ಕರಾವಳಿ

ಎಸ್ಸೆಸ್ಸೆಫ್‌ನ ಬೆಳ್ಳಿಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕರ್ನಾಟಕ ಯಾತ್ರೆ ಸಮಾರೋಪ

Pinterest LinkedIn Tumblr

SSF_Karntk_yatre_1

ಎಸ್ಸೆಸ್ಸೆಫ್‌ನ ಬೆಳ್ಳಿಹಬ್ಬದ ಪ್ರಯುಕ್ತ ಅಖಿಲ ಭಾರತ ಜಂಇಯ್ಯತುಲ್ ಉಲಮಾದ ರಾಷ್ಟ್ರೀಯ ಪ್ರ.ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹಮ್ಮಿಕೊಂಡಿದ್ದ ಕರ್ನಾಟಕ ಯಾತ್ರೆಯ ಸಮಾರೋಪ ಸಮಾರಂಭವು ಮಂಗಳೂರಿನ ನೆಹರೂ ಮೈದಾನದಲ್ಲಿ ರವಿವಾರ ನಡೆಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿ, ಮಿಲಾಗ್ರಿಸ್ ಚರ್ಚ್‌ನ ಪ್ರ. ಧರ್ಮಗುರು ರೆ.ಫಾ.ವಲೇರಿಯನ್ ಡಿಸೋಜ, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ವಿನಯಕುಮಾರ್ ಸೊರಕೆ, ಅಭಯಚಂದ್ರ ಜೈನ್, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಯೆನೆಪೋಯ ವಿ.ವಿ. ಕುಲಾಧಿಪತಿ ಹಾಜಿ ವೈ.ಅಬ್ದುಲ್ಲ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಶಾಫಿ ಸಅದಿ ನಂದಾವರ, ಹಾಜಿ ಎ.ಎ.ಹೈದರ್ ಪರ್ತಿಪ್ಪಾಡಿ ಮತ್ತಿತರರು ಉಪಸ್ಥಿತರಿದ್ದರು.

ಮಂಗಳೂರು, ನ.3: ಎಸ್ಸೆಸ್ಸೆಫ್ ಬೆಳ್ಳಿಹಬ್ಬದ ಪ್ರಯುಕ್ತ ಅಖಿಲ ಭಾರತ ಜಂಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಾಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ‘ಮನುಕುಲವನ್ನು ಗೌರವಿಸಿ’ ಎಂಬ ಘೋಷಣೆಯೊಂದಿಗೆ ಅ.25ರಂದು ಗುಲ್ಬರ್ಗಾದಿಂದ ಆರಂಭಗೊಂಡ ‘ಕರ್ನಾಟಕ ಯಾತ್ರೆ’ಯು ಮಂಗಳೂರಿನ ನೆಹರೂ ಮೈದಾನದಲ್ಲಿ ರವಿವಾರ ಸಮಾಪ್ತಿಗೊಂಡಿತು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘‘ಈ ದೇಶದ ಸಂಪತ್ತು ಎಲ್ಲರಿಗೂ ಹಂಚಿಕೆ ಆಗಬೇಕು. ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವ ನನ್ನನ್ನು ಅಲ್ಪ ಸಂಖ್ಯಾತರನು ಓಲೈಸುತ್ತಿರುವುದಾಗಿ ಟೀಕಿಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಸಹಿತ ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದರು.

SSF_Karntk_yatre_2

ಧರ್ಮ-ಜಾತಿಯ ಹೆಸರಿನಲ್ಲಿ ಸಂಘಟನೆಗಳನ್ನು ಮಾಡಿ ದೇವರ ಹೆಸರಿನಲ್ಲಿ ಎತ್ತಿ ಕಟ್ಟುವ ಕೆಲಸ ಮಾಡುವವರನ್ನು ಎಲ್ಲ ಧರ್ಮೀಯರೂ ಖಂಡಿಸಬೇಕಿದೆ. ಇಂದಿನ ದಿನಗಳಲ್ಲಿ ನೈತಿಕ ಶಿಕ್ಷಣದ ಕೊರತೆ ಕಾಡುತ್ತಿದೆ. ಎ.ಪಿ.ಉಸ್ತಾದರ ನೇತೃತ್ವದಲ್ಲಿ ವಿದ್ಯಾರ್ಥಿಗಳಲ್ಲಿ ನೈತಿಕ ಪ್ರಜ್ಞೆ ಬೆಳೆಸುವ ಉದ್ದೇಶದ ಎಸ್ಸೆಸ್ಸೆಫ್‌ನಂತಹ ಸಂಘಟನೆಗಳು ಇನ್ನಷ್ಟು ಬೆಳೆಯ ಬೇಕಿದೆ ಎಂದು ಮುಖ್ಯಮಂತ್ರಿ ನುಡಿದರು.

ವಿಧ್ವಂಸ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ದೇಶದಲ್ಲಿ ಮುಸ್ಲಿಮರ ಹೆಸರಿನಲ್ಲಿ ಭಯೋತ್ಪದನೆ, ವಿಧ್ವಂಸಕ ಕೃತ್ಯಗಳು ನಡೆಯುತ್ತಿವೆ. ಈ ಸಮಾಜ ದ್ರೋಹಿ ಕೆಲಸಗಳಲ್ಲಿ ತೊಡಗಿರುವವರು ಯಾರು ಮತ್ತು ಮುಸ್ಲಿಮರ ಹೆಸರಿನಲ್ಲಿ ಬೇರೆ ಇನ್ಯಾರಾದರೂ ಇಂತಹ ಕೃತ್ಯ ಮಾಡುತ್ತಿದ್ದಾರೆಯೇ ಎಂಬ ವಿಷಯದ ತನಿಖೆ ನಡೆಸಿ, ಯಾರೇ ತೊಡಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಎ.ಪಿ.ಅಬೂಬಕರ್ ಮುಸ್ಲಿಯಾರ್‌ರ ಮನವಿಗೆ ತಮ್ಮ ಭಾಷಣದಲ್ಲಿ ಮುಖ್ಯಮಂತ್ರಿ ಈ ರೀತಿ ಪ್ರತಿಕ್ರಿಯಿಸಿದರು.

SSF_Karntk_yatre_4

ದೇಶದ ಸಂರಕ್ಷಣೆ ಪ್ರತಿಯೊಬ್ಬನ ಕರ್ತವ್ಯವಾಗಿದೆ: ಎ.ಪಿ.ಉಸ್ತಾದ್

ಪ್ರಧಾನ ಭಾಷಣ ಮಾಡಿದ ‘ಕರ್ನಾಟಕ ಯಾತ್ರೆ’ಯ ರೂವಾರಿ ಕಾಂತಾಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್, ‘ಭಾರತ ದೇಶದ ಸಂರಕ್ಷಣೆ ಪ್ರತಿಯೊಬ್ಬನ ಕರ್ತವ್ಯವಾಗಿದೆ. ಜಾತಿ, ಮತಭೇದವಿಲ್ಲದೆ ದೇಶದ ಅಭಿವೃದ್ಧಿಗೆ ಮತ್ತು ದೇಶದ ಅಖಂಡತೆಗೆ ಶ್ರಮಿಸುವುದು ಪ್ರತಿಯೊಬ್ಬನ ಜವಾಬ್ದಾರಿಯಾಗಿದೆ. ಇದರಲ್ಲಿ ಮುಸ್ಲಿಮರು ಮುಂಚೂಣಿಯಲ್ಲಿರುತ್ತಾರೆ’ ಎಂದರು.

SSF_Karntk_yatre_3

‘ಇಸ್ಲಾಂ ಶಾಂತಿಯನ್ನು ಪ್ರತಿಪಾದಿಸುತ್ತಿದೆ ಮತ್ತು ಮತ ಸೌಹಾರ್ದಕ್ಕೆ ಆದ್ಯತೆ ನೀಡಿದೆ. ಅದೆಂದೂ ಅಕ್ರಮ, ಅನೀತಿ, ಕೋಮುವಾದ, ಭಯೋತ್ಪಾದನೆಗೆ ಆಸ್ಪದ ನೀಡುತ್ತಿಲ್ಲ. ಕೇರಳದ ಹಲವೆಡೆ ಭಯಭೀತಿ ಹುಟ್ಟಿಸುವ ಪೋಸ್ಟರ್, ಭಿತ್ತಿಪತ್ರಗಳು ಕಂಡುಬಂದಿವೆ. ಒಂದು ನಿರ್ದಿಷ್ಟ ಸಮುದಾಯವನ್ನು ಸಂಕುಚಿತ ದೃಷ್ಟಿಯಿಂದ ನೋಡುವ ಸಾಧ್ಯತೆ ಇರುವುದರಿಂದ ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಕೇರಳ ಸರಕಾರಕ್ಕೆ ಈಗಾಗಲೇ ಆಗ್ರಹಿಸಿದ್ದೇನೆ’ ಎಂದರು.

SSF_Karntk_yatre_5

‘ಸಣ್ಣಪುಟ್ಟ ವಿಚಾರಕ್ಕೆ ವಿವಿಧ ಧರ್ಮಗಳ ಮಧ್ಯೆ ನಡೆಯುವ ಘರ್ಷಣೆಗೆ ಕಡಿವಾಣ ಹಾಕಬೇಕು ಮತ್ತು ಪರಸ್ಪರ ರಾಜಿ ಸಂಧಾನ ನಡೆಸುವ ಮೂಲಕ ಸೌಹಾರ್ದದ ವಾತಾವರಣ ಸೃಷ್ಟಿಸಬೇಕು’ ಎಂದರು.

ಇದೇ ಸಂದರ್ಭ ಎ.ಪಿ.ಉಸ್ತಾದ್, ‘ಮುಸ್ಲಿಮರಿಗೆ ಅರ್ಹವಾಗಿ ಲಭಿಸಬೇಕಾಗಿದ್ದ ರಾಜಕೀಯ ಪ್ರಾತಿ ನಿಧ್ಯವನ್ನೂ ನೀಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನವಿ ಮಾಡಿದರು.

ಯೆನೆಪೊಯ ವಿ.ವಿ. ಕುಲಾಧಿಪತಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ವೈ.ಅಬ್ದುಲ್ಲ ಕುಂಞಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೈಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಎಟ್ಟಿಕ್ಕುಳಂ ದುಆ ಮಾಡಿದರು.

ssf_karnataka_prog_4 ssf_karnataka_prog_5

ಕರ್ನಾಟಕ ಸುನ್ನಿ ಜಂ ಇಯ್ಯತುಲ್ ಉಲಮಾದ ಅಧ್ಯಕ್ಷ, ಖಾಝಿ ಬೇಕಲ ಪಿ.ಎಂ.ಇಬ್ರಾಹೀಂ ಮುಸ್ಲಿಯಾರ್, ಪೇಜಾವರ ಮಠದ ವಿಶ್ವೇಶ್ವ ತೀರ್ಥ ಸ್ವಾಮೀಜಿ, ಮಿಲಾಗ್ರಿಸ್ ಚರ್ಚ್‌ನ ಪ್ರಧಾನ ಧರ್ಮಗುರು ರೆ.ಫಾ. ವಲೇರಿಯನ್ ಡಿಸೋಜ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ.ಇಬ್ರಾಹೀಂ ಮಾನವತಾ ಸಂದೇಶ ನೀಡಿದರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮೇಯರ್ ಮಹಾಬಲ ಮಾರ್ಲ, ಮಾಜಿ ಸಂಸದ ಎಚ್.ವಿಶ್ವನಾಥ, ಶಾಸಕರಾದ ಬಿ.ಎ.ಮೊಯ್ದಿನ್ ಬಾವ, ಐವನ್ ಡಿಸೋಜ, ಮಾಜಿ ಸಚಿವ ಅಮರನಾಥ ಶೆಟ್ಟಿ ಭಾಗವಹಿಸಿದ್ದರು.

ssf_karnataka_prog_8

ವೇದಿಕೆಯಲ್ಲಿ ಸೈಯದ್ ಯೂಸುಫ್ ತಂಙಳ್, ವೈಲತ್ತೂರು ತಂಙಳ್, ಸೈಯದ್ ಬಾಫಕಿ ತಂಙಳ್, ಸೈಯದ್ ಆಟಕೋಯ ತಂಙಳ್ ಕುಂಬೋಳ್, ಸೈಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್, ಸೈಯದ್ ಇಬ್ರಾಹೀಂ ಖಲೀಲುಲ್ ಬುಖಾರಿ ಕಡಲುಂಡಿ, ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪಿ.ಎಂ.ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಎಂ.ಆಲಿಕುಂಞಿ ಮುಸ್ಲಿಯಾರ್ ಶಿರಿಯಾ, ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ, ಡಾ.ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಯು.ಎಸ್. ಹಂಝ, ಉದ್ಯಮಿಗಳಾದ ಹಾಜಿ ಯು.ಕೆ. ಮೋನು ಕಣಚೂರು, ಸ್ವಾಗತ ಸಮಿತಿಯ ಉಪಾಧ್ಯಕ್ಷ ಹಾಜಿ ಎ.ಹಮೀದ್ ಕಂದಕ್, ಕಾರ್ಯದರ್ಶಿ ಹಾಜಿ ಎ.ಎ.ಹೈದರ್ ಪರ್ತಿಪ್ಪಾಡಿ, ಎಸ್ಸೆಸ್ಸೆಫ್ ಬೆಳ್ಳಿಹಬ್ಬ ಸಮಿತಿಯ ಅಧ್ಯಕ್ಷ ಎಸ್.ಪಿ. ಹಂಝ ಸಖಾಫಿ ಬಂಟ್ವಾಳ, ನಿವೃತ್ತ ಪೊಲೀಸ್ ಅಧಿಕಾರಿ ಜಿ.ಎ.ಬಾವ ಉಪಸ್ಥಿತರಿದ್ದರು.

ಕರ್ನಾಟಕ ಯಾತ್ರೆಯ ಸಂಚಾಲಕ ಶಾಫಿ ಸಅದಿ ನಂದಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಸೆೆಸ್ಸೆಫ್ ರಾಷ್ಟ್ರೀಯ ಉಪಾಧ್ಯಕ್ಷ ಎಮ್ಮೆಸ್ಸೆಂ ಝೈನಿ ಕಾಮಿಲ್ ಸಖಾಫಿ ಮತ್ತು ಕೆ.ಎಂ.ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು.

ಸುರಿಯುವ ಮಳೆಯನ್ನೂ ಲೆಕ್ಕಿಸದೆ ಸಮಾರಂಭದಲ್ಲಿ ಭಾರೀ ಸಂಖ್ಯೆಯಲ್ಲಿ ಎಸ್ಸೆಸ್ಸೆಫ್ ಕಾರ್ಯಕರ್ತರು ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಅವಿಭಜಿತ ದ.ಕ. ಜಿಲ್ಲೆಯಲ್ಲದೆ ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ದಾವಣಗೆರೆ, ಹಾವೇರಿ, ಬಳ್ಳಾರಿ ಮತ್ತಿತರ ಜಿಲ್ಲೆಯಿಂದ ಆಗಮಿಸಿದ ಶ್ವೇತ ವಸ್ತ್ರಧಾರಿ ಕಾರ್ಯಕರ್ತರು ಪಂಪ್‌ವೆಲ್ ಮತ್ತು ಜ್ಯೋತಿ ವೃತ್ತದ ಬಳಿ ಜಮಾಯಿಸಿ ನೆಹರೂ ಮೈದಾನಕ್ಕೆ ರ್‍ಯಾಲಿ ನಡೆಸಿದರು.

ಅತ್ಯಂತ ಶಿಸ್ತುಬದ್ಧವಾಗಿ ಸಮಾರಂಭದಲ್ಲಿ ಪಾಲ್ಗೊಂಡ ಎಸ್ಸೆಸ್ಸೆಫ್ ಕಾರ್ಯಕರ್ತರಿಗೆ ಅಸರ್ ಮತ್ತು ಮಗ್ರಿಬ್ ನಮಾಝ್ ಮಾಡಲು ಸ್ಥಳದಲ್ಲೇ ಅವಕಾಶ ಕಲ್ಪಿಸಲಾಯಿತು.

Write A Comment