ಕರಾವಳಿ

ಗಂಗಾಧರ್ ಪಾಂಗಳ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ವಿರುದ್ಧ ಇನ್ನೊಂದು ಕೊಲೆ ಆರೋಪ : ಸತೀಶ್ ಬೈಕಂಪಾಡಿ ಸೆರೆ

Pinterest LinkedIn Tumblr

Sathish_Baikamady_arest1

ಮಂಗಳೂರು / ಸುರತ್ಕಲ್: ಮೋಗವೀರ ಸಮಾಜದ ಹಿರಿಯ ಮುಖಂಡ ಗಂಗಾಧರ್ ಪಾಂಗಳ್ ಅವರನ್ನು ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ ( ಈ ಪ್ರಕರಣದಲ್ಲಿ ಇವರಿಗೆ ಹೈ ಕೋರ್ಟ್ ನಿರೀಕ್ಷಣ ಜಾಮೀನು ನೀಡಿದೆ) ಇದೇ ರೀತಿಯಲ್ಲಿ ಒಂದೂವರೆ ವರ್ಷದ ಹಿಂದೆ ಕೂಡ ವಾಹನ ಡಿಕ್ಕಿ ಹೊಡೆಸಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿದ ಬಗ್ಗೆ ದೂರು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಮ್ಮಂದ ಪಟ್ಟಂತೆ ಸತೀಶ್ ಬೈಕಂಪಾಡಿ ಅವರನ್ನು ಸುರತ್ಕಲ್ ಪೊಲೀಸರು ಬುಧವಾರ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

2013ರ ಮೇ 14ರಂದು ಹೊಸಬೆಟ್ಟು ಬಳಿ ನಡೆದಿದ್ದ ಅಪಘಾತದಲ್ಲಿ ಬೈಕ್ ಸವಾರ ಧಾರವಾಡ ಮೂಲದ ಹೊಸಬೆಟ್ಟು ನಿವಾಸಿ ಬಸವರಾಜ್ (45) ಮೃತಪಟ್ಟಿದ್ದರು. ಇದನ್ನು ಸತೀಶ್ ಬೈಕಂಪಾಡಿ ಮತ್ತವನ ತಂಡವೇ ನಡೆಸಿದೆ ಎಂದು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ, ಹೊಸಬೆಟ್ಟು ಮೊಗವೀರ ಸಂಘದ ವತಿಯಿಂದ ಇತ್ತೀಚೆಗೆ ಪೊಲೀಸರಿಗೆ ದೂರು ನೀಡಲಾಗಿತ್ತು.

ಅಂದು ಬಸವರಾಜ್ ಜತೆಯಲ್ಲಿ ಬೈಕ್ ಹಿಂಬದಿಯಲ್ಲಿ ಹೊಸಬೆಟ್ಟು ಮೊಗವೀರ ಸಂಘದ ಆಧ್ಯಕ್ಷ ಗಂಗಾಧರ್ ಹೊಸಬೆಟ್ಟು ಸಂಚರಿಸುತ್ತಿದ್ದರು. ಗಂಗಾಧರ ಹೊಸಬೆಟ್ಟು ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹೊಸಬೆಟ್ಟು ಸಮೀಪ ಬೈಕ್‌ಗೆ ವಾಹನ ಡಿಕ್ಕಿ ಹೊಡೆಸಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಅದೃಷ್ಟವಶಾತ್ ಗಂಗಾಧರ ಹೊಸಬೆಟ್ಟು ಅಂದು ಗಾಯಗಳೊಂದಿಗೆ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಘಟನೆಯಲ್ಲಿ ಬೈಕ್ ಸವಾರ ಬಸವರಾಜ್ ಮೃತಪಟ್ಟಿದ್ದರು.

ಇದಾದ ಬಳಿಕ ಕಾಂಗ್ರೆಸ್ ಮುಖಂಡ ಗಂಗಾಧರ ಪಾಂಗಳ್ ಅವರನ್ನು ಇದೇ ವರ್ಷದ ಮೇ 4ರಂದು ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಸಂದರ್ಭ ಬೊಲೇರೋ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಆರೋಪ ಸತೀಶ್ ಬೈಕಂಪಾಡಿ ಮೇಲಿತ್ತು. ಈ ಘಟನೆ ನಡೆದ ಬಳಿಕ ಬಂಧನ ಭೀತಿಯಿಂದ ಸತೀಶ್ ಬೈಕಂಪಾಡಿ ಐದು ತಿಂಗಳುಗಳಿಂದ ತಲೆಮರೆಸಿಕೊಂಡಿದ್ದ. ಇತ್ತೀಚೆಗಷ್ಟೇ ಈ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಹಿನ್ನೆಲೆಯಲ್ಲಿ ಸತೀಶ್ ಹಾಗೂ ಇತರ ಆರೋಪಿಗಳು ಮಂಗಳವಾರ ಪಣಂಬೂರು ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸಿದ್ದರು.

ಇದೇ ವೇಳೆ ಮಂಗಳವಾರ ಪಣಂಬೂರು ಠಾಣೆ ಒಳಗಡೆ ವಿಚಾರಣೆ ನಡೆಯುತ್ತಿದ್ದಂತೇ ಹೊರಗಡೆ ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ, ಹೊಸಬೆಟ್ಟು ಮೊಗವೀರ ಸಂಘದ ನೂರಾರು ಮಂದಿ ಪ್ರತಿಭಟನೆ ನಡೆಸಿ ಈ ಹಿಂದೆ ನಡೆದಿದ್ದ ಬಸವರಾಜ್ ಕೊಲೆ ಪ್ರಕರಣದಲ್ಲೂ ಸತೀಶ್ ಬೈಕಂಪಾಡಿಯ ಕೈವಾಡವಿದ್ದು, ಆ ಪ್ರಕರಣದಲ್ಲೂ ವಿಚಾರಣೆ ನಡೆಸುವಂತೆ ಆಗ್ರಹಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದರು.

ಅಂದು ಬಸವರಾಜ್ ಜತೆಯಲ್ಲಿ ಬೈಕ್‌ನಲ್ಲಿದ್ದ ಗಂಗಾಧರ ಹೊಸಬೆಟ್ಟು ಅವರನ್ನು ಕೊಲ್ಲುವ ಉದ್ದೇಶದಿಂದಲೇ ಸತೀಶ್ ಬೈಕಂಪಾಡಿ ಮತ್ತು ಇತರರು ಈ ಅಪಘಾತ ನಡೆಸಿದ್ಡರು ಎಂದು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ, ಹೊಸಬೆಟ್ಟು ಮೊಗವೀರ ಸಂಘದ ವತಿಯಿಂದ ಪೊಲೀಸರಿಗೆ ದೂರು ನೀಡಲಾಗಿತ್ತು. ಆದರೆ ಪೊಲೀಸರು ಅಂದು ಅಪಘಾತವನ್ನು ಹಿಟ್ ಆ್ಯಂಡ್ ರನ್ ಎಂದು ತನಿಖೆಯನ್ನು ಮುಕ್ತಾಯಗೊಳಿಸಿ ಕೋರ್ಟ್‌ಗೆ ‘ಸಿ’ ರಿಪೋರ್ಟ್ ಸಲ್ಲಿಸಲಾಗಿತ್ತು.

ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿದ್ದರೆ ಗಂಗಾಧರ ಪಾಂಗಾಳ ಕೊಲೆಯಾಗುತ್ತಿರಲಿಲ್ಲ ಎಂದು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ, ಹೊಸಬೆಟ್ಟು ಮೊಗವೀರ ಸಂಘ ತಿಳಿಸಿತ್ತು. ಅಲ್ಲದೆ ಸತೀಶ್ ಬೈಕಂಪಾಡಿ ಜತೆಯಲ್ಲಿ ಇನ್ನೂ ಕೆಲವು ಆರೋಪಿಗಳಿದ್ದು, ಅವರೆಲ್ಲರ ಮೇಲೆ ಎಫ್‌ಐಆರ್ ದಾಖಲಿಸಿ ಬಂಧಿಸುವಂತೆ ಆಗ್ರಹಿಸಿದೆ.

ಬಸವರಾಜ್ ಸಾವು ಪ್ರಕರಣ ನಿಜವಾಗಿಯೂ ಕೊಲೆ ಎಂದು ಸಾಬೀತಾದರೆ ಸತೀಶ್ ಬೈಕಂಪಾಡಿ ಜತೆಯಲ್ಲಿ ಇನ್ನೂ ಹಲವು ಮಂದಿ ಬಂಧನವಾಗುವ ಸಾಧ್ಯತೆ ಇದೆ. ಅಪರಾಧ ವಿಭಾಗದ ಡಿಸಿಪಿ ವಿಷ್ಣುವರ್ಧನ್, ಎಸಿಪಿ ರವಿಕುಮಾರ್, ಠಾಣಾಧಿಕಾರಿ ಎಂ.ಎ.ನಟರಾಜ್, ಪಣಂಬೂರು ಠಾಣೆ ಇನ್‌ಸ್ಪೆಕ್ಟರ್ ಲೋಕೇಶ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಸತೀಶ್ ಬೈಕಂಪಾಡಿ ವಿರುದ್ಧ ಮೂರನೇ ಬಾರಿಗೆ ಇಂತಹ ಆರೋಪ ಕೇಳಿಬಂದಿದೆ. 2001ರಲ್ಲಿ ಉಡುಪಿ ಜಿಲ್ಲೆಯಲ್ಲಿ ವಾಹನ ಡಿಕ್ಕಿ ಹೊಡೆಸಿ ಕೊಲೆ ಮಾಡಿದ ಆರೋಪ ಈತನ ಮೇಲಿದೆ.

Write A Comment