ಮಂಗಳೂರು : ಸೌಹಾರ್ದ ಕಲಾವಿದರು ಕುತ್ತಾರು ಹಾಗೂ ಶ್ರೀ ಜೈ ಹನುಮಾನ್ ಕ್ರೀಡಾಮಂಡಳಿ ಬಟ್ಟೆದಡಿ ಇದರ ಜಂಟಿ ಸಹಯೋಗದಲ್ಲಿ “ಮುನ್ನೂರು ಗ್ರಾಮಡೊಂಜಿ ಗೌಜಿ” ಕಾರ್ಯಕ್ರಮ ನವೆಂಬರ್ 9ರಂದು ದೆಪ್ಪೆಲಿಮಾರು ಗದ್ದೆಯಲ್ಲಿ ನಡೆಯಲಿದ್ದು, ಭರದ ಸಿದ್ಧತೆ ನಡೆಯುತ್ತಿದೆ.
ಮಾನಸಿಕ ಆರೋಗ್ಯದಲ್ಲಿ ಪ್ರಮುಖ ಪಾತ್ರ ವಹಿಸುವ ಕ್ರೀಡೆಗೆ ಯುವಜನರನ್ನು ಜಾತಿ, ಧರ್ಮ, ಭಾಷೆ, ಗಡಿಯ ಎಲ್ಲೆಯನ್ನು ಮೀರಿ ಒಗ್ಗೂಡಿಸುವ ಸಾಮರ್ಥ್ಯವಿದೆ. ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿ , ಸಮಾಜದ ಆಗುಹೋಗುಗಳಲ್ಲಿ ಪ್ರಮುಖ ಪಾತ್ರ ವಹಿಸುವ ಯುವಜನತೆಯನ್ನು ಕ್ರೀಡಾಕೂಟದ ಮೂಲಕ ಒಗ್ಗೂಡಿಸಿ ಸೌಹಾರ್ದ ವಾತಾವರಣವನ್ನು ಸೃಷ್ಟಿಸುವ ಕೆಲಸ ಸಮಂಜಸವಾಗಿ ನಡೆಯುತ್ತಿಲ್ಲ. ವಿವಿಧ ಕಾರಣಗಳಿಂದ ಅವರನ್ನು ಕಡೆಗಣಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಗೃತಿ ಮೂಡಿಸುವ ಸಲುವಾಗಿ, ಜನಪದೀಯ ಇತಿಹಾಸವುಳ್ಳ ಗ್ರಾಮೀಣ ಕ್ರೀಡೆಗಳನ್ನು ಉಳಿಸುವ, ಗ್ರಾಮೀಣ ಸಂಸ್ಕೃತಿ, ಇತಿಹಾಸವನ್ನು ಸಾರುವ ಸಲುವಾಗಿ ಮತ್ತು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಗ್ರಾಮಡೊಂಜಿ ಗೌಜಿ ಕಾರ್ಯಕ್ರಮ ನಡೆಯಲಿದೆ.
ಗೌಜಿಯಲ್ಲಿ ವಿಶೇಷ ಆಕರ್ಷಣೆಯಾಗಿ ಮನರಂಜನೆಗಾಗಿ ಕೋಣಗಳ ಓಟ, ಗ್ರಾಮೀಣ ಬದುಕಿನ ವಸ್ತುಪ್ರದರ್ಶನ ನಡೆಯಲಿದೆ. ಕ್ರೀಡಾಕೂಟದಲ್ಲಿ ಕೆಸರಿನಲ್ಲಿ ಓಟ, ಕೆಸರಿನಲ್ಲಿ ಮೂರು ಕಾಲು ಓಟ, ಮೀನು ಹಿಡಿಯುವುದು, ಕೆಸರಿನಲ್ಲಿ ಮಡಕೆ ಒಡೆಯುವುದು , ಚಮಚದಲ್ಲಿ ಲಿಂಬೆ, ಸೋಗೆ ಎಳೆಯುವುದು, ಅಕ್ಕಿಮುಡಿ ಕಟ್ಟುವುದು, ಬೈಹುಲ್ಲಿನಲ್ಲಿ ಹಗ್ಗ ತಯಾರಿ, ತೆಂಗಿನ ಗರಿಯಿಂದ ಆಕೃತಿ ರಚನೆ, ಮಣ್ಣಿನಿಂದ ಆಕೃತಿ ರಚನೆ, ಬುಟ್ಟಿ ಹೆಣೆಯುವುದು, ತೆಂಗಿನ ಗರಿ ಹೆಣೆಯುವುದು, ನಿಧಿ ಶೋಧ ವೈಯಕ್ತಿಕ ವಿಭಾಗದಲ್ಲಿ ನಡೆದರೆ, ತಂಡ ವಿಭಾಗದಲ್ಲಿ ಹಗ್ಗ-ಜಗ್ಗಾಟ, ಕೆಸರಿನಲ್ಲಿ ಚೆಂಡೆಸತ, ಕೆಸರಿನಲ್ಲಿ ರಿಲೆ ಆಟೋಟಗಳು ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.