ಮಂಗಳೂರು,ನ.4: ಮುಖ್ಯಮಂತ್ರಿಯ 100 ಕೋಟಿ ರೂ. ಅನುದಾನದಡಿ ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಜ್ಯೋತಿ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ವೃತ್ತದವರೆಗಿನ ರಸ್ತೆಯನ್ನು 1.97 ಕೋಟಿ ರೂ. ವೆಚ್ಚದಲ್ಲಿ ಚತುಷ್ಪಥ ರಸ್ತೆಯನ್ನಾಗಿ ಕಾಂಕ್ರಿಟ್ ಕಾಮಗಾರಿಗೆ ಶಾಸಕ ಜೆ.ಆರ್.ಲೋಬೊ ಮಂಗಳವಾರ ಶಿಲಾನ್ಯಾಸ ಮಾಡಿದರು.
ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, ಈ ರಸ್ತೆ ಕಾಂಕ್ರಿಟ್ ಹಾಕಲ್ಪಟ್ಟರೆ ನಗರದ ಎಲ್ಲಾ ಪ್ರಮುಖ ರಸ್ತೆಗಳು ಕಾಂಕ್ರಿಟ್ ರಸ್ತೆಯಾದಂತಾಗುತ್ತದೆ. ಮುಂದಿನ ನಾಲ್ಕು ತಿಂಗಳೊಳಗೆ ಕಾಮಗಾರಿ ಪೂರ್ತಿಗೊಳ್ಳುವ ವಿಶ್ವಾಸವಿದೆ ಎಂದರು.
ಕಾಮಗಾರಿಯ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ತಡೆಯುವ ಸಲುವಾಗಿ ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರಕ್ಕೆ ಮತ್ತು ಇನ್ನೊಂದು ಭಾಗದಲ್ಲಿ ಕಾಮಗಾರಿ ನಿರ್ವಹಣೆಗೆ ಕ್ರಮ ಜರಗಿಸಲಾಗುವುದು ಎಂದು ಜೆ.ಆರ್.ಲೋಬೋ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮೇಯರ್ ಮಹಾಬಲ ಮಾರ್ಲ, ಉಪ ಮೇಯರ್ ಕವಿತಾ ವಾಸು, ಮನಪಾ ಆಯುಕ್ತ ಗೋಕುಲ್‌ದಾಸ್ ನಾಯಕ್, ಪ್ರತಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ಎ.ಸಿ.ವಿನಯರಾಜ್, ಅಪ್ಪಿ ಉಪಸ್ಥಿತರಿದ್ದರು.
ಅಸಮಾಧನ ಹೊಗೆ:
ರಸ್ತೆ ಕಾಮಗಾರಿ ಶಿಲಾನ್ಯಾಸ ಸಮಾರಂಭದ ವೇಳೆ ಹಾಕಲಾದ ಬ್ಯಾನರ್ ಮತ್ತು ಬಿಜೆಪಿ ನಾಯಕರನ್ನು ಕಾರ್ಯಕ್ರಮಕ್ಕೆ ಕರೆಯದಿರುವುದರ ವಿರುದ್ಧ ಬಿಜೆಪಿಗರು ಅಸಮಾಧಾನದ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ಅಲ್ಲದೆ ಬ್ಯಾನರ್‌ನಲ್ಲಿ ತನ್ನ ಫೋಟೋ ಲಗತ್ತಿಸಿಲ್ಲ ಎಂದು ಆಪಾದಿಸಿ ಕಾಂಗ್ರೆಸ್‌ನವರೇ ಆದ ಸ್ಥಾಯಿ ಸಮಿತಿಯ ಅಧ್ಯಕ್ಷ ಅಶೋಕ್ ಡಿ.ಕೆ. ಕೂಡ ಕಾರ್ಯ ಕ್ರಮದಿಂದ ಹೊರನಡೆದ ಪ್ರಸಂಗವೂ ನಡೆಯಿತು.