ಮಂಗಳೂರು,ನ.03 : ಸಭ್ಯರ ನಗರ ಎಂದು ಕರೆಯಲ್ಪಡುತ್ತಿದ್ದ ಮಂಗಳೂರು ನಗರ ಇಂದಿನ ದಿನಗಳಲ್ಲಿ ಕೊಲೆಗಟುಕರ ನಗರವಾಗಿ ಅಪರಾಧಿಗಳ ಪಾಲಿನ ಸ್ವರ್ಗವಾಗಿ ಮಾರ್ಪಡುತ್ತಿದೆ. ಮಂಗಳೂರು ಕಮಿಷನರ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸಾಲು ಸಾಲು ಕೊಲೆಗಳು, ಸರಣಿ ಕಳ್ಳತನ ಪ್ರಕರಣಗಳು, ಚೂರಿ ಇರಿತ , ನೈತಿಕ ಪೊಲೀಸ್ ಗಿರಿಯಂತಹಾ ಅಪರಾಧ ಚಟುವಟಿಕೆಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಮಂಗಳೂರಿನ ಕಮಿಷನರ್ ಆಗಿ ಆರ್ . ಹಿತೇಂದ್ರ ಅಧಿಕಾರ ಸ್ವೀಕಾರ ಮಾಡಿದ ನಂತರದ ದಿನಗಳಲ್ಲಿ ಹಾಡು ಹಗಲೇ ನಡೆಯುತ್ತಿರುವ ಅಪರಾಧ ಚಟುವಟಿಕೆಗಳಿಗೆ ಕಡಿವಾಣವೇ ಇಲ್ಲದಂತ್ತಾಗಿದೆ. ಹದಿಹರೆಯದ ಯುವಕರು ಪೊಲೀಸರ ಭಯವೇ ಇಲ್ಲದೆ ಅಪರಾಧದ ಕೃತ್ಯಗಳಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕಂಟಕವಾಗಿ ಮಾರ್ಪಡುತ್ತಿದ್ದಾರೆ. ಇನ್ನೊಂದೆಡೆ ಉಭಯ ಕೋಮುಗಳ ಮತಾಂಧ ಶಕ್ತಿಗಳು ಧರ್ಮ ಸಂಸ್ಕೃತಿಯ ಹೆಸರಲ್ಲಿ ನಿತ್ಯ ನೈತಿಕ ಪೊಲೀಸ್ ಗಿರಿಯಂತಹಾ ಚಟುವಟಿಕೆಗಳನ್ನು ಪೊಲೀಸರ ಭಯವಿಲ್ಲದೆ ನಡೆಸುತ್ತಿದ್ದಾರೆ. ಜೊತೆಗೆ ಭೂಗತ ಲೋಕದ ಪಾತಕಿಗಳು ಮಂಗಳೂರು ಕೇಂದ್ರೀಕರಿಸಿಕೊಂಡು ತಮ್ಮ ಅಪರಾಧ ಚಟುವಟಿಕೆಗಳನ್ನು ಎಸಗುತ್ತಿದ್ದಾರೆ. ಹೆಚ್ಚಾಗುತ್ತಿರುವ ಅಪರಾಧ ಚಟುವಟಿಕೆಗಳಿಂದ ಮಂಗಳೂರಿನ ಜನತೆ ಆತಂಕದಲ್ಲಿ ಜೀವಿಸುವಂತ್ತಾಗಿದೆ.
ಇದಕ್ಕೆಲ್ಲಾ ಹೊಣೆ ಮಂಗಳೂರು ಪೊಲೀಸ್ ಕಮಿಷನರ್ ಆರ್ .ಹಿತೇಂದ್ರ. ಇಷ್ಟೇಲ್ಲಾ ಅಪರಾಧ ಚಟುವಟಿಕೆಗಳು ನಡೆಯುತ್ತಿದ್ದರು ಮಂಗಳೂರು ಪೊಲೀಸ್ ಕಮಿಷನರ್ ಆರ್ . ಹಿತೇಂದ್ರ ಹಾಗೂ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಆರ್ . ಹಿತೇಂದ್ರ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಅವರ ಬದಲಿಗೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಗೆ ತರುವ ದಕ್ಷ ಹಾಗೂ ಕಡಕ್ ಪೊಲೀಸ್ ಕಮಿಷನರ್ ನೇಮಕ ಮಾಡಬೇಕು ಜೊತೆಗೆ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯ ಅಗತ್ಯ ಇದ್ದು ಈಗಾಗಲೇ ಇರುವ ಕೆಲವು ಅಧಿಕಾರಿಗಳನ್ನು ಬದಲಾಯಿಸಿ ಅಪರಾಧಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳ ಯೋಗ್ಯ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡುವಂತ್ತೆ ಗ್ರಹ ಇಲಾಖೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಡಿ.ವೈ.ಎಫ್ .ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ.
ಒಂದು ವೇಳೆ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲರಾದ ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ಅವರ ವರ್ಗಾವಣೆ ಆಗದೇ ಇದ್ದಲ್ಲಿ ಡಿವೈ.ಎಫ್.ಐ ಇತರ ಜನಪರ ಸಂಘಟನೆಗಳ ಜೊತೆಗಿನ ಸಹಭಾಗಿತ್ವದಲ್ಲಿ ಕಮಿಷನರ್ ಆರ್. ಹಿತೇಂದ್ರ ಹಠಾವೋ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿ.ವೈ.ಎಫ್ .ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.