ಮಂಗಳೂರು: ಅಡ್ಯಾರ್ ಕಣ್ಣೂರು ನಿವಾಸಿ ಸಣ್ಣಪುತ್ತ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಜಾಜ್(23) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿಯನ್ನು ಶನಿವಾರ ಬಂಧಿಸಿದ್ದಾರೆ.
ಅಡ್ಯಾರ್ ಕಟ್ಟೆ ಬಳಿ ನಿವಾಸಿ ಎ.ಕೆ.ರಿಯಾಜ್ ಯಾನೆ ಜೀಯಾ(33), ಕಣ್ಣೂರಿನ ಯೂಸುಫ್ ನಗರ ನಿವಾಸಿ ಮುಸ್ತಾಕ್ ಆಹಮ್ಮದ್(30), ಕಣ್ಣೂರು ಗ್ರಾಮದ ಬೋರ್‌ಗುಡ್ಡೆ ದಯಾಂಬು ಎಂಬಲ್ಲಿನ ಅನೀಜ್(22), ಕಣ್ಣೂರು ಗ್ರಾಮದ ಬಲ್ಲೂರುಗುಡ್ಡೆ ಕುಂಡಾಲದ ಅಝ್ಮಾನ್(22), ಕಣ್ಣೂರು ಗ್ರಾಮದ ಗಾಣದಬೆಟ್ಟು ನಿವಾಸಿ ಫಜಲ್(20) ಮತ್ತು ಶಾಭಾಜ್ (22) ಬಂಧಿತ ಆರೋಪಿಗಳು.
ಕಾರ್ಯಾಚರಣೆ: ಆರೋಪಿಗಳು ಮೂಡುಬಿದರೆಯಿಂದ ವಾಮಂಜೂರು ಮಾರ್ಗವಾಗಿ ಮಂಗಳೂರು ಕಡೆಗೆ ಮಾರುತಿ ಆಲ್ಟೋ ಕಾರಿನಲ್ಲಿ ಬರುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗುರುಪುರ ಪರಾರಿ ಎಂಬಲ್ಲಿ ಕಾರನ್ನು ತಡೆದು ಆರೋಪಿಗಳನ್ನು ಬಂಧಿಸಿದ್ದಾರೆ.
– ಇಜಾಜ್ –
ಮಹಮ್ಮದ್ ಇಜಾಜ್ ಆತನ ಸಹಚರರೊಂದಿಗೆ 2012ರಲ್ಲಿ ತಮ್ಮ ಸ್ನೇಹಿತ ಸಣ್ಣ ಪುತ್ತನನ್ನು ಕೊಲೆ ಮಾಡಿರುವುದಕ್ಕೆ ಪ್ರತೀಕಾರಕ್ಕಾಗಿ ಮಹಮ್ಮದ್ ಇಜಾಜ್‌ನನ್ನು ತಲವಾರು ಮತ್ತು ಮಚ್ಚು ಕತ್ತಿಗಳಿಂದ ಕಡಿದು ಕೊಲೆ ಮಾಡಿದ್ದೇವೆ ಎಂಬುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯಕ್ಕೆ ಉಪಯೋಗಿಸಿದ ಮಾರುತಿ ಕಾರು ಹಾಗೂ ಆಯುಧಗಳನ್ನು ಸ್ವಾಧೀನಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆ ತಂಡ: ಮಂಗಳೂರು ನಗರ ಪೊಲೀಸ್ ಕಮಿಷನರ್ ಆರ್.ಹಿತೇಂದ್ರ, ಡಿಸಿಪಿ ಡಾ.ಜಗದೀಶ್ ಮತ್ತು ಡಿಸಿಪಿ ವಿಷ್ಣುವರ್ಧನ ಮಾರ್ಗದರ್ಶನದಲ್ಲಿ ಎಸಿಪಿ ಪವನ್ ನಜ್ಜೂರು ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸ್ ನೀರೀಕ್ಷಕ ಎ.ಕೆ.ರಾಜೇಶ್ ನೇತತ್ವದಲ್ಲಿ ಉಪನಿರೀಕ್ಷಕ ಎಂ.ಡಿ.ಮಡ್ಡಿ, ಸಹಾಯಕ ಪೊಲೀಸ್ ನಿರೀಕ್ಷಕ ಎ.ಕುಶಾಲಪ್ಪ, ಹೆಡ್ ಕಾನ್‌ಸ್ಟೇಬಲ್ ಮೋಹನ್, ಸಿಬ್ಬಂದಿಗಳಾದ ಅಡೂರು ಚಂದ್ರ, ಮೆಲ್ವಿನ್ ಪಿಂಟೋ, ಧರ್ಮಪಾಲ, ಸುಧೀರ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣದ ಹಿನ್ನೆಲೆ: ಕಣ್ಣೂರಿನ ಸೆಲೂನ್‌ನಲ್ಲಿ ಶುಕ್ರವಾರ ಬೆಳಗ್ಗೆ 10.50ಕ್ಕೆ ಇಜಾಜ್ ಶೇವ್ ಮಾಡಿಸುತ್ತಿದ್ದಾಗ ದುಷ್ಕರ್ಮಿಗಳ ತಂಡ ಸೆಲೂನ್ ಒಳಗೆ ನುಗ್ಗಿ ಇಜಾಜ್‌ನನ್ನು ಕುಳಿತಲ್ಲೇ ಕೊಚ್ಚಿ ಹಾಕಿತ್ತು.
ಮುಖ ಸೇರಿದಂತೆ ದೇಹದ ಹಲವು ಭಾಗಗಳಿಗೆ ಯದ್ವಾ ತದ್ವ ಕಡಿದ ಆರೋಪಿಗಳು ತಲವಾರನ್ನು ಝಳಪಿಸುತ್ತಲೇ ಸ್ಥಳದಿಂದ ಪರಾರಿಯಾಗಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಇಜಾಜ್ ಸ್ಥಳದಲ್ಲೇ ಮೃತಪಟ್ಟಿದ್ದ.