ಮಂಗಳೂರು: ದಶಂಬರ 12ರಿಂದ 14 ರ ತನಕ ಮಂಗಳೂರಿನ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನ ಆವರಣದಲ್ಲಿ ಅಖಿಲ ಭಾರತ ತುಳು ಒಕ್ಕೂಟ (ರಿ) ವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯುವ `ವಿಶ್ವ ತುಳುವೆರೆ ಪರ್ಬ-2014′ ಕಾರ್ಯಕ್ರಮದಲ್ಲಿ. ದೇಶ ವಿದೇಶಗಳಿಂದ ಆಗಮಿಸುವ ತುಳುವರಿಗೆ ಪರ್ಬದ ಸಂದರ್ಭದಲ್ಲಿ ತುಳುನಾಡಿನ ವಿವಿಧ ಗೃಹೋಪಯೋಗಿ ವಸ್ತುಗಳನ್ನು ವಿಕ್ರಯಿಸುವ ವ್ಯವಸ್ಥೆಯನ್ನು `ಸಂತೆದ ಕಲ‘ದಲ್ಲಿ ಸಂಯೋಜಿಸಲಾಗಿದೆ.
ಸಾಂಪ್ರದಾಯಿಕ ನಿತ್ಯೋಪಯೋಗಿ ವಸ್ತುಗಳು, ಅಲಂಕಾರಿಕ ಪರಿಕರಗಳು, ಮಣಿಸರಕು, ಕತ್ತಿ, ಮಡಕೆ, ಪಾತ್ರೆ ಪಗಡಿ ಇತ್ಯಾದಿ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟ ಮಾಡುವ ವ್ಯವಸ್ಥೆಯನ್ನು ಸಂತೆದಕಲದಲ್ಲಿ ಮಾಡಲಾಗುವುದು. ಬಚ್ಚಂಗಾಯಿ, ಕಬ್ಬಿನರಸ, ಹಣ್ಣಿನರಸ, ಐಸ್‌ಕ್ರೀಮ್ ಸಸ್ಯಕಾಶಿ (ನರ್ಸರಿ)ಇತ್ಯಾದಿ ಸ್ಟಾಲ್‌ಗಳಿಗೂ ಅವಕಾಶವಿದ್ದು ತುಳುನಾಡಿನ ಕಲೆ, ಸಾಹಿತ್ಯ ಸಂಸ್ಕೃತಿ, ಜನಜೀವನ, ಇತಿಹಾಸಕ್ಕೆ ಸಂಬಂಧಿಸಿದ ಕೃತಿಗಳ ಮಾರಾಟಕ್ಕೆ ತುಳುಪುಸ್ತಕಗಳಿಗೆ ವಿಶೇಷ ಆದ್ಯತೆ ನೀಡಲಾಗುವುದು.
120 ಚದರ ಅಡಿಗಳ ಸುಮಾರು 100 ಮಳಿಗೆಗಳನ್ನು ಸಮ್ಮೇಳನಾಂಗಣದಲ್ಲಿ ಅಣಿಗೊಳಿಸಲಾಗುವುದು. ಅಸಕ್ತರು ವಿಶ್ವತುಳುವೆರೆ ಪರ್ಬ ಕಚೇರಿಯನ್ನು ಸಂಪರ್ಕಿಸಬೇಕು ಎಂದು ಸಂಚಾಲಕ ಪಿ.ಎ.ಪೂಜಾರಿ ಮತ್ತು ಸಹಸಂಚಾಲಕ ಹೇಮಂತ್ ಗರೋಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
`ಸಂತೆದ ಕಲ’ ವಿಶ್ವ ತುಳುವೆರೆ ಪರ್ಬ-2014 ಕಚೇರಿ, ಮಹಿಳಾ ಒಕ್ಕೂಟದ ಕಟ್ಟಡ, ಉರ್ವಸ್ಟೋರ್, ಮಂಗಳೂರು-575006, ದೂರವಾಣಿ-08242454291
ತುಳು ಭಾಷೆಯ ಮಾನ್ಯತೆಗೆ ಒಗ್ಗಟ್ಟಾಗಿ ಶ್ರಮಿಸೋಣ -ನಳಿನ್‌ಕುಮಾರ್ ಕಟೀಲ್
ಮಂಗಳೂರು: ರಾಜ್ಯದ ಅಧಿಕೃತ ಭಾಷೆಯಾಗಿ ತುಳು ಭಾಷೆಯನ್ನು ಸೇರಿಸಲು ಸಮುಚಿತ ದಾರಿಯ ಸಾಗಬೇಕಾಗಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಅವರು ಹೇಳಿದರು. ಅಖಿಲ ಭಾರತ ತುಳು ಒಕ್ಕೂಟ (ರಿ)ಮತ್ತು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಅಡ್ಯಾರಿನ ಸಹ್ಯಾದ್ರಿ ಕಾಲೇಜಿನಲ್ಲಿ ನಡೆಸಲು ಉದ್ದೇಶಿಸಿದ ವಿಶ್ವ ತುಳುವೆರೆ ಪರ್ಬ-2014ರ ಕುರಿತಂತೆ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ತುಳುಕೂಟ, ತುಳು ಒಕ್ಕೂಟ ಮುಂತಾದ ತುಳು ಸಂಘಟನೆಗಳು ಸರಿಯಾದ ದಾರಿಯಲ್ಲಿ ಮುನ್ನಡೆದು ತುಳು ಭಾಷೆಯ ಮಾನ್ಯತೆಗಾಗಿ ಒಟ್ಟಾಗಿ ದುಡಿಯಬೇಕಾದ ಅನಿವಾರ್ಯತೆ ಇದೆ ಎಂದರು. ರಾಜಕೀಯ ನಾಯಕರಾದ ನಾವೆಲ್ಲ ಜಾತಿಮತ ಪಕ್ಷ ಬೇದ ಮರೆತು ನಿಮ್ಮೊಂದಿಗೆ ಸೇರಿ ಕೆಲಸ ಮಾಡುವ ಅಗತ್ಯವಿದೆ ಎಂದರು.
ಎ.ಸಿ.ಭಂಡಾರಿಯವರ ನೇತೃತ್ವದಲ್ಲಿ ದಾಮೋದರ ನಿಸರ್ಗ, ಅಡ್ಯಾರು ಮಹಾಬಲ ಶೆಟ್ಟಿ ಮುಲ್ಕಿ ಕರುಣಾಕರ ಶೆಟ್ಟಿ, ಪಿ.ಎ.ಪೂಜಾರಿ ಹಾಗೂ ಡಾ.ಕಿಶೋರ್‌ಕುಮಾರ್ ರೈ ಶೇಣಿ ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿದ್ದರು.
ವಿಶ್ವ ತುಳುವೆರೆ ಪರ್ಬ 2014 ರ ಸಾಹಿತ್ಯಗೋಷ್ಠಿ ಕವಿಗೋಷ್ಠಿಗಳ ಕುರಿತಂತೆ ಸಮಾಲೋಚನ ಸಭೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಚಾವಡಿಯಲ್ಲಿ ನಡೆಯಿತು. ವಿಶ್ವತುಳುವೆರೆ ಪರ್ಬದ ಕುರಿತು ಪ್ರಸ್ತಾವಿಕ ಸಂಯೋಜಕರಾದ ಎ.ಸಿ.ಭಂಡಾರಿಯವರು ಮಾತನಾಡಿ ವಿಶ್ವತುಳುವೆರೆ ಪರ್ಬದ ಸಿದ್ಧತೆಗಳ ಕುರಿತಂತೆ ವಿವರವನ್ನು ನೀಡಿದರು.
ಪ್ರಧಾನ ಸಂಚಾಲಕರಾದ ಕದ್ರಿನವನೀತ ಶೆಟ್ಟಿಯವರು ತುಳು ಪರ್ಬದ ವಿವಿಧ ಕಾರ್ಯಕ್ರಮಗಳ ಕುರಿತಂತೆ ಮಾಹಿತಿ ನೀಡಿದರು. ಡಾ.ವಾಮನ ನಂದಾವರ, ಮುದ್ದುಮೂಡುಬೆಳ್ಳೆ, ಎಸ್ ಎ.ಕೃಷ್ಣಯ್ಯ, ಯದುಪತಿ ಗೌಡ, ಎನ್.ಪಿ.ಶೆಟ್ಟಿ ಶಿವಾನಂದ ಕರ್ಕೇರ, ಸೀತಾರಾಮ ಕುಲಾಲ್, ವೆಂಕಪ್ಪ ಮಾಸ್ತರ್ ಅಸೈಗೋಳಿ, ಶೇಖರ ಅಜೆಕಾರು, ಮನೋರಮ ಎಂ.ಭಟ್, ವಿದ್ಯಾಶ್ರಿ ಕುಲಾಲ್, ರೂಪಕಲಾ ಆಳ್ವ, ಜೆ.ಬಿ.ಎಸ್.ಉಳ್ಳಾಲ್, ಸರಪಾಡಿ ಅಶೋಕ ಶೆಟ್ಟಿ, ಶಕುಂತಳಾ ಭಟ್ ಮುಂತಾದವರು ಗೋಷ್ಠಿಗಳ ಕುರಿತು ಸಲಹೆ ಸೂಚನೆ ನೀಡಿದರು.
ಸಾಹಿತ್ಯ ಗೋಷ್ಠಿ ಕವಿಗೋಷ್ಠಿಯ ಸಂಚಾಲಕರಾದ ಡಾ.ಕಿಶೋರ್ ಕುಮಾರ್ ರೈ ಶೇಣಿಯವರು ವಿವಿಧ ಗೋಷ್ಠಿಗಳ ಕುರಿತಂತೆ ವಿವರಣೆ ನೀಡಿ ಗೋಷ್ಠಿಗಳನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು. ಜಾನಕಿ ಬ್ರಹ್ಮಾವರ ಅವರು ಅಧ್ಯಕ್ಷತೆ ವಹಿಸಿದ್ದರು. ಅಡ್ಯಾರು ಮಹಾಬಲ ಶೆಟ್ಟಿ, ದಾಮೋದರ ನಿಸರ್ಗ ಉಪಸ್ಥಿತರಿದ್ದರು. ಡಿಎಂ.ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.