ಮಂಗಳೂರು, ನ.6: ಸುಮಾರು ಒಂದೂವರೆ ವರ್ಷದ ಹಿಂದೆ ವೆಲೆನ್ಸಿಯಾ ಬಳಿಯಲ್ಲಿ ನಡೆದ ಪ್ರಶಾಂತ್ ಯಾನೆ ಪಚ್ಚು ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ವಿಕ್ಕಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
2013ರ ಮೇ 7ರಂದು ರಾತ್ರಿ ಸುಮಾರು 11:25 ಕ್ಕೆ ಮಂಗಳೂರು ನಗರದ ವೆಲೆನ್ಸಿಯಾ ಮಂಗಳಾ ಬಾರ್ ಸಮೀಪ ಕುಂಜತ್‌ಬೈಲ್‌ನ ಪ್ರಶಾಂತ್ ಯಾನೆ ಪಚ್ಚು ಎಂಬಾತನನ್ನು ವಿಕ್ಕಿ ಶೆಟ್ಟಿಯ ಸಹಚರರಾದ ಭವಾನಿಶಂಕರ, ನವೀನ್ ಶೆಟ್ಟಿ, ಪ್ರವೀಣ್, ಭವಿಷ್ ಮತ್ತು ಇತರರು ಸೇರಿ ತಲವಾರಿನಿಂದ ಕಡಿದು ಕೊಲೆ ಮಾಡಿದ್ದರು ಎಂಬ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು. ಪ್ರಕರಣದ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಆರೋಪಿಗಳ ಪೈಕಿ ಬೊಂದೇಲ್, ಕೆಎಚ್‌ಬಿ ಕಾಲನಿ ನಿವಾಸಿ ಜಯೇಶ್ ಯಾನೆ ಸಚ್ಚು (22) ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಯೇಶ್ ಪ್ರಸ್ತುತ ತಿರುವನಂತಪುರದ ವಳ್ಳಕಡವು ವಲಿಯತ್ತುರ, ಜರಿಕಲ್ ಫೆರ್ನಾಂಡಿಸ್ ಎಂಬವರ ಮನೆಯಲ್ಲಿ ವಾಸವಾಗಿದ್ದ ಎಂದು ತಿಳಿಸಲಾಗಿದೆ.
ಈತ ಕೇರಳದಲ್ಲಿರುವ ಖಚಿತ ಮಾಹಿತಿ ಪಡೆದ ಪೊಲೀಸರು ನ.3ರಂದು ಸಿಸಿಬಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಭವಾನಿಶಂಕರ, ನವೀನ್ ಶೆಟ್ಟಿ, ಪ್ರವೀಣ್.ಕೆ.ಪಿ, ಭವಿಷ್ ಪಕ್ಕಾಳ, ರಾಧಾಕೃಷ್ಣ ಶೆಟ್ಟಿ, ಗೌತಮ್ ಯಾನೆ ಗೌತು, ಶರಣ್ ಯಾನೆ ರೋಹಿದಾಸ್ ಆಕಾಶಭವನ ಶರಣ್ ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಜಯೇಶ್ ಯಾನೆ ಸಚ್ಚು 2011ರಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮರಕೂಟ್ಲು ಎಂಬಲ್ಲಿ ಬದ್ರುದ್ದೀನ್ ಎಂಬಾತನ ಕೊಲೆ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ 2013ರಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಮೇಲೆ ನ್ಯಾಯಾಲಯವು ವಾರಂಟ್ ಹೊರಡಿಸಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸಿ.ಸಿ.ಬಿ ಘಟಕದ ಇನ್ಸ್‌ಪೆಕ್ಟರ್ ವೆಲೆಂಟೈನ್ ಡಿಸೋಜ, ಪಿಎಸೈ ಶ್ಯಾಮ್‌ಸುಂದರ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.