ಮಂಗಳೂರು,ನ.06: ಗುರುನಾನನಕ್ ಜಯಂತಿ ಅಂಗವಾಗಿ ಮಂಗಳೂರಿನ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಉತ್ತರ ಭಾರತದ ವರ್ತಕರು ಶುದ್ಧ ಕುಡಿಯುವ ನೀರಿನ ಘಟಕವನ್ನು ಒದಗಿಸಿದ್ದಾರೆ. ಇದನ್ನು ಆಸ್ಪತ್ರೆಯ ಜಿಲ್ಲಾ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ 17 ಜಿಲ್ಲೆಗಳಿಂದ ರೋಗಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಇದರಿಂದ ಆಸ್ಪತ್ರೆಗೆ ಬರುವ ಜನರಿಗೆ ಕೂಡ ಅನುಕೂಲವಾಗಲಿದೆ. ಗುರುನಾನಕರ ಸಂದೇಶವನ್ನು ಈ ಮೂಲಕ ಜಾರಿಗೊಳಿಸಲಾಗದೆ. ಇದಕ್ಕಾಗಿ ಉತ್ತರ ಭಾರತದ ವರ್ತಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು. ಉತ್ತರ ಭಾರತ ವರ್ತಕ ಸಂಘದ ಪ್ರಮುಖರಾದ ಬಲ್ವೀಂದರ್ ಸಿಂಗ್ ಮಾತನಾಡಿ ಕುಡಿಯುವ ನೀರಿನ ಸೇವನೆಯಿಂದ ಉತ್ತಮ ಆರೋಗ್ಯ ಕಾಪಾಡಬಹುದಾಗಿದೆ.
ಇಂದು ದೇಶದಲ್ಲಿ ಲಕ್ಷಾಂತರ ಮಂದಿ ಶುದ್ಧ ಕುಡಿಯುವ ನೀರಿನಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಘ ಸಂಸ್ಥೆಗಳು ಶುದ್ದ ಕುಡಿಯುವ ನೀರಿನ ಘಟಕಗಳನ್ನು ಒದಗಿಸಲು ಮುಂದಾಗಬೇಕೆಂದು ಹೇಳಿದರು. ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ಅಗತ್ಯವಿರುವ ಸಹಾಯ ಹಸ್ತವನ್ನು ವರ್ತಕರು ನೀಡಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವರ್ತಕರಾದ ಶಿವಕುಮಾರ್ ಶರ್ಮ, ಅನಿಲ್ ಬೇಕಲ್, ಕಿಶೋರ್ ಪಟೇಲ್, ಮುರಳೀದರ್ ರಮಣಿ, ಕಿಶಾನ್ ಪುರೋಹಿತ್, ಕಿಶೋರ್ ಚಾವ್ಲ ಉಪಸ್ಥಿತರಿದ್ದರು.