ಮುಡಿಪು,ಅ.31: ಸಂಪೂರ್ಣ ಸ್ಚಚ್ಛತಾ ಆಂದೋಲನದ ಮೂಲಕ ಶೌಚಾಲಯ ರಹಿತ ಎಲ್ಲಾ ಮನೆಗಳಿಗೆ ಶೌಚಾಲಯ ನಿರ್ಮಿಸಿ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ ಪಡೆದು 2011 ರ ಗಾಂಧೀ ಜಯಂತಿ ದಿನದಂದು ಸ್ವಚ್ಛತಾ ಸಮಾವೇಶದಲ್ಲಿ ಬಯಲು ಶೌಚಾಲಯ ಮುಕ್ತ ಗ್ರಾಮವೆಂದು ಘೋಷಿಸಿಕೊಂಡ ಜಿಲ್ಲೆಯ ಮೊದಲ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ನರಿಂಗಾನ ಪಂಚಾಯತ್ ಈಗ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಸ್ವಚ್ಛ ಗ್ರಾಮ ನಿರ್ಮಾಣಕ್ಕೆ ಪಣತೊಟ್ಟಿದೆ.
ಅಕ್ಟೋಬರ್ 2 ರಂದು ಪೊಟ್ಟೊಳಿಕೆಯ ಕಾಲೊನಿಯಲ್ಲ್ಲಿ ವಿಶೇಷ ರೀತಿಯಲ್ಲಿ ನಡೆದ ಗಾಂಧಿ ಜಯಂತಿಯ ಆಚರಣೆಯಲ್ಲಿ ತೀರ್ಮಾನಿಸಿದಂತೆ ನರಿಂಗಾನ ಗ್ರಾಮಸ್ಥರು, ಜನಪ್ರತಿನಿಧಿಗಳು ಅಧಿಕಾರಿಗಳು ಒಗ್ಗೂಡಿ ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಗ್ರಾಮ ನಿರ್ಮಾಣಕ್ಕೆ ಜಾಗೃತಿ ಮೂಡಿಸುವ ಜಾಗೃತಿ ಜಾಥ ಹಾಗೂ ಸ್ವಚ್ಛತಾ ಶ್ರಮದಾನ ಇತ್ತೀಚೆಗೆ ನಡೆಯಿತು.
ಗ್ರಾಮ ಪಂಚಾಯತ್, ಜನಶಿಕ್ಷಣ ಟ್ರಸ್ಟ್, ಅಪ್ನಾದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸ್ವಸಹಾಯ ಸಂಘ ಮತ್ತಿತರ ಸಂಘ ಸಂಸ್ಥೆಗಳ ಸಹಬಾಗಿತ್ವದಲ್ಲಿ ನರಿಂಗಾನ ಗ್ರಾ.ಪಂ. ಕಛೇರಿ ವಠಾರದಲ್ಲಿ ಶ್ರಮದಾನ ಮತ್ತು ಮೊಂಟೆಪದವಿನ ವರೇಗೆ ನಡೆಸಿದ ಜಾಗೃತಿ ಜಾಥದಲ್ಲಿ ಜಿ.ಪಂ. ಸದಸ್ಯರಾದ ಸಂತೋಷ್ ಕುಮಾರ್ ರೈ, ಮಾಜಿ ಒಂಬುಡ್ಸ್‌ಮನ್ ಶೀನ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಶೇಖಬ್ಬ, ಇಸ್ಮಾಯಿಲ್, ಜನಶಿಕ್ಷಣ ಟ್ರಸ್ಟ್‌ನ ನಿರ್ದೇಶಕ ಕೃಷ್ಣ ಮೂಲ್ಯ, ಹೈದರ್, ಜೋಸೆಫ್ ಕುಟಿನ್ಹ, ಪದ್ಮನಾಭ, ಆನಂದ ಪೂಜಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೂಪಣಾಧಿಕಾರಿ ಸುಂದರ ಪೂಜಾರಿ, ಶಿಶು ಅಭಿವೃದ್ಧಿ ಅಧಿಕಾರಿ ಮಲ್ಲಿಕ, ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಮರಿಯಟ್, ಮುಖ್ಯ ಶಿಕ್ಷಕ ಸಂತೋಷ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮ್ಯ, ಸಿಬ್ಬಂದಿ ರಾಜೀವ ವಿಷಕಾರಿ ಪ್ಲಾಸ್ಟಿಕ್ ಮತ್ತಿತರ ಘನ ತ್ಯಾಜ್ಯ ನಿರ್ವಹಣೆ ಕಾರ್ಯವನ್ನು ಮನೆ-ಮನೆ ಮಟ್ಟದಲ್ಲಿ ನಿರ್ವಹಿಸುವುದರ ಬಗ್ಗೆ ಮಾಹಿತಿ ಪ್ರೇರಣೆ ನೀಡಿದರು.
ಕೆನರಾ ಬ್ಯಾಂಕ್ ವ್ಯವಸ್ಥಾಪಕರು, ಗ್ರಾ.ಪಂ. ಸದಸ್ಯರು, 10 ಅಂಗನವಾಡಿಗಳ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿ, ಆಶಾ ಕಾರ್ಯಕರ್ತೆಯರು, ರೋಶನಿ ನಿಲಯ ಮತ್ತು ಅಲೋಸಿಯಸ್ ಕಾಲೇಜು ವಿದ್ಯಾರ್ಥಿ ಸಮಾಜ ಕಾರ್ಯಕರ್ತರು, ವರ್ತಕರ ಪ್ರತಿನಿಧಿಗಳು, ಅಪ್ನಾದೇಶ್ ಬಳಗದ ಸದಸ್ಯರು, ಗ್ರಾಮದ ಎಲ್ಲಾ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸ್ತ್ರೀಶಕ್ತಿ ಮತ್ತಿತರ ಸ್ವಸಹಾಯ ಸಂಘಗಳ ಸದಸ್ಯರು, ಬಾಳೆಪುಣಿ ಗ್ರಾ.ಪಂ. ಉಪಾಧ್ಯಕ್ಷೆ ಲೀಲಾ, ಕಾರ್ಯದರ್ಶಿ ನಳಿನಿ, ನರಿಂಗಾನ ಯುವಕ ಮಂಡಲದ ಮುರಳಿ, ಟ್ರಸ್ಟ್ ಸಂಯೋಜಕರಾದ ಚಂಚಲ, ಅಕ್ಷತ ಶ್ರಮದಾನ ಹಾಗೂ ಜಾಗೃತಿ ಜಾಥದಲ್ಲಿ ಭಾಗವಹಿಸಿದರು. ಪ್ರತಿ ಮನೆಗಳಲ್ಲಿ ಕೊಳೆಯುವ ಕಸ ನಿರ್ವಹಣೆಗೆ ಕಾಂಪೋಸ್ಟ್ ಗುಂಡಿ ರಚನೆ, ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡದೆ ಅಥವಾ ಸುಡದೆ ಪ್ರತ್ಯೇಕವಾಗಿ ಸಂಗ್ರಹಿಸಿ ಸಮರ್ಪಕವಾಗಿ ನಿರ್ವಹಿಸುವ ಕಾರ್ಯ ಗ್ರಾಮದಲ್ಲಿ ಈಗಾಗಲೇ ಆರಂಭವಾಗಿದೆ.