ಮಂಗಳೂರು,ಅ.31: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಆರು ಗ್ರಾಮಗಳನ್ನು ಪ್ರಥಮ ಹಂತದಲ್ಲಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಆದೇಶಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಈ ಕುರಿತು ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಿಳಿನೆಲೆ, ಚಾರ್ಮಾಡಿ, ರೆಖ್ಯ, ಬಳ್ಪ, ಸಂಪಾಜೆ, ಗೋಳಿತೊಟ್ಟು ಗ್ರಾಮಗಳನ್ನು ಮುಂದಿನ ಒಂದು ವಾರದಲ್ಲಿ ಸರ್ವೆ ನಡೆಸಿ ವರದಿ ತಯಾರಿಸಿ ಎಂದು ಅವರು ನಿರ್ದೇಶಿಸಿದರು.
ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯನಿರತ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 46 ಗ್ರಾಮಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ವರದಿ ನೀಡಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ಹನುಮಂತಪ್ಪ ಕೆ.ಟಿ. ತಿಳಿಸಿದರು.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಶೇ.20ಕ್ಕೂ ಅಧಿಕ ನೈಸರ್ಗಿಕ ಕಾಡುಗಳಿದ್ದರೆ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೂಕ್ತವೆಂದು ರಾಷ್ಟ್ರೀಯ ಸಮಿತಿ ತಿಳಿಸಿರುವ ನಿಟ್ಟಿನಲ್ಲಿ ಸರ್ವೆ ನಡೆಸಿ ವರದಿ ನೀಡಲಾಗುವುದು ಎಂದು ಅವರು ಹೇಳಿದರು.
ಪ್ರಸ್ತುತ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿ ಅಸ್ತಿತ್ವದಲ್ಲಿದ್ದು, ಗ್ರಾಮ ಮಟ್ಟದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸ್ಥಳೀಯ ಸದಸ್ಯ, ಸ್ಥಳೀಯರು, ಗ್ರಾಮ ಲೆಕ್ಕಿಗ, ಗ್ರಾಮೀಣಾಭಿವೃದ್ಧಿ ಅಧಿಕಾರಿ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಮಿತಿ ರಚಿಸಲಾಗಿದೆ ಎಂದು ಅವರು ತಿಳಿಸಿದರು.
ಗ್ರಾಮ ಮಟ್ಟದ ಸಮಿತಿಗೆ ಎರಡು ರೀತಿಯ ಅರ್ಜಿ ನಮೂನೆಗಳನ್ನು ನೀಡಿ ಸರ್ವೆ ನಡೆಸಿ ಶೇ.20ಕ್ಕಿಂತ ಅಧಿಕ ಅಥವಾ ಕಡಿಮೆ ನೈಸರ್ಗಿಕ ಕಾಡು ಇರುವ ಬಗ್ಗೆ ವರದಿ ತಯಾರಿಸಲಾಗುವುದು ಎಂದು ಅವರು ಹೇಳಿದರು.
ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಕಲ್ಲು ಹಾಗೂ ಮರಳು ಗಣಿಗಾರಿಕೆ, ಥರ್ಮಲ್ ಪವರ್ ಪ್ರಾಜೆಕ್ಟ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದ ಅವರು, ಜಲವಿದ್ಯುತ್, ಗಾಳಿ ವಿದ್ಯುತ್, ಮೂಲ ಸೌಕರ್ಯಕ್ಕೆ ವಿವೇಚನೆ ನೆಲೆಯಲ್ಲಿ ಅನುಮತಿ ನೀಡಲಾಗುವುದು ಎಂದರು.
ಪರಿಸರ ಸೂಕ್ಷ್ಮ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರಕಾರ ಹಾಗೂ ಯೋಜನಾ ಆಯೋಗದಿಂದ ವಿಶೇಷ ಅನುದಾನ ನೀಡಬಹುದು ಮಾತ್ರವಲ್ಲದೆ ಸ್ಥಳೀಯಾಡಳಿತ ವಿಶೇಷ ತೆರಿಗೆ ಕೂಡಾ ಸಂಗ್ರಹಿಸುವ ಅವಕಾಶವಿದೆ ಎಂದು ಅವರು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಯೋಗೀಶ್ ಎಚ್.ಆರ್., ದ.ಕ. ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.