ಕರಾವಳಿ

ಶಿರ್ವದಲ್ಲಿ ನಾಪತ್ತೆಯಾಗಿದ್ದ ಯುವತಿ ಎರಡು ಮದುವೆಯಾಗಿದ್ದ ಭೂಪನೊಂದಿಗೆ ಪತ್ತೆ

Pinterest LinkedIn Tumblr

ಉಡುಪಿ:  ಶಿರ್ವದಿಂದ ಕಾಣೆಯಾಗಿದ್ದ ಶಿರ್ವ ಪದವು ಬಬ್ಬುಸ್ವಾಮಿ ದೇವಸ್ಥಾನದ ಸಮೀಪದ ನಿವಾಸಿ ಯುವತಿ ಶಶಿಕಲಾ (30) ತನ್ನ ವಿವಾಹಿತ ಪ್ರಿಯಕರನ ಜೊತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ಪತ್ತೆಯಾಗಿದ್ದಾಳೆ. ಈಕೆಯನ್ನು ಮೂರನೇ ಮದುವೆಯಾಗುವುದರಲ್ಲಿದ್ದ ರವಿಶಂಕರ ನಾಯ್ಕ ಸದ್ಯ ಪೊಲಿಸರ ಅತಿಥಿಯಾಗಿದ್ದಾನೆ.

fraud

ಘಟನೆ ಹಿನ್ನೆಲೆ: ಶಿರ್ವದ ಶಿಕ್ಷಣ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿಕಲಾ ಕಳೆದ ಅ. 31ರಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ತಾಯಿ ಗುಲಾಬಿ ಶಿರ್ವ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಯುವತಿಯ ಪತ್ತೆಗಾಗಿ ಹಲವು ಅಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು ಈ ವೇಳೆ ಪ್ರಕರಣಕ್ಕೊಂದು ಟ್ವಿಸ್ಟ್ ಸಿಕ್ಕಿದೆ. ಕಾಣೆಯಾದ ಯುವತಿ ಮನೆಯವರು ನೀಡಿದ ಮಾಹಿತಿಯಂತೆ ಮುಂಡಗೋಡುವಿನಲ್ಲಿ ರವಿ ಶಂಕರ್‌ ನಾಯ್ಕ ಎಂಬಾತನೊಂದಿಗೆ ಆಕೆಯ ಇರುವ ಬಗ್ಗೆ ಪಡೆದು ಅಲ್ಲಿಗೆ ತೆರಳಿ ಜೋಡಿಯನ್ನು ಪತ್ತೆ ಹಚ್ಚಿದ್ದಾರೆ.

ಎರಡು ಮದುವೆಯಾಗಿದ್ದ:  ಶಿರ್ವ ಪರಿಸರದಲ್ಲಿ ಗಾರೆ ಕೆಲಸ ಮಾಡುತ್ತಿರುವ ಉತ್ತರ ಕನ್ನಡ ಮೂಲದ ರವಿ ಶಂಕರ್‌ ನಾಯ್ಕ ಈಗಾಗಲೇ ಎರಡು ಮದುವೆಯಾಗಿದ್ದು, ಮೊದಲ ಪತ್ನಿಗೆ ಮೂವರು ಮಕ್ಕಳನ್ನು ಮತ್ತು ಎರಡನೇ ಪತ್ನಿಗೆ ಇಬ್ಬರು ಮಕ್ಕಳಿದ್ದಾರೆ. ಪ್ರಸ್ತುತ ಮೊದಲ ಪತ್ನಿಯನ್ನು ತೊರೆದು ಎರಡನೇ ಪತ್ನಿಯೊಂದಿಗೆ ಸಂಸಾರ ನಡೆಸುತ್ತಿದ್ದನು ಎಂದು ತಿಳಿದು ಬಂದಿದೆ.

ಈ ನಡುವೆ ಕಳೆದ ಮೂರು ತಿಂಗಳುಗಳಿಂದ ಶಿರ್ವದ ಶಶಿಕಲಾ ಅವರನ್ನು ಪ್ರೀತಿಸುವ ನೆಪವೊಡ್ಡಿದ್ದ ಈತ ಪುಸಲಾಯಿಸಿ ಕರೆದುಕೊಂಡು ಹೋಗಿದ್ದನು. ಅ. 31ರಂದು ಮರುಡೇಶ್ವರಕ್ಕೆ ಕರೆದೊಯ್ದು ಅಲ್ಲಿಂದ ಮುಂಡಗೋಡಿನ ತನ್ನ ಮನೆಗೆ ಕರೆದೊಯ್ದಿದ್ದನು.

ಅಲ್ಲಿ ತನ್ನ ಪತಿಯೊಂದಿಗೆ ಯುವತಿಯೋರ್ವಳು ಇರುವುದನ್ನು ಕಂಡ ರವಿ ನಾಯ್ಕನ ಎರಡನೇ ಪತ್ನಿ ಹಾಗೂ ಯುವತಿಗೆ ಕಲಹವಾಗಿದೆ.ಇಲ್ಲೇನೋ ನಡೆಯುತ್ತಿದೆ ಎಂದು ತಿಳಿದ  ಶಶಿಕಲಾ ತನ್ನ ಹೆತ್ತವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಳು. ಶಶಿಕಲಾರ ಹೆತ್ತವರು ನೀಡಿದ ಮಾಹಿತಿಯಂತೆ ಮಂಡಗೋಡಿಗೆ ತೆರಳಿದ ಪೊಲೀಸರು ಯುವತಿಯನ್ನು ರಕ್ಷಿಸಿದ್ದಾರೆ. ಮೂಲವೊಂದರ ಪ್ರಕಾರ ಆರೋಪಿಯನ್ನು ಬಂಧಿಸಲಾಗಿದೀನ್ನಲಾಗಿದೆ.

ಪ್ರೀತಿ ನಾಟಕವಾಡಿ ಯುವತಿಗೆ ವಂಚಿಸಿರುವ ರವಿ ಶಂಕರ್‌ ನಾಯ್ಕನ ವಿರುದ್ದ ನೊಂದ ಯುವತಿ ದೂರು ನೀಡಿದ್ದು, ಶಿರ್ವ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Write A Comment