ಬಂಟ್ವಾಳ,ನ,೦3 : ಚಿನ್ನದ ಪೇಟೆಯೆಂದೆ ಪ್ರತೀತಿ ಹೊಂದಿರುವ ಬಂಟ್ವಾಳದಲ್ಲಿ ನೆಲೆಯಾಗಿ ಸಮಸ್ತ ಭಕ್ತ ಸಮೂಹವನ್ನು ಹರಸುತ್ತಿರುವ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಭಾನುವಾರ ಮುಂಜಾನೆ ಹಣತೆ ದೀಪದ ‘ವಿಶ್ವರೂಪದರ್ಶನ’ ಭಕ್ತರ ಕಣ್ಮನ ಸೆಳೆಯಿತು. ಪ್ರಾತ: ಕಾಲ 4.30ರ ಬ್ರಾಹ್ಮೀ ಮಹೂರ್ತದಲ್ಲಿ ದೇವಳದ ಪ್ರಧಾನ ಆರ್ಚಕ ಶ್ರೀನಿವಾಸ ಭಟ್ ರವರು ಮಲ್ಲಿಗೆ ಪ್ರಿಯ ಶ್ರೀತಿರುಮಲ ವೆಂಕಟರಮಣನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಹೊರಾಂಗಣದ ತುಳಸಿಕಟ್ಟೆ ಬಳಿ ದೀಪ ಪ್ರಜ್ವಲನಗೈದು ಚಾಲನೆ ನೀಡಿದರು.
ತಕ್ಷಣ ದೇವಳದಲ್ಲಿ ಅದಾಗಲೇ ನೆರೆದಿದ್ದ ಭಕ್ತರು ದೇವಳದ ಸುತ್ತಲೂ ಜೋಡಿಸಿಟ್ಟಿದ್ದ ಸಾವಿರಾರು ಹಣತೆಯನ್ನು ಬೆಳಗಿಸಿದರು. ಮಕ್ಕಳು, ಹೆಂಗಳೆಯರು,ವೃದ್ದರು ಸೇರಿದಂತೆ ಭಕ್ತ ಸಮೂಹ ಏಕಕಾಲದಲ್ಲಿ ಹಣತೆ ದೀಪಗಳನ್ನು ಬೆಳಗಿಸಿ ಧನ್ಯರಾದರು.
ಬಳಿಕ ಸರತಿ ಸಾಲಿನಲ್ಲಿ ನಿಂತು ಹೂವಿನಿಂದ ವಿಶೇಷಾಲಂಕೃತಗೊಂಡಿದ್ದ ಶ್ರೀ ದೇವರ ದರ್ಶನ ಪಡೆದರು.ದೇವಳದ ಒಳಾಂಗಣವನ್ನು ಹೂವಿನಿಂದ ಶೃಂಗರಿಸಲಾಗಿತ್ತು.
ಇದೇ ವೇಳೆ ಹೊರಾಂಗಣದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕಿ ಡಾ. ಸಂಪದಾ ಭಟ್ ಹಾಗೂ ಚಲನ ಚಿತ್ರ ಗಾಯಕಿ ಸೀಮಾ ಮತ್ತು ರಾಯ್‌ಕರ್ ಅವರ ಭಜನಾ ‘ಜುಗಲ್‌ಬಂದಿ’ ನೆರೆದ ಭಕ್ತ ಸಮೂಹದ ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ದೇವಳದ ಆಡಳಿತ ಮೊಕ್ತೇಸರರು, ಮೊಕ್ತೇಸರರು, ಸೇವಾದಾರರು, ಗಣ್ಯರು, ಪಾಲ್ಗೊಂಡಿದ್ದರು. ದೇವರ ದರ್ಶನ ಬಳಿಕ ಪ್ರತಿಯೊಬ್ಬರಿಗೂ ಲಡ್ಡು ಪ್ರಸಾದ ವಿತರಿಸಲಾಯಿತು.ಮುಂಜಾನೆಯಿಂದ ಬೆಳಿಗ್ಗೆ 7 ಗಂಟೆಯವರೆಗೂ ವಿಶ್ವರೂಪ ದರ್ಶನ ವೀಕ್ಷಿಸಲು ಭಕ್ತರು ಸಾಲುಗಟ್ಟಿ ಬರುತ್ತಿದ್ದರು.