ಕರಾವಳಿ

ಬಂಟ್ವಾಳ ಪುರಸಭಾ ಸಾಮಾನ್ಯ ಸಭೆ.

Pinterest LinkedIn Tumblr

bantwal-meet-1

ಬಂಟ್ವಾಳ : ಪುರಸಭಾ ವ್ಯಾಪ್ತಿಯ ವಿವಿಧ ವಿಚಾರಗಳ ಕುರಿತಾಗಿ ಅಧ್ಯಕ್ಷರ ವಿರುದ್ದವೇ ಆಡಳಿತಪಕ್ಷದ ಮಹಿಳಾ ಸದಸ್ಯರೇ ಗರಂ ಆಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಬುಧವಾರ ನಡೆದ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ನಡೆದಿದೆ.

ಅಧ್ಯಕ್ಷೆ ವಸಂತಿಚಂದಪ್ಪ ಅಧ್ಯಕ್ಷತೆ ವಹಿಸಿದ್ದು, ಸದಸ್ಯೆ ಚಂಚಲಾಕ್ಷಿಯವರು ವಿಷಯ ಪ್ರಸ್ತಾಪಿಸಿ ಮಹಿಳಾ ಸದಸ್ಯರು ಯಾವುದೇ ಸಮಸ್ಯೆಗಳನ್ನು ಹೇಳಿದರೆ ಅದನ್ನು ಅಧಿಕಾರಿಗಳು ಗಣನೆಗೆ ತೆಗೆದುಕೊಳ್ಳುವುದಿಲ್ಲ, ಪಾಣಮಂಗಳೂರಿನ ವಿದ್ಯಾರ್ಥಿನಿಲಯದ ಮುಂಭಾಗದ ಚರಂಡಿ ಬ್ಲಾಕ್ ಆಗಿ ನೀರು ಹರಿಯುತ್ತಿಲ್ಲ, ಇಲ್ಲಿನ ಕೊಳಚೆಯಿಂದಾಗಿ ಹಾಸ್ಟೇಲ್ ನಲ್ಲಿ ತಂಗಿರುವ ಮಕ್ಕಳು ತೊಂದರೆ ಅನುಭವಿಸುವಂತಾಗಿದೆ, ಈ ಬಗ್ಗೆ ಆರೋಗ್ಯಾಧಿಕಾರಿಯವರ ಗಮನಕ್ಕೆ ತಂದಿದ್ದಲ್ಲದೆ ಅವರು ಪರಿಶೀಲನೆ ನಡೆಸಿದ್ದರೂ, ಅವರು ಅದರ ಬಗ್ಗೆ ಈ ತನಕವೂ ಪರಿಹಾರ ಒದಗಿಸಿಲ್ಲ ಎಂದು ಹರಿಹಾಯ್ದು, ನಮ್ಮ ಆಡಳಿತದಲ್ಲೇ ನಮ್ಮ ಬೇಡಿಕೆಗಳಿಗೆ ಸ್ಪಂದನೆ ಸಿಗುತ್ತಿಲ್ಲ ಎಂದು ಆರೋಪಿಸಿದರು. ವಾರ್ಡ್ ಸದಸ್ಯರ ಗಮನಕ್ಕೆ ಯಾವುದೇ ವಿಚಾರಗಳನ್ನು ತಾರದೆ ನೇರವಾಗಿ ಕಛೇರಿಗೆ ಕೊಟ್ಟ ಅರ್ಜಿಯನ್ನು ಅಧಿಕಾರಿಗಳು ಮತ್ತು ಆಡಳಿತ ಪರಿಗಣಿಸುವುದಾದರೆ, ನಾವು ಜನಪ್ರತಿನಿಧಿಗಳಾದರೂ ಯಾಕೆ ಎಂದು ಖಾರವಾಗಿಯೇ ಚಂಚಲಾಕ್ಷಿ ಪ್ರಶ್ನಿಸಿದರು.

ಪಾಣೆಮಂಗಳೂರಿನಲ್ಲಿ ವ್ಯಾಪಕವಾಗಿ ಹುಲ್ಲು ಬೆಳೆದಿದ್ದು, ಇದರ ಸ್ವಚ್ಛತೆಗೆ ಕಟ್ಟಿಂಗ್ ಮಿಷಿನ್ ಕಳುಹಿಸುವಂತೆ ಮನವಿ ಮಾಡಿದ್ದರೂ ಇದಕ್ಕೂ ಯಾವುದೇ ಸ್ಪಂದನ ಸಿಕ್ಕಿಲ್ಲ, ಕೇವಲ ಬಂಟ್ವಾಳದಲ್ಲಿ ಮಾತ್ರ ಹುಲ್ಲು ಬೆಳೆಯುವುದೇ, ಅಲ್ಲಿ ಮಾತ್ರ ಶುಚಿಮಾಡಿದರೇ ಸಾಕೇ..?, ಇಲ್ಲಿ ನಮ್ಮನ್ನಾರಿಸಿದ ಜನರಿಗೆ ನಾವೇನು ಉತ್ತರ ಕೊಡುವುದು ಎಂದು ಅಧ್ಯಕ್ಷರ ಗಮನಸೆಳೆದಾಗ ಉಪಾಧ್ಯಕ್ಷೆ ಯಾಸ್ಮೀನ್, ಸದಸ್ಯರಾದ ಜೆಸಿಂತಾ ಡಿ’ಸೋಜಾ. ಸಂಜೀವಿನಿಯವರು ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಸದಸ್ಯೆಯರ ಸಮಸ್ಯೆಗಳಿಗೆ ತುರ್ತುಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

bantwal-meet-2

ಉದ್ಯಾನವನಕ್ಕೆ ಹಣಮೀಸಲು;

ಪುರಸಭಾ ವ್ಯಾಪ್ತಿಯಲ್ಲಿ ಉದ್ಯಾನವನ ನಿರ್ಮಾಣಕ್ಕೆ ನಿರಂತರವಾಗಿ ಅನುದಾನ ಮೀಸಲಿಟ್ಟರೂ, ಇದುವರೆಗೂ ಎಲ್ಲಿಯೂ ಉದ್ಯಾನವನ ನಿರ್ಮಾಣವಾಗದ ಬಗ್ಗೆ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಸುದೀರ್ಘ ಚರ್ಚೆ ನಡೆಯಿತು. ಈ ಹಿಂದೆ ಪೆಲತ್ತಿಮಾರ್ ಎಂಬಲ್ಲಿ ಉದ್ಯಾನವನಕ್ಕೆ ಜಾಗಗುರುತಿಸಿ ಅಲ್ಲಿ ಮಣ್ಣುಹಾಕಿ ಸಮತಟ್ಟುಗೊಳಿಸಲಾಗಿದೆ ಆದರೆ ಇದುವರೆಗೂ ಉದ್ಯಾನವನ ಮಾತ್ರ ಕಾಣಿಸುತ್ತಿಲ್ಲ ಎಂದು ಸದಸ್ಯ ಸದಾಶಿವ ಬಂಗೇರ ಸಭೆಯ ಗಮನ ಸೆಳೆದರು. ಕಳೆದ ಮೂರುವರ್ಷದಿಂದ ಉದ್ಯಾನವನಕ್ಕೆ ಅನುದಾನ ಕಾದಿರಿಸಲಾಗುತ್ತಿದೆ ಅದರೆ ಉದ್ಯಾನವನ ನಿರ್ಮಿಸಲು ನಮಗಿನ್ನೂ ಸಾಧ್ಯವಾಗಿಲ್ಲ, ಈ ಅನುದಾನ ಏನಾಗಿದೆ ಇದರ ವಿವರ ನೀಡುವಂತೆ ಅವರು ಇಂಜಿನಿಯರ್ ಅನ್ನು ತರಾಟೆಗೆ ತೆಗೆದುಕೊಂಡರು.ಸದಸ್ಯ ರಾಮಕೃಷ್ಣ ಆಳ್ವ ಹಾಗೂ ಇಕ್ಬಾಲ್ ಗೂಡಿನಬಳಿ ಇದಕ್ಕೆ ದ್ವನಿಗೂಡಿಸಿದರು. ಕೊನೆಗೆ ಉದ್ಯಾನವನಕ್ಕೆ ಸೂಕ್ತ ಜಮೀನು ಗುರುತಿಸಿ, ಇರುವ ಅನುದಾನ ಬಳಸಿ ಕಾರ್ಯರೂಪಕ್ಕೆ ತರಲು ನಿರ್ಧರಿಸಲಾಯಿತು.

13ನೇ ಹಣಕಾಸು ಆಯೋಗದ 2014-14 ನೇ ಸಾಲಿಗೆ ಮಂಜೂರಾದ 48.14 ಲಕ್ಷ ರೂ ನ ಪೈಕಿ 31.43 ಲಕ್ಷ ರೂ ಗೆ ಕ್ರಿಯಯೋಜನೆ ತಯಾರಿಸಲು ಸಭೆ ನಿರ್ಧರಿಸಿದ್ದು, ಈ ಅನುದಾನದಲ್ಲಿ ನೀರು, ಒಳಚರಂಡಿ, ವಿದ್ಯುದ್ದೀಪ, ಕಟ್ಟಡ ದುರಸ್ತಿ, ಘನತ್ಯಾಜ್ಯ ವಿಲೇವಾರಿ, ಉದ್ಯಾನವನ, ಮಳೆನೀರು ಹರಿಯುವ ಚರಂಡಿ ರಚನೆಗೆ ಅದಾನ ಮೀಸಲಿಟ್ಟು ಉಳಿಕೆ ಅನುದಾನವನ್ನು ವಿಪಕ್ಷ ಬಿಜೆಪಿ ಸದಸ್ಯರನ್ನು ಹೊರತುಪಡಿಸಿ ಉಳಿತ 18 ಮಂದಿ ಸದಸ್ಯರ ವಾರ್ಡ್‌ನ ಅಭಿದ್ದಿ ಕಾರ್ಯಗಳಿಗೆ ತಲಾ 1.70ಲಕ್ಷ ರೂ ನಂತೆ ಬಳಸಲು ಹಂಚಿಕೆ ಮಾಡಲಾಯಿತು.

ಪುರಸಭಾ ಕಛೇರಿಯೊಳಗೆ ಸಿಸಿ ಕ್ಯಾಮೆರಾ ಅಳವಡಿಸುವುದು, ಅಕ್ರಮ ನಳ್ಳಿ ಸಂಪರ್ಕವನ್ನು ಕಡಿತಗೊಳಿಸುವುದು ಹಾಗೂ ಅನಧಿಕೃತ ಬ್ಯಾನರ್ ಗಳ ತೆರವಿನ ಬಗ್ಗೆ ಈ ಹಿಂದೆಯೇ ನಿರ್ಣಯ ಕೈಗೊಳ್ಳಲಾಗಿದ್ದರೂ, ಇದನ್ನು ಅನುಷ್ಠಾನಕ್ಕೆ ತಾರದಿರುವ ಬಗ್ಗೆ ಸದಸ್ಯ ವಾಸುಪೂಜಾರಿಯವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸದಾಶಿವ ಬಂಗೇರ, ಪುರಸಭೆಗೆ ಆದಾಯ ಬರುವ ನಿಟ್ಟಿನಲ್ಲಿ ಶುಲ್ಕ ವಿಧಿಸಿ ಬ್ಯಾನರ್ ಹಾಕಲು ಅನುಮತಿ ನೀಡಬೇಕು, ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ಬ್ಯಾನರ್ ಹೊರತುಪಡಿಸಿ, ಎಲ್ಲಾ ಅನಧಿಕೃತ ಬ್ಯಾನರ್ ತೆರವುಗೊಳಿಸುವಂತೆ ಅವರು ಒತ್ತಾಯಿಸಿದರು.

ಪುರಸಭಾಸದಸ್ಯರಿಗೆ ಸರ್ಕಾರಿ ಸೌಲಭ್ಯ ಸಿಗದಿರುವ ಸರ್ಕಾರದ ನೀತಿಯ ಬಗ್ಗೆ ವ್ಯಾಪಕ ಚರ್ಚೆನಡೆಯಿತು. ಪುರಸಭಾ ಸದಸ್ಯೆ ಚಂಚಲಾಕ್ಷಿ ಯವರಿಗೆ ವಸತಿ ಯೋಜನೆಯಡಿ ಮನೆಮಂಜೂರು ಮಾಡುವುದಕ್ಕೆ ಜಿಲ್ಲಾಧಿಕಾರಿಯವರು ನೀಡಿರುವ ಆಕ್ಷೇಪಪತ್ರದ ಬಗ್ಗೆ ಸದಸ್ಯ ಪ್ರವೀಣ್ ಚರ್ಚೆ ಆರಂಭಿಸಿದರು. ಮುಖ್ಯಾಧಿಕಾರಿ ಲೀನಾಬ್ರಿಟ್ಟೋ ಇದಕ್ಕೆ ಪ್ರತಿಕ್ರಿಸಿ, ಜಿಲ್ಲಾಧಿಕಾರಿಯವರ ಸೂಚನೆಯಂತೆ ನಾವು ನಡೆದುಕೊಳ್ಳುತ್ತೇವೆ ಎಂದಾಗ ಸದಸ್ಯರೂ ಇದಕ್ಕೆಧ್ವನಿಗೂಡಿಸಿದರು. ಈ ಬಗ್ಗೆ ಆಕ್ಷೇಪಗಳಿದ್ದರೆ ಜಿಲ್ಲಾಧಿಕಾರಿ ಯವರೊಂದಿಗೆ ಚರ್ಚಿಸಲಿ ಅಥವಾ ಅವರ ಆದೇಶಕ್ಕೆ ಮೇಲ್ಮನವಿ ಸಲ್ಲಿಸಲಿ ಇದರ ಪ್ರತಿಯನ್ನೂ ಸದಸ್ಯರಿಗೆ ಒದಗಿಸಿ ಎಂದು ಸದಸ್ಯರಾದ ಸದಾಶಿವ ಬಂಗೇರ ಹಾಗೂ ಮಹಮ್ಮದ್ ನಂದರಬೆಟ್ಟು ಸಲಹೆ ನೀಡುವುದರೊಂದಿಗೆ ಚರ್ಚೆಗೆ ತೆರೆಬಿತ್ತು.
ಸದಸ್ಯರಾದ ಮಹಮ್ಮದ್ ಶರೀಫ್, ಜಗದೀಶ್ ಕುಂದರ್, ಗಂಗಾಧರ, ಬಿ.ಮೋಹನ್, ಮೊನಿಶ್ ಆಲಿ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಾಧಿಕಾರಿ ಲೀನಾ ಬ್ರಿಟ್ಟೋ, ಉಪಾಧ್ಯಕ್ಷೆ ಯಾಸ್ಮೀನ್ ವೇದಿಕೆಯಲ್ಲಿದ್ದರು.

Write A Comment