ಕರಾವಳಿ

ಅಕ್ರಮ ಗೋಸಾಗಾಟ, ಗೋಹತ್ಯೆ ಮಾಡುತ್ತಿರುವವರನ್ನು ಗಡೀಪಾರು ಮಾಡಿ : ಹಿಂಜಾವೇ ಆಗ್ರಹ

Pinterest LinkedIn Tumblr

Gangolli-Hinjave_Protest (1)

ಕುಂದಾಪುರ : ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಕ್ರಮವಾಗಿ, ಕಾನೂನುಬಾಹಿರವಾಗಿ ಕಸಾಯಿಖಾನೆಗಳು, ಅಕ್ರಮ ಗೋಸಾಗಾಟ, ಗೋಮಾಂಸ ದಾಸ್ತಾನು ಮಾಡಿ ಬಹುಸಂಖ್ಯಾತ ಹಿಂದುಗಳ ಭಾವನೆಗಳನ್ನು ಕೆರಳಿಸುವ ಪ್ರಯತ್ನ ನಡೆಸುತ್ತಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಗಡೀಪಾರು ಮಾಡಬೇಕೆಂದು ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಮುಖಂಡ ರವೀಂದ್ರ ಪಟೇಲ್ ಆಗ್ರಹಿಸಿದರು.

ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅವಿರತವಾಗಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಮಾಂಸ ದಾಸ್ತಾನು ಹಾಗೂ ಗೋಕಳ್ಳರ ವಿರುದ್ಧ ಸಂಬಂಧಪಟ್ಟ ಇಲಾಖಾಧಿಕಾರಿಗಳ ಮೃದುಧೋರಣೆ ಖಂಡಿಸಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಪಂ. ಪಂಚಾಯತ್ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು.

Gangolli-Hinjave_Protest Gangolli-Hinjave_Protest (3) Gangolli-Hinjave_Protest (2)

ಗಂಗೊಳ್ಳಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಇಂತಹ ಕೃತ್ಯಗಳನ್ನು ವಿರೋಧಿಸಿ ಅನೇಕ ಪ್ರತಿಭಟನೆಗಳನ್ನು ನಡೆಸಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕಠಿಣ ಕ್ರಮ ಜರುಗಿಸಿಲ್ಲ. ಈ ಕೃತ್ಯಗಳಲ್ಲಿ ತೊಡಗಿಕೊಂಡಿರುವವರು ನೆಪಕ್ಕೆ ಮಾತ್ರ ದನಗಳನ್ನು ಸಾಕುವ ಸೋಗಿನಲ್ಲಿ ಮತ್ತು ಕೃಷಿ ಭೂಮಿಗಾಗಿ ಜಾನುವಾರುಗಳನ್ನು ಸಾಕುತ್ತಿರುವ ಬಗ್ಗೆ ಸುಳ್ಳು ಮುಚ್ಚಳಿಕೆ ಬರೆದುಕೊಟ್ಟು ಸಮಾಜ ಹಾಗೂ ಕಾನೂನಿನ ಕಣ್ಣಿಗೆ ಮೋಸ ಮಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ತಿಳಿದಿದ್ದರೂ ಮೌನವಹಿಸಿರುವುದು ಕಾನೂನಿ ದೌರ್ಬಲ್ಯವನ್ನು ಎತ್ತಿ ಹಿಡಿದಂತಾಗಿದೆ. ಇದೇ ವಿಚಾರವಾಗಿ ಇತ್ತೀಚಿಗೆ ಗಂಗೊಳ್ಳಿ ಹಿಂಜಾವೇ ಸಂಚಾಲಕರ ಮೇಲೆ ಹಲ್ಲೆಗೆ ಪ್ರಯತ್ನ ನಡೆಸಲಾಗಿದೆ ಎಂದು ಅವರು ಆರೋಪಿಸಿದರು.

ಗಂಗೊಳ್ಳಿಯಲ್ಲಿ ಅಕ್ರಮ ಗೋಸಾಗಾಟ, ಅಕ್ರಮ ಕಸಾಯಿಖಾನೆ, ಗೋಮಾಂಸ ದಾಸ್ತಾನು ವಿಚಾರದಲ್ಲಿ ಪದೇ ಪದೇ ಕೋಮುಭಾವನೆಗಳಿಗೆ ಮತ್ತು ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿದ್ದು, ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮ ಜರುಗಿಸಿ ಹಿಂದುಗಳ ಭಾವನೆಯನ್ನು ಗೌರವಿಸಬೇಕು. ಅಕ್ರಮ ಕಸಾಯಿಖಾನೆ ನಡೆಯುತ್ತಿರುವ ಸ್ಥಳವನ್ನು ಪರಿಶೀಲಿಸಬೇಕು. ಅಕ್ರಮ ಗೋಸಾಗಾಟ, ಅಕ್ರಮ ಗೋಮಾಂಸ ದಾಸ್ತಾನುವನ್ನು ತಡೆಯಬೇಕು. ಈ ವಿಚಾರದಲ್ಲಿ ಮತ್ತೊಮ್ಮೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಲ್ಲಿ ಸಂಘಟನೆಯೇ ಈ ಕಾರ್ಯಕ್ಕೆ ಇಳಿಯಲಿದೆ ಅಲ್ಲದೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಬಳಿಕ ಮನವಿಯನ್ನು ಗಂಗೊಳ್ಳಿ ಗ್ರಾಪಂ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆಗೆ ಸಲ್ಲಿಸಲಾಯಿತು. ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಉಪಾಧ್ಯಕ್ಷ ಮಹೇಶ್‌ರಾಜ್ ಪೂಜಾರಿ, ಪಿಡಿ‌ಒ ಪ್ರವೀಣ್ ಡಿಸೋಜ ಹಾಗೂ ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಮಧುಸೂಧನ್ ಮನವಿ ಸ್ವೀಕರಿಸಿದರು. ಗ್ರಾಪಂ ಸದಸ್ಯರಾದ ರಾಜ ಖಾರ್ವಿ, ಶ್ರೀನಿವಾಸ ಖಾರ್ವಿ, ಲಕ್ಷ್ಮೀ ಗಾಣಿಗ, ಶಾರದಾ ಶೇರುಗಾರ್, ಪದ್ಮಾ, ಗೋಪಾಲ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

ಗಂಗೊಳ್ಳಿ ಹಿಂಜಾವೇ ಸಂಚಾಲಕ ರತ್ನಾಕರ ಗಾಣಿಗ, ಮೋಹನ ಖಾರ್ವಿ, ಶ್ರೀಧರ ನಾಯ್ಕ್, ರಘುನಾಥ ಖಾರ್ವಿ, ಉಮಾನಾಥ ದೇವಾಡಿಗ, ವಿಶ್ವನಾಥ, ನವೀನ ದೊಡ್ಡಹಿತ್ಲು, ಮಣಿಕಂಠ ಖಾರ್ವಿ, ಜಯರಾಜ ದೇವಾಡಿಗ, ಮನೋಜ, ನಿತ್ಯಾನಂದ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.

Write A Comment