂತಿಮ ನಿರ್ಧಾರವನ್ನು ಸಮಿತಿಯೇ ತೆಗೆದುಕೊಳ್ಳಬೇಕಾಗಿದೆ ಎಂದ ಶಾಸಕರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಒಟ್ಟಾಗಿ ಕಾರ್ಯನಿರ್ವಹಿಸದಿದ್ದರೆ ಜನರಿಗೆ ತೊಂದರೆ ತಪ್ಪಿದ್ದಲ್ಲ ಎಂದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಅಡಿಶನಲ್ ಎಸ್ಪಿ ಶಿವಕುಮಾರ್, ಜಿ.ಪಂ.ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ತಾ.ಪಂ.ಅಧ್ಯಕ್ಷೆ ಜಯಂತಿ ಪಾಲೇದು, ನ.ಪಂ.ಅಧ್ಯಕ್ಷೆ ಮುಸ್ತಾರ್ ಜಾನ್ ಮೆಹಬೂಬ್ ಮತ್ತಿತರರು ಇದ್ದರು.