ಮಂಗಳೂರು,ನ.01 : ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶನಿವಾರ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ 14 ತಂಡ ಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು
ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾ ರೋಹಣಾಗೈದು, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಮಂಗಳೂರಿನಲ್ಲಿ ಮೌಲಾನಾ ಅಬ್ದುಲ್ ಕಲಾಂ ಅಜಾದ್ ಭವನವನ್ನು 2ಕೋಟಿ ವೆಚ್ಚದಲ್ಲಿ ಅಲ್ಪಸಂಖ್ಯಾತ ಇಲಾಖೆಯ ಕಚೇರಿಗಳ ಸಂಕೀರ್ಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು
ಮಂಗಳೂರು- ಬೆಂಗಳೂರು ಹೆದ್ಧಾರಿಯಲ್ಲಿ ಬಿ.ಸಿ ರೋಡ್ ಹಾಸನದವರೆಗೆ ಚತುಷ್ಪಥಗೊಳಿಸುವ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ.ಈಗಾಗಲೇ ಅಗತ್ಯ ಭೂಸ್ವಾಧೀನಕ್ಕೆ ಚಾಲನೆ ನೀಡಲಾಗಿದೆ. ಶಿರಾಡಿ ಘಾಟಿನ ಕಾಂಕ್ರೀಟೀಕರಣ ಕಾಮಗಾರಿಯನ್ನು 155 ಕೋಟಿ ವೆಚ್ಚದಲ್ಲಿ ಡಿಸೆಂಬರ್ ತಿಂಗಳಿನಿಂದ ಕೈಗೆತ್ತಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಬಳಿಕ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 30 ಮಂದಿ ಸಾಧಕರಿಗೆ ಈ ಬಾರಿಯ ದ,ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಾನಪದ- ನಾರಾಯಣ ಶಾಂತಿ ಪಟ್ಲಕೆರೆ ಸರಪಾಡಿ ಬಂಟ್ವಾಳ, ಸಾಹಿತ್ಯ- ಕೆ.ಲಕ್ಷ್ಮೀನಾರಾಯಣ ಆಚಾರ್ಯ ಕಾರಿಂಜೆ ಬಂಟ್ವಾಳ, ಗಾಯನ- ಮಹಮ್ಮದ್ ಇಕ್ಬಾಲ್ ಮಂಗಳೂರು, ರಂಗಭೂಮಿ- ಭೋಜರಾಜ ವಾಮಂಜೂರು, ಪ್ರದೀಪ್ ಆಳ್ವ ಕದ್ರಿ ಮಂಗಳೂರು, ಸಂಗೀತ- ಪೊಳಲಿ ಚಂದ್ರಶೇಖರ ದೇವಾಡಿಗ ಬಂಟ್ವಾಳ, ಸೂರಜ್ ಕುಡುಪು ಮಂಗಳೂರು, ಗಣೇಶ್ ನವಗಿರಿ ಸುರತ್ಕಲ್ ಮಂಗಳೂರು, ಪತ್ರಿಕೋದ್ಯಮ- ಗುರುವಪ್ಪ ಎನ್.ಟಿ.ಬಾಳೆಪುಣಿ ಬಂಟ್ವಾಳ, ಕ್ರೀಡೆ- ಸೀತಾರಾಮ ಕುಲಾಲ್ ಮೂಡುಬಿದಿರೆ, ಸಮಾಜಸೇವೆ- ರಾಜೀವ ಶೆಟ್ಟಿ ಯೆಡ್ತೂರು ಮಂಗಳೂರು, ರಾಜವರ್ಮ ಬಲ್ಲಾಳ್ ಬೆಳ್ತಂಗಡಿ, ಸುರೇಶ್ ಭಟ್ ಬಾಕ್ರಬೈಲ್ ಮಂಗಳೂರು, ಹಿಲ್ಡಾ ರಾಯಪ್ಪನ್ ಮಂಗಳೂರು, ಡಾ.ಶಾಂತಾರಾಮ ಬಾಳಿಗ ಮಂಗಳೂರು, ಶಿಕ್ಷಣ- ಡಾ.ಸುಕುಮಾರ ಗೌಡ ಪುತ್ತೂರು, ಪಿ.ಸಿ.ಎಂ.ಕುಂಞಿ ಮಂಗಳೂರು, ಕ್ರೀಡೆ(ವಿಶೇಷ ಸಾಮರ್ಥ್ಯ)- ಅಜಯ್ ಪಿ.ರಾವ್ ಮಂಗಳೂರು, ನಾಮದೇವ್ ರಾವ್ ಬೆಳ್ತಂಗಡಿ, ಕ್ರೀಡೆ- ಪುರುಷೋತ್ತಮ ಗುಜರಾನ್ ಮಂಗಳೂರು, ಸುರೇಶ್ ಬಾಬು ಅತ್ತಾವರ ಮಂಗಳೂರು, ಜಾನಪದ- ಎಂ.ಗೋಪಾಲ ಗೌಡ ಮಂಗಳೂರು, ಶಂಕರನಾರಾಯಣ ಹೊಳ್ಳ ಚಿಲಿಪಿಲಿ ಗೊಂಬೆ ಬಳಗ ಬಂಟ್ವಾಳ, ಯಕ್ಷಗಾನ- ಸಬ್ಬಣಕೋಡಿ ರಾಮ ಭಟ್ ಬಂಟ್ವಾಳ, ದಿಲೀಪ್ ಸುವರ್ಣ ಕುಳಾಯಿ ಮಂಗಳೂರು, ಸಂಸ್ಥೆ- ಜನಶಿಕ್ಷಣ ಟ್ರಸ್ಟ್ ಮಂಗಳೂರು, ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಕಮ್ಮಟ ಸಮಿತಿ ಬೆಳ್ತಂಗಡಿ, ಪರಿಸರ- ಶ್ರೀಪಡ್ರೆ ಕಾಸರಗೋಡು, ಸಮಾಜ ಸೇವೆ- ಧೂಮಪ್ಪ ಮೇಸ್ತ್ರಿ ಮಂಗಳೂರು. ಮುಂತಾದವರು ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರು. ಸುಳ್ಯ ತಾಲೂಕಿನ ಯಾರೊಬ್ಬರಿಗೂ ಈ ಬಾರಿ ಪ್ರಶಸ್ತಿ ನೀಡಲಾಗಿಲ್ಲ.
ಕಾರ್ಯಕ್ರಮದ ಮೊದಲಿಗೆ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ಜಿಲ್ಲಾಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್ ಸಹ ಯೋಗದೊಂದಿಗೆ ಆಕರ್ಷಕ ರಾಜ್ಯೋತ್ಸವ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಶಾಸಕರಾದ ಜೆ.ಆರ್.ಲೊಬೋ, ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ, ಪೊಲೀಸ್ ಆಯುಕ್ತ ಹಿತೇಂದ್ರ, ಕಲ್ಕೂರ ಪ್ರತಿಷ್ಟಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಉಪನಿರ್ದೇಶಕ ಚಂದ್ರಹಾಸ ರೈ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.