ಉಡುಪಿ : ಶ್ರೀಲಂಕಾ ಪ್ರಧಾನಿ ಡಿ.ಎಂ. ಜಯರತ್ನೆ ಅವರು ನ. 8ರಂದು ಮಣಿಪಾಲ ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಪಾಲೊಳ್ಳಲಿದ್ದಾರೆ. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಪೊಲೀಸರು ಭಾರಿ ಕಟ್ಟೆಚ್ಚರ ವಹಿಸಿದ್ದಾರೆ. ಪ್ರಧಾನಿಗೆ ಬೆದರಿಕೆ ಇರುವುದರಿಂದ ಭದ್ರತಾ ದೃಷ್ಟಿಯಿಂದ ಮಂಗಳೂರು ವಿಮಾನ ನಿಲ್ದಾಣದಿಂದ ಮಣಿಪಾಲದ ವರೆಗೂ ಪೊಲೀಸರು ವಿಶೇಷ ಭದ್ರತೆ ಕಲ್ಪಿಸುತ್ತಿದ್ದಾರೆ.
ಎಲ್ಲೆಡೆ ನಿಗಾ, ಪೊಲೀಸರ ನಿಯೋಜನೆ; ಉಡುಪಿ ಜಿಲ್ಲೆಯಲ್ಲಿ ಭದ್ರತೆಗೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಚಿಕ್ಕಮಗಳೂರು, ಕಾರವಾರ ಜಿಲ್ಲೆಗಳಿಂದ ಹೆಚ್ಚುವರಿಯಾಗಿ ಪೊಲೀಸ್ ಸಿಬಂದಿ ಕರೆಸಿಕೊಳ್ಳಲಾಗಿದೆ ಎಂದು ಎಸ್‌ಪಿ ಪಿ. ರಾಜೇಂದ್ರ ಪ್ರಸಾದ್ ಹೇಳಿದ್ದಾರೆ.
ನ. 8ರ ಬೆಳಗ್ಗೆ ಶ್ರೀಲಂಕಾ ಪ್ರಧಾನಿ ಡಿ.ಎಂ. ಜಯರತ್ನೆ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ. ಅಲ್ಲಿಂದ ಅವರು ಮಣಿಪಾಲಕ್ಕೆ ಸಾಗುವ ಹೆದ್ದಾರಿಯುದ್ದಕ್ಕೂ ಭಾರೀ ಭದ್ರತೆ ನೀಡಲಾಗುತ್ತದೆ. ಪ್ರಧಾನಿಯವರು ಸಾಗುವ ರಾಷ್ಟ್ರೀಯ ಹೆದ್ದಾರಿಗೆ ಮುಖ ಮಾಡಿರುವ ಹೊಟೇಲ್ ಲಾಡ್ಜ್ ಕೋಣೆಗಳ ಕಿಟಕಿಗಳನ್ನು ಮುಚ್ಚಲು ಸೂಚಿಸಲಾಗಿದೆ. ಹೆದ್ದಾರಿ ಬದಿಯಲ್ಲಿ ವಾಹನಗಳು ಪಾರ್ಕ್ ಮಾಡದಂತೆ ನೋಡಿಕೊಳ್ಳಲಾಗುವುದು. ಎತ್ತರದ ಕಟ್ಟಡಗಳಲ್ಲಿಯೂ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ಎಸ್‌ಪಿ ಹೇಳಿದ್ದಾರೆ.
ಎಸ್‌ಪಿಯವರ ಆದೇಶದಂತೆ ಆಯಾ ಠಾಣೆಗಳ ಉಪನಿರೀಕ್ಷಕರು ಈಗಾಗಲೇ ಅವರವರ ವ್ಯಾಪ್ತಿಯಲ್ಲಿರುವ ಹೊಟೇಲ್ ಲಾಡ್ಜ್ ಕೋಣೆಗಳ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದಾರೆ ಹಾಗೂ ಬೃಹತ್ ಕಟ್ಟಡ ಮೊದಲಾದ ಸೂಕ್ಷ್ಮ ಪ್ರದೇಶಗಳ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿದುಬಂದಿದೆ.