ಕರಾವಳಿ

ರಕ್ತದಾನದಿಂದ ಸರ್ವಧರ್ಮ ಸಮನ್ವಯ : ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಡಾ.ಡಿ.ವೀರೇಂದ್ರ ಹೆಗ್ಗಡೆ

Pinterest LinkedIn Tumblr

Blud_Donetion_camp_1

ಮಂಗಳೂರು: ವಿಶ್ವ ಹಿಂದೂ ಪರಿಷತ್ ಸುವರ್ಣ ಮಹೋತ್ಸವ ಹಾಗೂ ಬಜರಂಗದಳ ವತಿಯಿಂದ ಅಯೋಧ್ಯಾ ಬಲಿದಾನ ದಿನದ ಅಂಗವಾಗಿ ಬೃಹತ್ ರಕ್ತದಾನ ಶಿಬಿರ ಭಾನುವಾರ ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದಲ್ಲಿ ಜರಗಿತು.

ಶಿಬಿರವನ್ನು ಉದ್ಘಾಟಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಎಲ್ಲ ಜಾತಿ ಧರ್ಮವನ್ನು ಮೀರಿ ಬಾಂಧವ್ಯವನ್ನು ಬೆಸೆಯುವ ರಕ್ತದಾನದಿಂದ ಸರ್ವಧರ್ಮ ಸಮನ್ವಯ ಸಾಧಿಸಬಹುದು ಎಂದು ಹೇಳಿದರು.

ರಕ್ತದಲ್ಲಿ ಯಾವ ಭೇದವೂ ಇಲ್ಲವಾಗಿದ್ದು, ದಾನಿಗಳು ಯಾರೆನ್ನುವುದು ಕೂಡಾ ಮುಖ್ಯವಾಗುವುದಿಲ್ಲ .ಇನ್ನೊಬ್ಬರ ಹಿತಕ್ಕಾಗಿ ರಕ್ತದಾನ ಮಾಡುವುದರಿಂದ ಯಾವುದೇ ಹಾನಿಯಿಲ್ಲದ ಕಾರಣ ನೈಜ ಧರ್ಮಸಮನ್ವಯ ಎಂದು ಅವರು ನುಡಿದರು.

ರಕ್ತದಾನದಂತಹ ರಚನಾತ್ಮಕ ಚಟುವಟಿಕೆಗಳ ಮೂಲಕ ಬಜರಂಗದಳ ಕಾರ್ಯಕರ್ತರು ತಮ್ಮ ಅಂತಃಶಕ್ತಿ ವೃದ್ಧಿಸಿಕೊಳ್ಳಬೇಕು ಮಾತ್ರವಲ್ಲದೆ ಹಿಂದೂ ಸಮಾಜದಲ್ಲಿನ ಪರಂಪರಾಗತ ವ್ಯತ್ಯಾಸ ತೊಡೆಯಲು ರಕ್ತದಾನ ಸಮರ್ಪಕ ಎಂದರು.

ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಶರಣ್ ಪಂಪ್‌ವೆಲ್ ಮಾತನಾಡಿ, ದೇಶದಲ್ಲಿ 1 ಲಕ್ಷ ಹಾಗೂ ರಾಜ್ಯದಲ್ಲಿ 10 ಸಾವಿರ ಮತ್ತು ಮಂಗಳೂರಿನಲ್ಲಿ 1200 ಮಂದಿ ರಕ್ತದಾನ ಮಾಡುವ ಉದ್ದೇಶವಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಆರ್‌ಎಸ್‌ಎಸ್ ವಿಭಾಗ ಸಂಘ ಚಾಲಕ ಡಾ.ಪಿ.ವಾಮನ ಶೆಣೈ, ಉದ್ಯಮಿ ವಿವೇಕ್‌ರಾಜ್, ಕ್ರೆಡೈ ಅಧ್ಯಕ್ಷ ಪುಷ್ಪರಾಜ್ ಜೈನ್, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಕಾರ್ಯದರ್ಶಿ ಕೃಷ್ಣಮೂರ್ತಿ, ಕಾರ್ಯದರ್ಶಿ ಗೋಪಾಲ ಕುತ್ತಾರ್, ಬಜರಂಗದಳ ಸಂಯೋಜಕ ಭುಜಂಗ ಕುಲಾಲ್ ಉಪಸ್ಥಿತರಿದ್ದರು.

ಕೆ.ಎಸ್.ಹೆಗ್ಡೆ ಆಸ್ಪತ್ರೆ, ಕೆಎಂಸಿ, ಎ.ಜೆ, ವೆನ್ಲಾಕ್, ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ರೆಡ್‌ಕ್ರಾಸ್ ಪ್ರತ್ಯೇಕ ಕೊಠಡಿಗಳಲ್ಲಿ ರಕ್ತದಾನ ಪ್ರಕ್ರಿಯೆ ನಡೆಸಿದವು. ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಜಗದೀಶ ಶೇಣವ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

Write A Comment