ಮಂಗಳೂರು, ನ.5: ಮೊಗವೀರ ಸಮುದಾಯದ ನಾಯಕ ಗಂಗಾಧರ ಪಾಂಗಳರ ಹತ್ಯಾ ಪ್ರಕರಣದ ಆರೋಪಿ ಸತೀಶ್ ಬೈಕಂಪಾಡಿಯನ್ನು ತಮ್ಮ ವಶಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿ ಮೊಗವೀರರು ಪಣಂಬೂರು ಠಾಣೆಗೆ ಮುತ್ತಿಗೆ ಹಾಕಿದ ಘಟನೆ ಮಂಗಳವಾರ ನಡೆಯಿತು.
ಮೊಗವೀರ ಸಮಾಜದ ಮುಖಂಡ ಹಾಗೂ ಕಾಂಗ್ರೆಸ್ ನಾಯಕ ಗಂಗಾಧರ್ ಪಾಂಗಳರನ್ನು ಮೇ 14ರ ರಾತ್ರಿ ಬೈಕಂಪಾಡಿ ಸಮೀಪದ ಮೀನಕಳಿಯ ಎಂಬಲ್ಲಿ ಅಪಘಾತ ನಡೆಸಿ ಕೊಲೆ ಮಾಡಲಾಗಿತ್ತು. ಪ್ರಕರಣದ ವಿಚಾರಣೆ ಕೈ ಗೆತ್ತಿಕೊಂಡಿದ್ದ ಪೊಲೀಸರಿಗೆ ಬೈಕಂಪಾಡಿ ಸಹೋದರರು ಈ ಪ್ರಕರಣದಲ್ಲಿರುವುದು ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಭಾಸ್ಕರ್ ಬೈಕಂಪಾಡಿ, ಹರೀಶ್ ಬೈಕಂಪಾಡಿ ಮತ್ತು ಬೊಲೆರೊ ಚಾಲಕ ಪುಷ್ಪರಾಜ್‌ರನ್ನು ಬಂಧಿಸಲಾಗಿತ್ತು. ಪ್ರಮುಖ ಸೂತ್ರಧಾರಿ ಎನ್ನಲಾದ ಸತೀಶ್ ಬೈಕಂಪಾಡಿ ತಲೆಮರೆಸಿಕೊಂಡಿದ್ದು, ಕಳೆದ ವಾರ ಸತೀಶ್ ಬೈಕಂಪಾಡಿ ನಿರೀಕ್ಷಣಾ ಜಾಮೀನು ಸಿಕ್ಕಿತ್ತು. ಹಾಗೇ ಮನೆಗೆ ಮರಳಿ ಬಂದಿದ್ದರು.
ವಿಷಯ ತಿಳಿದ ಪೊಲೀಸರು ವಿಚಾರಣೆಗಾಗಿ ಮಂಗಳವಾರ ಆರೋಪಿ ಸತೀಶ್ ಬೈಕಂಪಾಡಿಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಮೊಗವೀರ ಸಂಘಟನೆಗಳ ನಾಯಕರು, ಕಾರ್ಯಕರ್ತರು ಪಣಂಬೂರು ಠಾಣೆಗೆ ಮುತ್ತಿಗೆ ಹಾಕಿದ್ದರು. ಇದರಿಂದ ಕೆಲ ಕಾಲ ಠಾಣಾ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಪಣಂಬೂರು ಠಾಣೆಗೆ ಕಮಿಷನರ್ ಹಿತೇಂದ್ರ ಆಗಮಿಸಿ ಪೊಲೀಸ್ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ಬಳಿಕ ಆರೋಪಿ ಸತೀಶ್ ಬೈಕಂಪಾಡಿಯ ವಿಚಾರಣೆ ನಡೆಸಿದರು. ಅಲ್ಲದೆ ಮೀನುಗಾರ ಮುಖಂಡರನ್ನು ಕರೆಸಿ ಆರೋಪಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.
ಪಾಂಗಳ ಹತ್ಯೆಯ ಬಳಿಕ ಸತೀಶ್ ಬೈಕಂಪಾಡಿ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಗೆ ಆಗ್ರಹಿಸಿ ಮೊಗವೀರ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಪತ್ತೆಗೆ ಬಲೆ ಬೀಸಿದ್ದರು.
ಎಸೈ ಭಾರತಿ ಮಾತಿಗೆ ಮಣಿದು ಪ್ರತಿಭಟನೆ ವಾಪಸು :
ಪಣಂಬೂರು ಠಾಣೆ ಮುಂದೆ ಸೇರಿದ್ದ ಜನರಿಂದ ಪಣಂಬೂರು ಪೊಲೀಸರಿಗೆ ಧಿಕ್ಕಾರ ಕೇಳಿಬರುತ್ತಿತ್ತು. ಆದರೆ ಹಿಂದೆ ಇಲ್ಲಿದ್ದು, ಸದ್ಯ ಉಳ್ಳಾಲ ಠಾಣೆಗೆ ನಿಯೋಜನೆಗೊಂಡಿರುವ ಎಸೈ ಭಾರತಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತು ಕೇಳಿಬಂತು. ಎಸೈಯನ್ನು ವರ್ಗಾವಣೆ ಮಾಡಿದ್ದು ಯಾಕೆ? ಅವರು ಇಲ್ಲಿಗೆ ಬೇಕು, ಅವರನ್ನು ಮತ್ತೆ ಇದೇ ಠಾಣೆಗೆ ಕರೆಸಿಕೊಳ್ಳಿ ಎಂದು ಆಗ್ರಹಿಸಿದರು.
ಈ ವೇಳೆ ಆಗಮಿಸಿದ ಭಾರತಿ ನೆರೆದಿದ್ದ ಜನರನ್ನು ಸಮಾಧಾನಪಡಿಸಿ ಆರೋಪಿಯ ರಕ್ಷಣೆಗೆ ಪೊಲೀಸ್ ಇಲಾಖೆ ನಿಲ್ಲುವುದಿಲ್ಲ. ಖಂಡಿತ ಆರೋಪಿಗೆ ಶಿಕ್ಷೆಯಾಗುವಂತೆ ಇಲಾಖೆ ನೋಡಿಕೊಳ್ಳುತ್ತದೆ. ಈ ಬಗ್ಗೆ ಭಯ ಬೇಡ ಎಂದರು. ಎಸ್ಸೈ ಮಾತಿಗೆ ಮಣಿದು ಪ್ರತಿಭಟನೆ ಹಿಂಪಡೆಯಲಾಯಿತು.