ಮಂಗಳೂರು : ಬಸ್ ಪ್ರಯಾಣ ದರ ಇಳಿಸುವಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಯುವಮೋರ್ಚ ದ.ಕ ಜಿಲ್ಲಾ ಸಮಿತಿಯು ಶೀಘ್ರದಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳ ಪ್ರಯಾಣ, ಮಾಸಿಕ ಪಾಸ್ ಹಾಗೂ ವಿದ್ಯಾರ್ಥಿ ಪಾಸ್ ದರವನ್ನು ಕಡಿತ ಮಾಡಿ ಸಾರ್ವಜನಿಕರ ಸಂಕಷ್ಟ ನಿವಾರಿಸುವಂತೆ ಅಗ್ರಹಿಸಿ ದ.ಕ.ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.
ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡೀಸಿಲ್ ಸೇರಿದಂತೆ ಪೆಟ್ರೋಲ್ ಉತ್ಪನ್ನಗಳ ಬೆಲೆಯಲ್ಲಿ ಗಮನಾರ್ಹವಾದ ಇಳಿಕೆ ಕಂಡಿದ್ದು ಬೆಲೆ ಏರಿಕೆಯ ಬವಣೆಯಿಂದ ಬಸವಳಿದಿದ್ದ ಜನಸಾಮಾನ್ಯರು ನಿಟ್ಟುಸಿರು ಬಿಡುವಂತಾಗಿದೆ.
2014ರ ಆಗಸ್ಟ್ ತಿಂಗಳಿನಿಂದ ಈ ದಿನದ ವರೆಗೆ ಪ್ರತಿ ಲೀ. ಡೀಸಿಲ್ ಬೆಲೆಯಲ್ಲಿ ರೂ. 6.00ರ ಇಳಿಕೆಯಾಗಿದೆ. ಆದರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳನ್ನೇ ತಮ್ಮ ದಿನನಿತ್ಯದ ಸಂಚಾರಕ್ಕಾಗಿ ಅವಲಂಬಿಸಿರುವ ವಿದ್ಯಾರ್ಥಿ ಸಮೂಹ ಹಾಗೂ ಜನ ಸಾಮಾನ್ಯರು ಡೀಸಿಲ್ ಬೆಲೆಯಲ್ಲಾಗಿರುವ ಇಳಿಕೆ ಲಾಭವನ್ನು ಪಡೆಯದೆ ಈ ಹಿಂದಿನ ದುಬಾರಿ ಪ್ರಯಾಣದರವನ್ನು ನೀಡಿ ಸಂಚರಿಸುವಂತಾಗಿದೆ.
ಡೀಸಿಲ್ ಬೆಲೆಯಲ್ಲಾಗಿರುವ ಇಳಿಕೆಯ ಲಾಭವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳಲ್ಲಿ ಪ್ರಯಾಣಿಸುವವರಿಗೆ ತಲುಪಿಸುವಲ್ಲಿ ಸಾರಿಗೆ ಇಲಾಖೆಯ ಯಾವುದೆ ಪ್ರಯತ್ನ ಕಂಡುಬರುತ್ತಿಲ್ಲ ಹಾಗೂ ಈ ವಿಚಾರದ ಬಗೆಗಿನ ಜನರ ನ್ಯಾಯಯುತ ಬೇಡಿಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಸಾರಿಗೆ ಸಚಿವ ಶ್ರೀ ರಾಮಲಿಂಗ ರೆಡ್ಡಿಯವರ ಹೇಳಿಕೆ ಖಂಡನಾರ್ಹವಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮಾತ್ರವಲ್ಲದೇ ಶೀಘ್ರದಲ್ಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಾಗೂ ಖಾಸಗಿ ಬಸ್ಸುಗಳ ಪ್ರಯಾಣ, ಮಾಸಿಕ ಪಾಸ್ ಹಾಗೂ ವಿದ್ಯಾರ್ಥಿ ಪಾಸ್ ದರವನ್ನು ಕಡಿತ ಮಾಡಿ ಜನರ ಬವಣೆಯನ್ನು ನಿವಾರಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ದ.ಕ ಖಾಸಗಿ ಬಸ್ಸು, ಸಂಘಗಳನ್ನು ಬಿಜೆಪಿ ಯುವಮೋರ್ಚ ದ.ಕ ಜಿಲ್ಲಾ ಸಮಿತಿಯು ಒತ್ತಾಯಿಸಿದೆ.