ಮಂಗಳೂರು, ನ.3: ಬೆಳ್ತಂಗಡಿಯ ಕುತ್ಲೂರು ಪ್ರದೇಶಕ್ಕೆ ಆಗಮಿಸುವ ಎಎನ್‌ಎಫ್ ಸಿಬ್ಬಂದಿ ಸ್ಥಳೀಯರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿರುವುದರ ಜತೆಗೆ ದೌರ್ಜನ್ಯ ಎಸಗುತ್ತಿದೆ ಎಂದು ದಲಿತ ಮುಖಂಡ ವಿಠ್ಠಲ ಮಲೆಕುಡಿಯ ದೂರಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪಎಸ್. ಅಧ್ಯಕ್ಷತೆಯಲ್ಲಿ ರವಿವಾರ ಅಧೀಕ್ಷಕರ ಕಚೇರಿಯಲ್ಲಿ ನಡೆದ ದಲಿತರ ಕುಂದು ಕೊರತೆಯ ಮಾಸಿಕ ಸಭೆಯಲ್ಲಿ ಅವರು ಈ ಆರೋಪ ಮಾಡಿದರು.ಸೆ.14ರಂದು ಮನೆಯಲ್ಲಿ ಪುರುಷರು ಇಲ್ಲದ ವೇಳೆ ಆಗಮಿಸಿದ ತಂಡ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿದೆ. ಕುರಿಯಾಡಿಯ ಅಂಗನವಾಡಿ ಕೇಂದ್ರದ ಬೀಗದ ಕೀಲಿ ಕೈಯನ್ನು ಕೂಡಾ ಕೇಳುತ್ತಿದ್ದಾರೆ ಎಂದು ವಿಠ್ಠಲ ಮಲೆಕುಡಿಯ ದೂರಿದರು.ಮನೆಯಲ್ಲಿನ ಯುವಕರು ಪೇಟೆಗೆ ಹೋದರೂ ಕೂಡಾ ಎಎನ್‌ಎಫ್ ತಂಡ ಪ್ರಶ್ನಿಸುತ್ತಿರುವುದರ ಜತೆಗೆ ಪರೋಕ್ಷವಾಗಿ ನಕ್ಸಲ್ ಚಟುವಟಿಕೆಯಲ್ಲಿ ಯುವಕರು ಪಾಲ್ಗೊಳ್ಳುವಂತೆ ಪ್ರಚೋದಿಸುತ್ತಿದ್ದಾರೆ ಎಂದು ದಲಿತ ಮುಖಂಡ ಶೇಖರ್ ದೂರಿದರು.
ಪಟ್ರಮೆಯ ಏಲ್ಯಡ್ಕದಲ್ಲಿ ವ್ಯಕ್ತಿಯೊಬ್ಬರು ಅರಣ್ಯ ಒತ್ತುವರಿ ಮಾಡಿದ ಬಗ್ಗೆ ದೂರು ನೀಡಿದವರ ವಿರುದ್ಧ ದಲಿತರನ್ನು ಬಳಸಿಕೊಂಡು ಸುಳ್ಳು ಪ್ರಕರಣ ದಾಖಲಿಸುವ ಮೂಲಕ ದಲಿತ ದೌರ್ಜನ್ಯ ಕಾಯ್ದೆಯನ್ನು ದುರುಪಯೋಗ ಮಾಡುತ್ತಿದ್ದಾರೆ ಎಂದು ಶೇಖರ್ ಆರೋಪಿಸಿದರು.ಕಳೆದ ಕೆಲವು ಸಮಯಗಳಿಂದ ದಲಿತ ದೌರ್ಜನ್ಯ ಪ್ರಕರಣಗಳ ಹಲವಾರು ದೂರು ನೀಡಿದ್ದರೂ, ಪೊಲೀಸರು ಸೂಕ್ತ ತನಿಖೆ ನಡೆಸದೆ ಕೇವಲ ಸಾಕ್ಷ್ಯವನ್ನು ಮಾತ್ರ ಕೇಳುತ್ತಿದ್ದಾರೆ. ಇದರಿಂದಾಗಿ ನ್ಯಾಯ ದೊರಕುತ್ತಿಲ್ಲ ಎಂದು ದಲಿತ ಮುಖಂಡ ಎಂ.ಎ. ನಾಯ್ಕ ಹೇಳಿದರು.
ಸುಳ್ಯ ಠಾಣೆ ವ್ಯಾಪ್ತಿಯ ಗೌರಿ ಮತ್ತು ಲಲಿತಾ ಎಂಬವರಿಗೆ ಸ್ಥಳೀಯರೊಬ್ಬರು ಜೀವ ಬೆದರಿಕೆ ಹಾಕಿದ ಬಗ್ಗೆ ನೀಡಿದ ದೂರಿನ ವಿಚಾರಣೆ ಸಮರ್ಪಕವಾಗಿ ನಡೆದಿಲ್ಲ. ಮಹಿಳೆಯರಿಗೆ ನ್ಯಾಯ ದೊರಕದಿದ್ದರೆ ಪೊಲೀಸ್ ಅಧೀಕ್ಷಕರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ದಲಿತ ಮುಖಂಡ ಎಸ್.ಪಿ.ಆನಂದ ಹೇಳಿದರು.ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಎಸ್ಪಿ ಶರಣಪ್ಪ ಭರವಸೆ ನೀಡಿದರು.ಬೆಳ್ತಂಗಡಿಯಲ್ಲಿ ಪತ್ರಿಕೆ ಹಾಗೂ ದಲಿತ ಸಂಘಟನೆಗಳ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಪ್ರಸ್ತಾಪಸಿದ ದಲಿತ ಮುಖಂಡ ಶೇಖರ್ ‘ಈ ಕುರಿತು ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿ ಎಎಸ್‌ಪಿ ರಾಹುಲ್ ಕುಮಾರ್ ‘ಇಬ್ಬರ ಸಮ್ಮುಖ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳುವೆ’ ಎಂದು ಭರವಸೆ ನೀಡಿದರು.
ಎಎನ್‌ಎಫ್ ತಂಡಕ್ಕೆ ಬೇಡಿಕೆ ಜಿಲ್ಲೆಗೆ ಪ್ರತ್ಯೇಕ 2 ಎಎನ್‌ಎಫ್ ತಂಡಗಳನ್ನು ನೇಮಕ ಮಾಡುವಂತೆ ಸರಕಾರವನ್ನು ಕೋರಲಾಗಿದೆ ಎಂದು ದ.ಕ. ಜಿಲ್ಲಾ ಎಸ್ಪಿ ಡಾ.ಶರಣಪ್ಪಡಿ.ಎಸ್. ಹೇಳಿದರು.
ಸಭೆಯ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಅವರು, ಪ್ರಸ್ತುತ ಎಎನ್‌ಎಸ್ ತಂಡವನ್ನು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ರಚಿಸಲಾಗಿದೆ. ಎಎನ್‌ಎಫ್ ತಂಡ ಜಿಲ್ಲೆಗೆ ಆಗಮಿಸುವವರೆಗೆ 15 ಕಾನ್‌ಸ್ಟೇಬಲ್‌ಗಳ ಎಎನ್‌ಎಸ್ ತಂಡ ಕಾರ್ಯಾಚರಿಸಲಿದೆ ಎಂದರು.