ಮಂಗಳೂರು ನ, 3: ಬಡವರ ಉನ್ನತಿಗಾಗಿ ಸರಕಾರಗಳು ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಂತಹಂತವಾಗಿ ಜಾರಿಗೆ ತರುತ್ತಿದ್ದು,ಇವುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಜವಾಬ್ದಾರಿ ಗ್ರಾಮ ಪಂಚಾಯತ್‌ಗಳ ಮೇಲಿದೆ ಎಂದು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ತಿಳಿಸಿದ್ದಾರೆ.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕಾರ್ಮಿಕ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಮಳವೂರು ಗ್ರಾಮ ಪಂಚಾಯತ್‌ನಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆ ಉದ್ಘಾಟಿಸಿ ಮಾತನಾಡಿದರು. ಸ್ವಾಸ್ಥ್ಯ ಭಿಮಾ ಯೋಜನೆಯು ಒಂದು ಉತ್ತಮ ಯೋಜನೆಯಾಗಿದೆ. ಸಂಘಟಿತ ಕಾರ್ಮಿಕರಿಗೆ ಹಲವಾರು ಸೌಲಭ್ಯಗಳಿವೆ. ಆದರೆ ಅಸಂಘಟಿತ ಕಾರ್ಮಿಕರನ್ನು ಸರಕಾರಿ ಸೌಲಭ್ಯದ ವ್ಯಾಪ್ತಿಗೆ ತರುವುದು ಅಗತ್ಯವಾಗಿದೆ.ಸ್ವಾಸ್ಥ್ಯ ಭಿಮಾ ಯೋಜನೆಯು ಅಸಂಘಟಿತ ಕಾರ್ಮಿಕರಿಗೆ ಆರೋಗ್ಯ ಸೌಭಾಗ್ಯ ನೀಡಲಿದೆ ಎಂದು ಸಚಿವರು ಹೇಳಿದರು.
ಈ ಯೋಜನೆಯಡಿ ದಕ್ಷಿಣಕನ್ನಡ ಜಿಲ್ಲೆಯ 23 ಆಸ್ಪತ್ರೆಗಳು ಒಳಗೊಂಡಿವೆ. ಮತ್ತು 1516 ವಿವಿಧ ರೋಗಗಳು ಇದರಡಿ ಬರುತ್ತವೆ. ಕಳೆದ ಸಾಲಿನಲ್ಲಿ ಸ್ವಾಸ್ಥ್ಯ ಭಿಮಾ ಯೋಜನೆಯಡಿ 1.40 ಕೋಟಿ ರೂ.ವೆಚ್ಚ ಮಾಡಲಾಗಿದೆ. ಆಸ್ಪತ್ರೆಗೆ ದಾಖಲಾಗಿ ಗುಣಮುಖರಾದ ನಂತರ 5 ದಿವಸದ ವರೆಗೂ ಔಷಧಿ ವೆಚ್ಚ ನೀಡಲಾಗುತ್ತದೆ ಎಂದು ರಮಾನಾಥ ರೈ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಯುವಜನ ಸೇವಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ ಬಡವರಿಗೆ ಉತ್ತಮ ದರ್ಜೆಯ ಚಿಕಿತ್ಸೆ ಹಿಂದೆ ಕೈಗೆಟುಕದಂತ್ತಿತ್ತು. ಚಿನ್ನಭರಣಗಳನ್ನು ಅಡವು ಇಡುವ ಪರಿಸ್ಥಿತಿ ಇತ್ತು. ಆದರೆ ಈಗ ಸ್ವಾಸ್ಥ್ಯ ಭಿಮಾ ಯೋಜನೆಯಿಂದ ಬಡವರಿಗೆ ಉತ್ತಮ ಚಿಕಿತ್ಸೆ ದೊರಕಲಿದೆ. ಮುಖ್ಯವಾಗಿ ಬೀಡಿ ಮತ್ತು ಕೃಷಿ ಕಾರ್ಮಿಕರಿಗೆ ಇದರ ಹೆಚ್ಚಿನ ಪ್ರಯೋಜನ ದೊರಕಬೇಕು ಎಂದು ಸಚಿವರು ಹೇಳಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಕುಮಾರ್,ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನೋದಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಉಪ ಕಾರ್ಮಿಕ ಆಯುಕ್ತ ಡಾ.ಬಾಲಕೃಷ್ಣ ಸ್ವಾಗತಿಸಿದರು. ಸಹಾಯಕ ಕಾರ್ಮಿಕ ಅಯುಕ್ತ ಡಿ.ಜಿ.ನಾಗೇಶ್ ವಂದಿಸಿದರು.