ಮಂಗಳೂರು,ನ.03 : ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಸಂಯುಕ್ತ ಅಶ್ರಯದಲ್ಲಿ ಸ್ವಾವಲಂಬಿ ಸಾವಯವ ತರಕಾರಿ ಸಂತೆ ಬಾನುವಾರ ಕದ್ರಿ ಕಂಬಳದಲ್ಲಿರುವ ಮಲ್ಲಿಕಾ ಬಡಾವಣೆಯಲ್ಲಿರುವ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ಕಸಾಪ ಜಿಲ್ಲಾಧ್ಯಕ್ಷ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ಮನೆ ‘ಮಂಜುಪ್ರಾಸಾದ’ ಇದರ ಅಂಗಣದಲ್ಲಿ ಜರಗಿತು.
ವೇ| ಮೂ| ಗಣಪತಿ ಆಚಾರ್ ಅವರು ಈ “ಸ್ವಾವಲಂಬಿ ಸಾವಯವ ತರಕಾರಿ ಸಂತೆ”ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.ಮಂಗಳೂರು ತಹಶಿಲ್ದಾರ್ ಮೋಹನ್ ರಾವ್, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪಕುಮಾರ ಕಲ್ಕೂರ ವಿಜಯಲಕ್ಷ್ಮೀ ಶೆಟ್ಟಿ, ಅಡೂರು ಕೃಷ್ಣ ರಾವ್, ರತ್ನಾಕರ್ ಹಾಗೂ ಸಾವಯವ ಕೃಷಿಕ ಗ್ರಾಹಕ ಬಳಗದ ಮತ್ತು ಪ್ರತಿಷ್ಠಾನದ ಇತರ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಡುಪಿ ಹಾಗೂ ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಿಂದ ನೂರಾರು ಕೃಷಿಕರು ಈ ಸ್ವಾವಲಂಬಿ ಸಾವಯವ ತರಕಾರಿ ಸಂತೆಯಲ್ಲಿ ಪಾಲ್ಗೊಂಡು ತಮ್ಮ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರು. ಹಳ್ಳಿ ತರಕಾರಿಗಳು, ಪಾರಂಪರಿಕವಾಗಿ ಸಿದ್ದಪಡಿಸಿದ ಪಾನೀಯಗಳು, ಉಪ್ಪಿನಕಾಯಿ, ವಿವಿಧ ಬಗೆಯ ಸಾಂಬಾರ್, ಚಟ್ನಿ, ಸಾರಿನ ಪುಡಿ, ರೊಟ್ಟಿ, ಸಿಹಿತಿಂಡಿಗಳು, ಕರಕುಶಲ ವಸ್ತುಗಳು, ಅಲಂಕಾರಿಕ ಗಿಡಗಳು, ಗೃಹಬಳಕೆಯ ನಿತ್ಯೋಪಯೋಗಿ ವಸ್ತುಗಳು, ಸಾವಯವ ತರಕಾರಿಗಳು, ಹಣ್ಣುಗಳು, ಸ್ವಾವಲಂಬಿಗಳು ತಯಾರಿಸಿದ ನೂರಾರು ವಸ್ತುಗಳು ಇಲ್ಲಿ ಗ್ರಾಹಕರ ಕೈ ಸೇರಿದವು.
ಈ ಸಂದಭದಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಎಸ್. ಪ್ರದೀಪ್ ಕುಮಾರ್ ಕಲ್ಕೂರ ಅವರು, ಸ್ವಾವಲಂಬಿಗಳಾಗಬೇಕು, ಸ್ವೋದ್ಯೋಗ ಮಾಡಬೇಕು ಎಂಬ ಹಂಬಲವುಳ್ಳ ಜನರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮತ್ತು ತಮ್ಮ ತಮ್ಮ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರ ಕೈಗೆ ಒದಗಿಸುವ ಸಲುವಾಗಿ ಕೃಷಿಕ ಗ್ರಾಹಕ ಬಳಗದ ಸಂಯುಕ್ತ ಅಶ್ರಯದಲ್ಲಿ ಜತೆಗೂಡಿ ಹಮ್ಮಿಕೊಂಡಿರುವ ಸ್ವಾವಲಂಬಿ ಸಾವಯವತರಕಾರಿ ಸಂತೆ ಇದು. ಈ ಸಂತೆಯಲ್ಲಿ ಯಾವೂದೇ ಬ್ರಾಂಡೇಡ್ ವಸ್ತುಗಳಿಗೆ ಅವಕಾಶವಿಲ್ಲ. ಈ ರೀತಿ ಮನೆಯಂಗಳದಲ್ಲಿ ಸ್ವಾವಲಂಬಿಗಳನ್ನು ಪ್ರೋತ್ಸಾಹಿಸುವುದು ಇದು ದೇಶದಲ್ಲಿ ಪ್ರಥಮ ಎಂದರು.